ಹಬ್ಬಗಳ ಸಂಭ್ರಮದಲ್ಲಿ ಬೆಳಗಾವಿಗೆ ದೇಶದಲ್ಲೇ ಸಾಟಿಯಿಲ್ಲ'-ಅಭಯ
ಗಣೇಶೋತ್ಸವದಿಂದ ಹೋಳಿವರೆಗೆ ನಿರಂತರ ಸಾಂಸ್ಕೃತಿಕ ಸಡಗರ; ‘ವಿಸರ್ಜನೆಯಲ್ಲಿ ಕೊನೆಯವರಾಗಲು ಅಲ್ಲ, ಮೊದಲಿಗರಾಗಲು ಪೈಪೋಟಿ ನಡೆಸಿ’ ಎಂದ ಅಭಯ ಪಾಟೀಲ
ಬೆಳಗಾವಿ:
'ಗಣೇಶೋತ್ಸವ, ಶಿವಜಯಂತಿ, ದಾಂಡಿಯಾ, ದುರ್ಗಾಮಾತಾ ದೌಡ್, ದೀಪಾವಳಿ, ಗಾಳಿಪಟ ಉತ್ಸವ ಹಾಗೂ ಹೋಳಿ ಹೀಗೆ ವರ್ಷವಿಡೀ ಹಬ್ಬಗಳನ್ನು ವೈಭವದಿಂದ ಆಚರಿಸುವ ಬೆಳಗಾವಿಯಂತಹ ಮತ್ತೊಂದು ನಗರ ದೇಶದಲ್ಲೇ ಸಿಗುವುದು ಅಪರೂಪ' ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಳಗಾವಿಯ ಸಾಂಸ್ಕೃತಿಕ ಪರಂಪರೆ ಮತ್ತು ಸಾಮರಸ್ಯವನ್ನು ಬಣ್ಣಿಸಿದರು.

'
ಕರ್ನಾಟಕದಲ್ಲೇ ಅತ್ಯಂತ ಅದ್ದೂರಿಯಾದ ಗಣೇಶೋತ್ಸವವನ್ನು ನೋಡಬೇಕಾದರೆ ಬೆಳಗಾವಿಗೆ ಬರಬೇಕು. ದೇಶದ ಅತ್ಯಂತ ವೈಭವದ ಶಿವಜಯಂತಿಗೂ ಬೆಳಗಾವಿಯೇ ಸಾಕ್ಷಿ. ನವರಾತ್ರಿಯ ಸಂದರ್ಭದಲ್ಲಿ ನಡೆಯುವ ದಾಂಡಿಯಾದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ರಾಜ್ಯದ ಬೇರೆಲ್ಲಿಯೂ ಕಾಣಸಿಗದು. ದುರ್ಗಾ ಮಾತಾ ದೌಡ್ನಲ್ಲಿ 15ರಿಂದ 20 ಸಾವಿರ ಯುವಕ ಯುವತಿಯರು ಪಾಲ್ಗೊಳ್ಳುತ್ತಾರೆ. ಇಲ್ಲಿ ಒಂದು ಹಬ್ಬ ಮುಗಿಯುತ್ತಿದ್ದಂತೆಯೇ ಮತ್ತೊಂದು ಉತ್ಸವ ಆರಂಭವಾಗುತ್ತದೆ' ಎಂದರು.

'ವಿವಿಧ ಭಾಷೆ, ಜಾತಿ ಮತ್ತು ಸಮುದಾಯಗಳಿಗೆ ಸೇರಿದ ಜನರು ಒಂದಾಗಿ ಹಬ್ಬಗಳನ್ನು ಆಚರಿಸುವುದೇ ಬೆಳಗಾವಿಯ ವಿಶೇಷ.
ಇಂತಹ ಬೃಹತ್ ಉತ್ಸವಗಳನ್ನು ಶಾಂತಿ ಮತ್ತು ಶಿಸ್ತಿನಿಂದ ನಡೆಸಲು ಸಾರ್ವಜನಿಕರು, ಉತ್ಸವ ಮಂಡಳಿಗಳು, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಪರಸ್ಪರ ಸಹಕರಿಸಬೇಕು.
ಶಾಸಕ ಅಭಯಗೆ ಸನ್ಮಾನ

ಜನರಿಗೆ ತೊಂದರೆಯಾಗದಂತೆ ಕೆಲವೊಮ್ಮೆ ನಾವೂ ಒಂದೆರಡು ಹೆಜ್ಜೆ ಹಿಂದೆ ಸರಿದು ಆಡಳಿತದ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ' ಎಂದು ಕಿವಿಮಾತು ಹೇಳಿದರು.
ಗಣೇಶ ಮೂರ್ತಿಗಳ ವಿಸರ್ಜನೆ ವಿಳಂಬವಾಗುತ್ತಿರುವುದನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತಾಪಿಸಿದ ಅವರು, 'ನಮ್ಮ ಮಂಡಳಿಯೇ ಕೊನೆಯದಾಗಿ ವಿಸರ್ಜನೆ ಮಾಡಬೇಕು ಎಂಬ ಪ್ರತಿಷ್ಠೆ ಬೇಡ. ಶಾಲೆಯಲ್ಲಿ ಮೊದಲ ಸ್ಥಾನಕ್ಕೆ ಮಹತ್ವವಿದೆಯೋ ಅಥವಾ ಕೊನೆಯ ಸ್ಥಾನಕ್ಕೋ?' ಎಂದು ಸಭಿಕರನ್ನು ಪ್ರಶ್ನಿಸಿದರು. ಇದಕ್ಕೆ ಸಭಿಕರು 'ಮೊದಲ ಸ್ಥಾನ' ಎಂದು ಒಕ್ಕೊರಲಿನಿಂದ ಪ್ರತಿಕ್ರಿಯಿಸಿದರು.

'
ಹಾಗಾದರೆ, ವಿಸರ್ಜನೆಯಲ್ಲೂ ಕೊನೆಯವರಾಗಲು ಅಲ್ಲ; ಮೊದಲಿಗರಾಗಲು ಮಂಡಳಿಗಳ ನಡುವೆ ಆರೋಗ್ಯಕರ ಪೈಪೋಟಿ ನಡೆಯಲಿ. ಮುಂದಿನ ವರ್ಷ ಯಾವ ಮಂಡಳಿಯ ಗಣಪತಿ ಮೊದಲು ವಿಸರ್ಜನೆಯಾಗುತ್ತದೆ ಎಂಬ ಸ್ಪರ್ಧೆ ಏರ್ಪಡಲಿ ಎಂದು ಗಣೇಶನಲ್ಲಿ ಪ್ರಾರ್ಥಿಸೋಣ' ಎಂದು ಹೇಳುತ್ತಿದ್ದಂತೆಯೇ ಸಭೆಯಲ್ಲಿ ನಗೆ ಮತ್ತು ಚಪ್ಪಾಳೆ ಮೊಳಗಿದವು.
--
ಸಾಮಾಜಿಕ ಬದ್ಧತೆಯೇ ಜೀವಾಳ'.

'ಕಳೆದ 122 ವರ್ಷಗಳಿಂದ ನಡೆದುಕೊಂಡು ಬಂದಿರುವ ಬೆಳಗಾವಿಯ ಸಾರ್ವಜನಿಕ ಗಣೇಶೋತ್ಸವ ಕೇವಲ ಧಾಮರ್ಿಕ ಆಚರಣೆಯಲ್ಲ; ಭಾಷೆ, ಜಾತಿ ಮತ್ತು ಧರ್ಮದ ಗಡಿ ಮೀರಿದ ವಿಶಿಷ್ಟ ಸಾಂಸ್ಕೃತಿಕ ಜನೋತ್ಸವವಾಗಿದೆ' ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
'ಬೆಳಗಾವಿಯ ಎಲ್ಲ ಭಾಷಿಕರು ಮತ್ತು ಎಲ್ಲ ಸಮುದಾಯದ ಜನರು ಗಣೇಶೋತ್ಸವದಲ್ಲಿ ಪಾಲ್ಗೊಂಡು, ಇದನ್ನು ತಮ್ಮದೇ ಹಬ್ಬವೆಂದು ಸಂಭ್ರಮಿಸುತ್ತಾರೆ. ಈ ಸಾಮರಸ್ಯವೇ ಬೆಳಗಾವಿ ಗಣೇಶೋತ್ಸವದ ನಿಜವಾದ ವೈಶಿಷ್ಟ್ಯ' ಎಂದರು.

'
ಗಣೇಶೋತ್ಸವವು ಕೇವಲ 11 ದಿನಗಳ ಪೂಜೆ ಮತ್ತು ಸಂಭ್ರಮಕ್ಕೆ ಸೀಮಿತವಾಗಿಲ್ಲ. ನಗರದ ಪ್ರತಿಯೊಂದು ಸಾರ್ವಜನಿಕ ಗಣೇಶೋತ್ಸವ ಮಂಡಳವೂ ವಿಭಿನ್ನ ರೀತಿಯ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸಮಾಜದ ಮೇಲಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಹೀಗಾಗಿ ಈ ಉತ್ಸವವು ಸಾಮಾಜಿಕ ಬದ್ಧತೆಯ ಪ್ರತೀಕವಾಗಿಯೂ ಬೆಳೆದಿದೆ' ಎಂದು ಅಭಿಪ್ರಾಯಪಟ್ಟರು.
ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ನೇತೃತ್ವದ ಪೊಲೀಸ್ ತಂಡ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನಗರ ಸೇವಕರ ಕಾರ್ಯವನ್ನು ಕವಟಗಿಮಠ ಶ್ಲಾಘಿಸಿದರು.
'ಬೆಳಗಾವಿಯ ಗಣೇಶೋತ್ಸವದ ವೈಭವ, ಶಿಸ್ತು ಮತ್ತು ಸಾಮರಸ್ಯ ಉಳಿಸುವಲ್ಲಿ ಗಣೇಶ ಭಕ್ತರು, ವಿವಿಧ ಮಂಡಳಗಳು ಹಾಗೂ ಆಡಳಿತ ವ್ಯವಸ್ಥೆಯ ಕೊಡುಗೆ ಅಪಾರವಾಗಿದೆ' ಎಂದು ಹೇಳಿದ ಅವರು, ಎಲ್ಲ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳು ಮತ್ತು ಭಕ್ತರಿಗೆ ಅಭಿನಂದನೆ ಸಲ್ಲಿಸಿದರು.
ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಮ್, ಪಾಲಿಕೆ ಆಯುಕ್ತ ಕಾರ್ತಿಕ ಎಂ, ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ಮುಂತಾದವರು ಮಾತನಾಡಿದರು.




Comments