;
top of page

ಎಥನಾಲ್‌ ವಿವಾದ: ರಿಜ್ವಾನ್‌ಗೆ ಜೋಶಿ ತಿರುಗೇಟು

Writer: vilas joshi
vilas joshi
10 minutes ago
1 min read

‘ಪೆಟ್ರೋಲ್‌ನಲ್ಲಿ ಶೇ 26–31 ಎಥನಾಲ್‌’ ಹೇಳಿಕೆಗೆ ಆಕ್ಷೇಪ |


 ಕರ್ನಾಟಕದ 56 ಮಾದರಿಗಳಲ್ಲಿ ಸರಾಸರಿ ಶೇ 19.30 ಮಿಶ್ರಣ ಎಂದ ಕೇಂದ್ರ ಸಚಿವ


ಹುಬ್ಬಳ್ಳಿ.

ಪೆಟ್ರೋಲ್‌ನಲ್ಲಿ ಶೇ 26ರಿಂದ 31ರಷ್ಟು ಎಥನಾಲ್‌ ಮಿಶ್ರಣವಾಗಿದೆ ಎಂಬ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿ ತೈಲ ಕಂಪನಿಗಳು ಪರೀಕ್ಷಿಸಿದ ಎಲ್ಲ 56 ಮಾದರಿಗಳಲ್ಲೂ ಎಥನಾಲ್ ಪ್ರಮಾಣ ಶೇ 19ರಿಂದ 20ರ ಮಿತಿಯಲ್ಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ರಾಜ್ಯದ ಪರೀಕ್ಷೆಯಲ್ಲಿ ಇದಕ್ಕಿಂತ ಹೆಚ್ಚಿನ ಪ್ರಮಾಣ ದಾಖಲಾಗಿದ್ದರೆ, ಅದಕ್ಕೆ ಆಧಾರವಾದ ಸಂಪೂರ್ಣ ವರದಿಯನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.


27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 893 ಮಾದರಿಗಳೂ ನಿಗದಿತ ಶೇ 19ರಿಂದ 21ರ ಮಿತಿಯಲ್ಲಿವೆ. ಕರ್ನಾಟಕದಲ್ಲಿ ತೈಲ ಮಾರಾಟ ಕಂಪನಿಗಳು ಪರೀಕ್ಷಿಸಿದ ಮಾದರಿಗಳಲ್ಲಿ ಸರಾಸರಿ ಶೇ 19.30ರಷ್ಟು ಎಥನಾಲ್‌ ದಾಖಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

 ಮಾದರಿ ಸಂಗ್ರಹದಿಂದ ಮರುಪರೀಕ್ಷೆವರೆಗೆ ಪ್ರಶ್ನೆ 

ರಾಜ್ಯ ಸರ್ಕಾರ ಉಲ್ಲೇಖಿಸಿರುವ ಪ್ರಮಾಣಪತ್ರಗಳಲ್ಲಿ ಗ್ಯಾಸ್‌ ಕ್ರೊಮ್ಯಾಟೋಗ್ರಫಿ ಮೂಲಕ ಎಥನಾಲ್ ಪ್ರಮಾಣ ಅಳೆಯಲಾಗಿದೆ ಎಂದು ನಮೂದಿಸಲಾಗಿದೆ. ಆದರೆ, ಅನುಸರಿಸಿದ ಪರೀಕ್ಷಾ ವಿಧಾನ, ಉಪಕರಣದ ಮಾಪನಾಂಕ ಮತ್ತು ಹೋಲಿಕೆಗೆ ಬಳಸಿದ ಪ್ರಮಾಣಿತ ಮಾದರಿಯ ವಿವರಗಳಿಲ್ಲ ಎಂದು ಜೋಶಿ ಆಕ್ಷೇಪಿಸಿದ್ದಾರೆ. ಪರೀಕ್ಷೆ ನಡೆಸಿದ ಪ್ರಯೋಗಾಲಯಗಳು ಗೆಜೆಟ್‌ನ ‘ಶೆಡ್ಯೂಲ್‌ 3’ ಅಡಿ ಅಧಿಸೂಚಿಸಿದ ಪಟ್ಟಿಯಲ್ಲಿ ಇಲ್ಲ ಎಂದೂ ಹೇಳಿದ್ದಾರೆ.


ರಾಜ್ಯ ಉಲ್ಲೇಖಿಸಿದ ಮಾದರಿಗಳ ಸಾಂದ್ರತೆ ಪ್ರತಿ ಘನ ಸೆಂಟಿಮೀಟರ್‌ಗೆ 0.742ರಿಂದ 0.749 ಗ್ರಾಂ ಇದ್ದರೆ, ತೈಲ ಕಂಪನಿಗಳು ಪರೀಕ್ಷಿಸಿದ E20 ಮಾದರಿಗಳಲ್ಲಿ ಅದು 0.752ರಿಂದ 0.760 ಗ್ರಾಂ ಇತ್ತು. ಸಾಂದ್ರತೆಯೊಂದರಿಂದಲೇ ಎಥನಾಲ್ ಪ್ರಮಾಣ ನಿರ್ಧರಿಸಲಾಗದು. ಮಾದರಿಗಳನ್ನು ಹೇಗೆ ಸಂಗ್ರಹಿಸಲಾಯಿತು, ಮರುಪರೀಕ್ಷೆಗೆ ಪ್ರತಿಮಾದರಿಗಳನ್ನು ಕಾಯ್ದಿರಿಸಲಾಗಿದೆಯೇ ಎಂಬುದನ್ನು ಸರ್ಕಾರ ತಿಳಿಸಲಿ. ಅವು ಲಭ್ಯವಿದ್ದರೆ ಅಧಿಸೂಚಿತ ಪ್ರಯೋಗಾಲಯಗಳಲ್ಲಿ ಮರುಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಿ ಎಂದು ಒತ್ತಾಯಿಸಿದ್ದಾರೆ.


 

ಹೆಚ್ಚಿನ ಹಂಚಿಕೆ ಕೇಳಿರುವ ರಾಜ್ಯದ ನಿಲುವೇನು? 

ಇಂಧನದ ಗುಣಮಟ್ಟದ ವಿವಾದದ ಜತೆಗೆ ಕಬ್ಬು ಬೆಳೆಗಾರರ ಪ್ರಶ್ನೆಯನ್ನೂ ಜೋಶಿ ಮುಂದಿಟ್ಟಿದ್ದಾರೆ. 2025–26ರಲ್ಲಿ ಕರ್ನಾಟಕದ ಡಿಸ್ಟಿಲರಿಗಳಿಗೆ 165.89 ಕೋಟಿ ಲೀಟರ್‌ ಎಥನಾಲ್‌ ಪೂರೈಕೆಯ ಹಂಚಿಕೆ ನೀಡಲಾಗಿತ್ತು. ಅದರಲ್ಲಿ 97.54 ಕೋಟಿ ಲೀಟರ್‌ ಕಬ್ಬು ಆಧಾರಿತ ಕಚ್ಚಾವಸ್ತುಗಳಿಂದ ಉತ್ಪಾದಿಸುವ ಎಥನಾಲ್‌ಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ.


ಕರ್ನಾಟಕ ತನ್ನ ಸಕ್ಕರೆ ಉದ್ಯಮಕ್ಕೆ ಹೆಚ್ಚಿನ ಎಥನಾಲ್‌ ಹಂಚಿಕೆ ಕೇಳಿದೆ. ಈಗ ಸರ್ಕಾರದ ಆಕ್ಷೇಪ ಮಿಶ್ರಣ ಕಾರ್ಯಕ್ರಮದ ಬಗ್ಗೆಯೇ ಅಥವಾ ನಿರ್ದಿಷ್ಟ ಮಾದರಿಗಳಲ್ಲಿ ಎಥನಾಲ್‌ ಪ್ರಮಾಣ ಮಿತಿ ಮೀರಿದೆ ಎಂಬುದಕ್ಕಷ್ಟೇ ಸೀಮಿತವೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಜೋಶಿ ಆಗ್ರಹಿಸಿದ್ದಾರೆ. ಎಥನಾಲ್‌ ಕಾರ್ಯಕ್ರಮ ಕಬ್ಬಿಗೆ ಹೆಚ್ಚುವರಿ ಮಾರುಕಟ್ಟೆ ಕಲ್ಪಿಸಿದ್ದು, 2014–15ರಿಂದ ರೈತರಿಗೆ ₹1.66 ಲಕ್ಷ ಕೋಟಿಗೂ ಹೆಚ್ಚು ಪಾವತಿಸಲು ನೆರವಾಗಿದೆ ಎಂದು ಹೇಳಿದ್ದಾರೆ.

 
 
 

Comments


bottom of page