;
top of page

ಐದು ತಿಂಗಳ ಕನ್ನಡ ಹೋರಾಟಕ್ಕೆ ಫಲ: ಸರ್ಕಾರದಿಂದ ಅಧಿಕೃತ ಆದೇಶ

  • Writer: vilas joshi
    vilas joshi
  • 15 minutes ago
  • 2 min read

.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಗೊತ್ತುವಳಿಗೆ ಹಸಿರು ನಿಶಾನೆ |


ಈಗ ಪಾಲಿಕೆ ಸಭೆಯತ್ತ ಚಿತ್ತ


(ಇ ಬೆಳಗಾವಿ ವಿಶೇಷ)

ಬೆಳಗಾವಿ:

ಐದು ತಿಂಗಳ ಕಾಲ ಪ್ರತಿಭಟನೆ, ಮನವಿ, ಧರಣಿ ಮತ್ತು ಸಭೆಗಳ ಮೂಲಕ ಕನ್ನಡ ಸಂಘಟನೆಗಳು ಮುಂದಿಟ್ಟಿದ್ದ ಪ್ರಮುಖ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸುವ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಇದರೊಂದಿಗೆ ಹಲವು ತಿಂಗಳಿಂದ ಪಾಲಿಕೆ ಅಂಗಳದಲ್ಲಿ ಚರ್ಚೆ, ಗದ್ದಲ ಮತ್ತು ಆಡಳಿತಾತ್ಮಕ ಪತ್ರ ವ್ಯವಹಾರಕ್ಕೆ ಸಿಲುಕಿದ್ದ ಕರ್ನಾಟಕ ಪರ ಗೊತ್ತುವಳಿ ವಿಚಾರಕ್ಕೆ ಈಗ ಸರ್ಕಾರದ ಸ್ಪಷ್ಟ ನಿಲುವು ದೊರೆತಂತಾಗಿದೆ.


ಒಂದು ಸಾಲಿನ ಗೊತ್ತುವಳಿಗಾಗಿ ಐದು ತಿಂಗಳ ಹೋರಾಟ..


ಬೆಳಗಾವಿಯ ನೆಲ, ಭಾಷೆ ಹಾಗೂ ರಾಜ್ಯದ ಅಖಂಡತೆಯ ಕುರಿತು ಪಾಲಿಕೆ ತನ್ನ ಅಧಿಕೃತ ನಿಲುವನ್ನು ದಾಖಲಿಸಬೇಕು ಎಂಬುದು ಕನ್ನಡ ಸಂಘಟನೆಗಳ ಆಗ್ರಹವಾಗಿತ್ತು.


ಈ ಹಿನ್ನೆಲೆಯಲ್ಲಿ ಮಾರ್ಚ್‌ 26ರಿಂದ ಹೋರಾಟ ಆರಂಭಗೊಂಡಿತ್ತು. ಸ್ಥಳೀಯ ಕನ್ನಡ ಸಂಘಟನೆಗಳ ಹೋರಾಟಕ್ಕೆ ನಂತರ ಬೆಂಗಳೂರಿನ ಸಂಘಟನೆಗಳೂ ಕೈಜೋಡಿಸಿದ್ದವು.

ಮೇ 13ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಷಯ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವಂತೆ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ಡಾ. ದಿನೇಶ ನಾಶಿಪುಡಿ. ಒತ್ತಾಯಿಸಿದರೆ, ಎಂಇಎಸ್‌ ಸದಸ್ಯರ ವಿರೋಧದಿಂದ ಸಭೆಯಲ್ಲಿ ವಾಗ್ವಾದ ಉಂಟಾಗಿತ್ತು.

ಆದರೆ, ಪಾಲಿಕೆ ತಕ್ಷಣ ನಿರ್ಣಯ ಕೈಗೊಳ್ಳದೆ ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟನೆ ಪಡೆಯಲು ಮುಂದಾಗಿದ್ದರಿಂದ ಕನ್ನಡ ಸಂಘಟನೆಗಳ ಅಸಮಾಧಾನ ಮತ್ತಷ್ಟು ಹೆಚ್ಚಿತ್ತು.


ಸರ್ಕಾರದ ಬಾಗಿಲಿಗೂ ತಲುಪಿದ್ದ ಹೋರಾಟ.


ಪಾಲಿಕೆಯಲ್ಲೇ ನಿರ್ಣಯವಾಗದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಸರ್ಕಾರದ ಮಟ್ಟದಲ್ಲಿ ಒತ್ತಡ ಹೆಚ್ಚಿಸಿದ್ದವು. ಮುಖ್ಯಮಂತ್ರಿ ಕಚೇರಿ, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ವಿಷಯ ತರಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಹಲವು ಬಾರಿ ಭೇಟಿ ಮಾಡಿದ ಸಂಘಟನೆಗಳ ಮುಖಂಡರು, ಬೆಳಗಾವಿ ಪಾಲಿಕೆಗೆ ಸರ್ಕಾರದಿಂದ ಸ್ಪಷ್ಟ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದರು.

ಆಗಸ್ಟ್‌ ಸಭೆಯೂ ನಿರ್ಣಯವಿಲ್ಲದೆ ಅಂತ್ಯ

ಆಗಸ್ಟ್‌ 18ರಂದು ನಡೆದ ಸಾಮಾನ್ಯ ಸಭೆಯಲ್ಲಿಯೂ ಕರ್ನಾಟಕ ಪರ ಗೊತ್ತುವಳಿ ಮತ್ತೆ ಪ್ರತಿಧ್ವನಿಸಿತ್ತು.

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಒಂದು ಸಾಲಿನ ಗೊತ್ತುವಳಿ ಅಂಗೀಕರಿಸಲು ವಿಳಂಬ ಏಕೆ ಎಂಬ ಪ್ರಶ್ನೆ ಸಭೆಯಲ್ಲಿ ಕೇಳಿಬಂದಿತ್ತು. ಚರ್ಚೆ ತಾರಕಕ್ಕೇರಿ, ಗದ್ದಲದ ಕಾರಣ ಸಭೆಯೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು.


ಈಗ ತಪ್ಪಿಸಿಕೊಳ್ಳಲು ಅವಕಾಶವೇ?

ಇದೀಗ ಸರ್ಕಾರದಿಂದಲೇ ಅಧಿಕೃತ ಆದೇಶ ಹೊರಬಿದ್ದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಇದುವರೆಗೆ ‘ಸರ್ಕಾರದ ಸ್ಪಷ್ಟನೆ ಬೇಕು’ ಎಂಬ ಕಾರಣ ಮುಂದಿಟ್ಟಿದ್ದ ಪಾಲಿಕೆಗೆ ಈಗ ಸರ್ಕಾರದ ನಿಲುವೇ ಅಧಿಕೃತವಾಗಿ ತಲುಪಿರುವುದರಿಂದ, ಮುಂದಿನ ಸಾಮಾನ್ಯ ಸಭೆಯಲ್ಲಿ ಗೊತ್ತುವಳಿಯನ್ನು ಹೇಗೆ ಕೈಗೆತ್ತಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕನ್ನಡ ಸಂಘಟನೆಗಳ ಪಾಲಿಗೆ ಇದು ಐದು ತಿಂಗಳ ಹೋರಾಟಕ್ಕೆ ದೊರೆತ ಪ್ರಮುಖ ಫಲ. ಆದರೆ, ಸರ್ಕಾರದ ಆದೇಶದಂತೆ ಪಾಲಿಕೆ ಸಭೆಯಲ್ಲಿ ಗೊತ್ತುವಳಿ ಅಂಗೀಕಾರಗೊಂಡು ಅಧಿಕೃತ ನಿರ್ಣಯವಾಗಿ ದಾಖಲಾಗುವವರೆಗೂ ಹೋರಾಟದ ಅಂತಿಮ ಘಟ್ಟ ಬಾಕಿ ಉಳಿದಿದೆ.

ಈಗ ಎಲ್ಲರ ಕಣ್ಣು ಬೆಳಗಾವಿ ಮಹಾನಗರ ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯ ಮೇಲೆ ನೆಟ್ಟಿದೆ.

ಐದು ತಿಂಗಳ ಹೋರಾಟದ ಹಾದಿ

ಮಾರ್ಚ್‌ 26: ಕರ್ನಾಟಕ ಪರ ಗೊತ್ತುವಳಿಗೆ ಆಗ್ರಹಿಸಿ ಹೋರಾಟ ಆರಂಭ.

ಅಶೋಕ ಚಂದರಗಿ, ಬಲರಾಮ‌ ಮಾಸೇನಟ್ಟಿ, ಮಹದೇವ ತಳವಾರ , ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಸತತ ಹೋರಾಟ.

ಸಿಎಂ, ನಗರಾಭಿವೃದ್ಧಿ ಸಚಿವ, ಜಿಲ್ಲಾ ಉಸ್ತುವರಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರಿಗೆ‌ ಮನವಿ ಪತ್ರಗಳ ಅರ್ಪಣೆ.


ಡಿಸಿ, ಆರ್ ಸಿಯವರಗೂ ಸತತ ಮನವಿ ಅರ್ಪಣೆ.


ಮೇ 13: ಪಾಲಿಕೆ ಸಭೆಯಲ್ಲಿ ಪರ–ವಿರೋಧ ವಾಗ್ವಾದ.


ಜೂನ್: ವಿಷಯ ಸರ್ಕಾರದ ಮಟ್ಟಕ್ಕೆ

ಆಗಸ್ಟ್‌ 18: ಮತ್ತೆ ಗದ್ದಲ; ಸಭೆ ಮುಂದೂಡಿಕೆ.


ಆಗಸ್ಟ್‌ ಅಂತ್ಯ: ಸರ್ಕಾರದಿಂದ ಅಧಿಕೃತ ಆದೇಶ.


ಸೆಪ್ಟಂಬರ .1 ರಂದು ಕನ್ನಡ ಸಂಘಟನೆಗಳ ಪತ್ರಿಕಾಗೋಷ್ಟಿ

 
 
 

Comments


bottom of page