ಹಬ್ಬ ಹಬ್ಬದಂತಿರಲಿ; ಹಠಕ್ಕೆ ಅವಕಾಶವಿಲ್ಲ’
ಗಣೇಶೋತ್ಸವ ಮಂಡಳಿಗಳಿಗೆ ಪೊಲೀಸರ ಖಡಕ್ ಸಂದೇಶ |
ಕೊನೆಯ ಕ್ಷಣದಲ್ಲಿ ಮಾರ್ಗ ಬದಲಾವಣೆ ಬೇಡ |
ಲೇಸರ್–ಪ್ಲಾಸ್ಮಾಕ್ಕೆ ಅವಕಾಶವಿಲ್ಲ
ಬೆಳಗಾವಿ: ‘ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಿ. ನಿಮ್ಮ ಸಂತೋಷಕ್ಕೆ ಅಡ್ಡಿಪಡಿಸುವುದು ಪೊಲೀಸರ ಉದ್ದೇಶವಲ್ಲ. ಆದರೆ, ಮೊದಲೇ ನಿಗದಿಪಡಿಸಿದ ನಿಯಮ, ಮೆರವಣಿಗೆ ಮಾರ್ಗವನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಿ, “ಇದೇ ಆಗಬೇಕು” ಎಂದು ಹಠ ಹಿಡಿದರೆ ಅದಕ್ಕೆ ಅವಕಾಶವಿಲ್ಲ’ ಎಂದು ಪೊಲೀಸ್ ಆಯುಕ್ತ ನಿಕ್ಕಮ್ ಪ್ರಕಾಶ್ ಅಮ್ರೀತ ಅವರು ಗಣೇಶೋತ್ಸವ ಮಂಡಳಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ..

ನಗರದಲ್ಲಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಗಣೇಶೋತ್ಸವದ ಮಂಡಳಿಗಳ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು,, ಮೆರವಣಿಗೆ ಮಾರ್ಗ, ಡಿಜೆ ಬಳಕೆ, ಆಗಮನ ಮತ್ತು ವಿಸರ್ಜನಾ ಮೆರವಣಿಗೆ, ಲೇಸರ್ ಹಾಗೂ ಪ್ಲಾಸ್ಮಾ ಲೈಟ್ಗಳ ಬಳಕೆ ಕುರಿತು ಸ್ಪಷ್ಟ ಸೂಚನೆ ನೀಡಿದರು.

‘ಗಣೇಶ ವಿಸರ್ಜನೆಗೆ ಎರಡು ತಿಂಗಳಿನಿಂದಲೇ ಪೊಲೀಸ್ ಇಲಾಖೆ ಯೋಜನೆ ರೂಪಿಸುತ್ತಿದೆ. ಯಾವ ಸ್ಥಳದಲ್ಲಿ ಎಷ್ಟು ಸಿಬ್ಬಂದಿ ಇರಬೇಕು, ಯಾವ ಪ್ರದೇಶದಲ್ಲಿ ಯಾವ ರೀತಿಯ ಭದ್ರತೆ ಬೇಕು ಎಂಬುದನ್ನು ಗುಪ್ತಚರ ಮಾಹಿತಿ ಆಧರಿಸಿ ನಿರ್ಧರಿಸಲಾಗುತ್ತದೆ. ಆದರೆ, ಮೆರವಣಿಗೆ ಆರಂಭವಾಗುವ ಕೊನೆಯ ಕ್ಷಣದಲ್ಲಿ “ಈ ಮಾರ್ಗ ಬೇಡ, ಬೇರೆ ಮಾರ್ಗದಲ್ಲೇ ಹೋಗುತ್ತೇವೆ” ಎಂದರೆ ಇಡೀ ಬಂದೋಬಸ್ತ್ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ. ಅಲ್ಲಿಯೇ ಸಂಘರ್ಷಕ್ಕೂ ಕಾರಣವಾಗುತ್ತದೆ’ ಎಂದು ಎಚ್ಚರಿಸಿದರು.

36 ಗಂಟೆ ಬಂದೋಬಸ್ತ್!
ಬೆಳಗಾವಿಯ ಗಣೇಶ ವಿಸರ್ಜನಾ ಬಂದೋಬಸ್ತ್ ಅತ್ಯಂತ ದೀರ್ಘ ಅವಧಿಯದ್ದಾಗಿದೆ ಎಂದು ಉಲ್ಲೇಖಿಸಿದ ಅವರು, ಕಳೆದ ಬಾರಿ ಸುಮಾರು 36 ಗಂಟೆಗಳ ಕಾಲ ನಿರಂತರ ಬಂದೋಬಸ್ತ್ ನಡೆಸಬೇಕಾಯಿತು ಎಂದರು.
‘ಹಿಂದೆ ಮೊದಲು ವಿಸರ್ಜನೆ ಮಾಡುವವರು ಯಾರು ಎಂಬ ಸ್ಪರ್ಧೆ ಇತ್ತು. ಈಗ ಕೊನೆಯದಾಗಿ ವಿಸರ್ಜನೆ ಮಾಡುವವರು ಯಾರು ಎಂಬ ಸ್ಪರ್ಧೆಯೂ ಆರಂಭವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹಬ್ಬವನ್ನು ಅನಗತ್ಯವಾಗಿ ಎಳೆಯುವುದರಿಂದ ಸಾರ್ವಜನಿಕರಿಗೂ, ಪೊಲೀಸ್ ಸಿಬ್ಬಂದಿಗೂ ತೊಂದರೆಯಾಗುತ್ತದೆ’ ಎಂದು ಹೇಳಿದರು.

‘ಡಿಜೆ ಗೋಡೆಯಾಗಿದೆ’
ಡಿಜೆ ಬಳಕೆಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ ಅವರು, ‘10–15 ವರ್ಷಗಳ ಹಿಂದೆ ಡಿಜೆ ಎಂದರೆ ಒಂದೆರಡು ಸ್ಪೀಕರ್ಗಳು ಇರುತ್ತಿದ್ದವು. ಈಗ ಸ್ಪೀಕರ್ಗಳನ್ನು ಒಂದರ ಮೇಲೊಂದು ಜೋಡಿಸಿ ದೊಡ್ಡ ಗೋಡೆಯಂತೆಯೇ ತರುತ್ತಿದ್ದಾರೆ. ಆ ಎಲ್ಲ ಸ್ಪೀಕರ್ಗಳನ್ನು ಒಟ್ಟಿಗೆ ಹಾಕಿ ಅದರ ಮುಂದೆ ಅರ್ಧ ಗಂಟೆ ನಿಂತು ನೋಡಿ; ಅದರ ಪರಿಣಾಮ ಏನು ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.
‘ಡಿಜೆ ಬಳಸಬೇಡಿ ಎಂದು ನಾವು ಹೇಳುತ್ತಿಲ್ಲ. ಆದರೆ ಅದು ನಿಮಗೂ, ಪೊಲೀಸರಿಗೂ, ಸಮಾಜಕ್ಕೂ ಹಿತವಾಗುವ ಮಿತಿಯಲ್ಲಿರಬೇಕು. ರಸ್ತೆಯ ಪಕ್ಕದಲ್ಲೇ ಪುಟ್ಟ ಮಕ್ಕಳು, ವೃದ್ಧರು, ಅನಾರೋಗ್ಯದಿಂದ ಬಳಲುವವರು, ಕಿವಿ ಸಮಸ್ಯೆ ಇರುವವರು ವಾಸಿಸುತ್ತಾರೆ. ಅವರನ್ನೂ ಗಮನದಲ್ಲಿಟ್ಟುಕೊಳ್ಳಬೇಕು’ ಎಂದರು.
ಆಗಮನ ಮೆರವಣಿಗೆ ರಾತ್ರಿ 10ರೊಳಗೆ
ಗಣೇಶ ಮೂರ್ತಿಗಳ ಆಗಮನ ಮೆರವಣಿಗೆಯನ್ನು ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು ಎಂದು ಸೂಚಿಸಿದ ಪೊಲೀಸರು, ಈ ಸಂದರ್ಭದಲ್ಲಿ ಡಿಜೆ ಬಳಕೆಯ ಮೇಲೂ ನಿಯಂತ್ರಣ ಇರಲಿದೆ ಎಂದು ತಿಳಿಸಿದರು.
ಇತ್ತೀಚೆಗೆ ಬೇರೆಡೆ ಸಂಭವಿಸಿದ ಮೆರವಣಿಗೆ ಸಂಬಂಧಿತ ದುರ್ಘಟನೆಗಳನ್ನು ಉಲ್ಲೇಖಿಸಿ, ‘ಒಂದು ಕ್ಷಣದ ನಿರ್ಲಕ್ಷ್ಯದಿಂದ ಜೀವಹಾನಿಯಾದರೆ ಇಡೀ ಹಬ್ಬದ ಸಂಭ್ರಮವೇ ದುಃಖವಾಗಿ ಬದಲಾಗುತ್ತದೆ. ಆದ್ದರಿಂದ ಸುರಕ್ಷತೆಯಲ್ಲಿ ರಾಜಿ ಇಲ್ಲ’ ಎಂದರು.
ಲೇಸರ್ ಕಂಡರೆ ವಶಕ್ಕೆ
ಮೆರವಣಿಗೆಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಲೇಸರ್ ಮತ್ತು ಪ್ಲಾಸ್ಮಾ ಬೆಳಕುಗಳ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.
‘ಲೇಸರ್ ಕಿರಣ ನೇರವಾಗಿ ಕಣ್ಣಿಗೆ ಬಿದ್ದರೆ ದೃಷ್ಟಿಗೆ ಗಂಭೀರ ಹಾನಿಯಾಗಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಲೇಸರ್ ಹಾಗೂ ಪ್ಲಾಸ್ಮಾ ಬಳಕೆಗೆ ಅನುಮತಿ ನೀಡುವುದಿಲ್ಲ. ಕಂಡುಬಂದರೆ ಅದನ್ನು ವಶಕ್ಕೆ ಪಡೆಯಲಾಗುವುದು’ ಎಂದು ಎಚ್ಚರಿಸಿದರು.
‘ಮೂರು ರಾಜ್ಯಗಳ ಸಂಗಮ; ಎಚ್ಚರ ನಮ್ಮ ಹೊಣೆ’
ಬೆಳಗಾವಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಸಂಗಮ ಪ್ರದೇಶವಾಗಿರುವುದರಿಂದ ಇಲ್ಲಿನ ಸಣ್ಣ ಘಟನೆಗೂ ಮೂರು ರಾಜ್ಯಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
‘ಮುಂದಿನ 15–20 ದಿನಗಳು ನಮಗೆ ನಿದ್ದೆಯಿಲ್ಲದ ರಾತ್ರಿಗಳಂತಿರುತ್ತವೆ. ವಿವಿಧ ಮೂಲಗಳಿಂದ ಬರುವ ಮಾಹಿತಿಯನ್ನು ನಿರಂತರವಾಗಿ ಗಮನಿಸಿ ಕೆಲಸ ಮಾಡಬೇಕಾಗುತ್ತದೆ. ಸಾರ್ವಜನಿಕರು ಮತ್ತು ಗಣೇಶ ಮಂಡಳಿಗಳು ಸಹಕರಿಸಿದರೆ ಶಾಂತಿಯುತವಾಗಿ, ಮಾದರಿಯಾಗಿ ಹಬ್ಬ ಆಚರಿಸಬಹುದು’ ಎಂದು ಮನವಿ ಮಾಡಿದರು.
‘ಬದಲಾವಣೆ ಬೇಕಿದ್ದರೆ ಮುಂಚೆಯೇ ಬನ್ನಿ’
‘ನಾವು ನೀಡಿರುವ ಮಾರ್ಗ ಅಥವಾ ನಿಯಮಗಳಲ್ಲಿ ಬದಲಾವಣೆ ಬೇಕಿದ್ದರೆ ಮುಂಚಿತವಾಗಿಯೇ ಬಂದು ಚರ್ಚಿಸಿ. ಕೂತು ಮಾತಾಡೋಣ; ಸಾಧ್ಯವಾದುದನ್ನು ಮಾಡುತ್ತೇವೆ. ಆದರೆ ಕೊನೆಯ ಕ್ಷಣದಲ್ಲಿ ಬಂದು “ಇದೇ ಆಗಬೇಕು” ಎಂದು ಒತ್ತಡ ಹಾಕಿದರೆ ಅದು ಸಾಧ್ಯವಿಲ್ಲ’ ಎಂಬ ಸಂದೇಶವನ್ನೂ ಪೊಲೀಸರು ನೀಡಿದರು.
ಗಣೇಶೋತ್ಸವಕ್ಕೆ ಸಂಬಂಧಿಸಿದ ಅನುಮತಿಗಳನ್ನು ಸುಗಮಗೊಳಿಸಲು ಏಕಗವಾಕ್ಷಿ ವ್ಯವಸ್ಥೆ ಆರಂಭಿಸಿರುವುದಾಗಿ ತಿಳಿಸಿದ ಅವರು, ಪಾಲಿಕೆ ಸೇರಿದಂತೆ ಇತರ ಇಲಾಖೆಗಳ ಸಮಸ್ಯೆಗಳಿದ್ದರೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಭರವಸೆ ನೀಡಿದರು.
‘ಮಂಡಳಿಗಳು–ಪೊಲೀಸರು ಪ್ರತ್ಯೇಕ ಅಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿ, ಬೆಳಗಾವಿಯ ಗಣೇಶೋತ್ಸವಕ್ಕೆ ಒಳ್ಳೆಯ ಹೆಸರು ತರೋಣ. ಹಬ್ಬವನ್ನು ಹಬ್ಬದಂತೆಯೇ ಆಚರಿಸಿ; ಸಮಾಜಕ್ಕೆ ಉತ್ತಮ ಸಂದೇಶ ನೀಡೋಣ’ ಎಂದು ಕರೆ ನೀಡಿದರು.
ಡಿಸಿಪಿ ನಾರಾಯಣ ಬರಮನಿ ಮುಂತಾದವರು ಹಾಜರಿದ್ದರು




Comments