;
top of page

ಅಭಯಗೆ ಹೊಸ ಹೊಣೆ; ಗಣ್ಯರಿಂದ ಆತ್ಮೀಯ ಸನ್ಮಾನ

Writer: vilas joshi
vilas joshi
6 hours ago
1 min read

ಗಡಿ ದಾಟಿದ ಅಭಯ ಸಂಘಟನೆ; ತೆಲಂಗಾಣದಲ್ಲಿ ‘ಕಮಲ’ ಅರಳಿಸುವ ಹೊಣೆ.


ಬೆಳಗಾವಿಯಿಂದ ತೆಲಂಗಾಣದವರೆಗೆ ಅಭಯ ಸಂಘಟನಾ ಶಕ್ತಿ.


ತೆಲಂಗಾಣದಲ್ಲಿ ಕಮಲ ಅರಳಿಸಲು ಅಭಯ ಹೆಜ್ಜೆ


ಬೆಳಗಾವಿ:

ತೆಲಂಗಾಣ ರಾಜ್ಯದ ಬಿಜೆಪಿ ಸಹ ಉಸ್ತುವಾರಿಯಾಗಿ ಮಹತ್ವದ ಹೊಣೆ ವಹಿಸಿಕೊಂಡಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನಗರದ ಬಿಜೆಪಿ ಮುಖಂಡರು ಹಾಗೂ ಜನಪ್ರತಿನಿಧಿಗಳು ಆತ್ಮೀಯವಾಗಿ ಸನ್ಮಾನಿಸಿದರು.



ಮಾಜಿ ಮೇಯರ್‌ ಶೋಭಾ ಸೋಮನಾಚೆ, ಮಾಜಿ ಉಪಮೇಯರ್‌ ವಾಣಿ ಜೋಶಿ, ನಗರಸೇವಕಿ ನೇತ್ರಾವತಿ ಭಾಗವತ್‌ ಸೇರಿದಂತೆ ಪಕ್ಷದ ಮುಖಂಡರು ಅಭಯ ಪಾಟೀಲ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.



ತಳಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸುವುದು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಸುವುದು ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿ ಅಭಯ ಪಾಟೀಲ ಹೊಂದಿರುವ ಅನುಭವವನ್ನು ಪರಿಗಣಿಸಿ ಬಿಜೆಪಿ ವರಿಷ್ಠರು ಅವರಿಗೆ ತೆಲಂಗಾಣದಂತಹ ಮಹತ್ವದ ರಾಜ್ಯದ ಜವಾಬ್ದಾರಿ ನೀಡಿದ್ದಾರೆ.



ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸಂಘಟನೆಯನ್ನು ಸದೃಢಗೊಳಿಸಿದ ಅವರ ಕಾರ್ಯವೈಖರಿ ಈಗ ರಾಜ್ಯದ ಗಡಿ ದಾಟಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು.

‘ತೆಲಂಗಾಣದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ವಿಸ್ತರಿಸುವುದರ ಜೊತೆಗೆ, ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುವ ಸಾಮರ್ಥ್ಯ ಅಭಯ ಪಾಟೀಲ ಅವರಿಗಿದೆ. ಅವರಿಗೆ ಲಭಿಸಿರುವ ಈ ಹೊಣೆ ಬೆಳಗಾವಿಯ ಬಿಜೆಪಿ ಕಾರ್ಯಕರ್ತರಿಗೂ ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಅಭಯ ಪಾಟೀಲ, ಪಕ್ಷದ ವರಿಷ್ಠರು ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ತಿಳಿಸಿದರು. ತೆಲಂಗಾಣದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸುವುದಾಗಿ ಹೇಳಿದರು.

 
 
 

Comments


bottom of page