ಶುದ್ಧ ಮನಸ್ಸಿನ ಭಕ್ತಿಯಲ್ಲಿ ದೇವರ ದರ್ಶನ ದಾರ್ಶನಿಕರ ತತ್ವಗಳ ಸರಿಯಾದ ಅರಿವು ಅಗತ್ಯ: ಪಂಡಿತ್ ಶ್ರೀನಿಧಿ ಆಚಾರ್ಯ ಜಮನಿಸ್
ಮಧ್ವಾಚಾರ್ಯರ ಜಯಂತಿ ಉತ್ಸವ
ಬೆಳಗಾವಿ,
ಎಷ್ಟೇ ಸಾಹಿತ್ಯ ಓದಿದರೂ ದೇವರನ್ನು ಕಾಣಲು ಭಕ್ತಿ ಮುಖ್ಯ. ಶುದ್ಧ ಮನಸ್ಸು, ಭಕ್ತಿ ಹಾಗೂ ಪ್ರೀತಿಯಿಂದ ನೋಡಿದರೆ ನಮ್ಮ ಸುತ್ತಲಿನ ಪರಿಸರದಲ್ಲಿಯೇ ದೇವರನ್ನು ಕಾಣಬಹುದು’ ಎಂದು ಪಂಡಿತ್ ಶ್ರೀನಿಧಿ ಆಚಾರ್ಯ ಜಮನಿಸ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಬುಧವಾರ ನಡೆದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿ ಉತ್ಸವದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ದಾರ್ಶನಿಕರ ತತ್ವಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಅವರು, ‘ಶಂಕರಾಚಾರ್ಯರು, ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರು ಪ್ರಮುಖ ದಾರ್ಶನಿಕರು. ಅವರ ತತ್ವಗಳ ಕುರಿತು ನಿಖರವಾದ ಅರಿವು ಬೆಳೆಸಿಕೊಳ್ಳಬೇಕು. ಇತರರಿಗೆ ತಿಳಿಸುವಾಗಲೂ ಸರಿಯಾದ ಮಾಹಿತಿ ನೀಡಬೇಕು’ ಎಂದರು.
‘ದೇವರನ್ನು ಕಾಣಲು ಮರಣದವರೆಗೆ ಕಾಯಬೇಕಿಲ್ಲ. ಬದುಕಿರುವಾಗಲೇ ಶುದ್ಧ ಮನಸ್ಸಿನ ಭಕ್ತಿ ಮತ್ತು ಪ್ರೀತಿಯಿಂದ ದೇವರ ಸಾನ್ನಿಧ್ಯ ಅನುಭವಿಸಲು ಸಾಧ್ಯ. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ದೇವರನ್ನು ಕಾಣುವ ಭಾವ ಬೆಳೆಸಿಕೊಳ್ಳಬೇಕು. ದಿನದ ಆರಂಭದಿಂದಲೇ ಭಗವಂತನ ಸ್ಮರಣೆ ಬದುಕಿನ ಭಾಗವಾಗಬೇಕು’ ಎಂದು ತಿಳಿಸಿದರು.

ಮಧ್ವಾಚಾರ್ಯರ ಪಾಂಡಿತ್ಯ ಹಾಗೂ ಭಕ್ತಿಮಾರ್ಗದ ಕೊಡುಗೆಯನ್ನು ವಿವರಿಸಿದ ಅವರು, ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮತ್ತು ಅಷ್ಟಮಠಗಳ ಸ್ಥಾಪನೆಯ ಮೂಲಕ ಕೃಷ್ಣನ ಆರಾಧನೆಗೆ ವ್ಯವಸ್ಥೆ ಕಲ್ಪಿಸಿದರು. ಅವರ ಚಿಂತನೆಗಳು ಭಕ್ತಿಮಾರ್ಗಕ್ಕೆ ಮಹತ್ವದ ಕೊಡುಗೆ ನೀಡಿವೆ ಎಂದರು.
‘ವೇದ, ಉಪನಿಷತ್ತುಗಳ ಅಧ್ಯಯನದ ಮೂಲಕ ಭಗವಂತನ ಅರಿವಿನತ್ತ ಸಾಗಬಹುದು. ಮಧ್ವಾಚಾರ್ಯರ ಕುರಿತು ಅನೇಕ ದಾಸರು ಕೀರ್ತನೆಗಳನ್ನು ರಚಿಸಿದ್ದಾರೆ. ಜ್ಞಾನದೊಂದಿಗೆ ಭಕ್ತಿಯೂ ಬೆರೆತಾಗ ಆಧ್ಯಾತ್ಮಿಕ ಸಾಧನೆಗೆ ಅರ್ಥ ಬರುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಉಪಮಹಾಪೌರ ಹಣಮಂತ ಕೊಂಗಾಲಿ, ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರವಾಗಿದೆ. ಹಿಂದಿನಿಂದಲೂ ಶಿಕ್ಷಣ ಮತ್ತು ಪಾಠಬೋಧನೆಯಲ್ಲಿ ಸಮುದಾಯದ ಅನೇಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಮಧ್ವಾಚಾರ್ಯರ ಜಯಂತಿ ಆಚರಣೆಯಲ್ಲಿ ಎಲ್ಲ ಸಮುದಾಯಗಳ ಜನರೂ ಪಾಲ್ಗೊಳ್ಳುವಂತಾಗಬೇಕು. ಮುಂದಿನ ವರ್ಷಗಳಲ್ಲಿ ಉತ್ಸವ ಇನ್ನಷ್ಟು ವ್ಯಾಪಕವಾಗಿ ನಡೆಯಲಿ ಎಂದು ಆಶಿಸಿದರು.
ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಸಂತೋಷ್ ಪೆಡ್ನಿಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಧ್ವ ಸಮಾಜದ ಅಧ್ಯಕ್ಷ ಅನಿಲ್ ಪೋದ್ದಾರ್, ಮಾಜಿ ಉಪಮಹಾಪೌರ ಹಾಗೂ ನಗರಸೇವಕಿ ವಾಣಿ ವಿಲಾಸ ಜೋಶಿ, ಸವದತ್ತಿ , ಡಾ. ಶ್ರೀಧರ ಹುಕ್ಕೇರಿ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಡೊಳ್ಳು ಕುಣಿತದೊಂದಿಗೆ ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು. ಮಾಜಿ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದರು. ಡೊಳ್ಳು ಕುಣಿತ ಹಾಗೂ ವೇಷಧಾರಿಗಳ ಪ್ರದರ್ಶನದೊಂದಿಗೆ ಸಾಗಿದ ಮೆರವಣಿಗೆ ಕುಮಾರ ಗಂಧರ್ವ ಕಲಾಮಂದಿರ ತಲುಪಿತು. ವಿದ್ಯಾವತಿ ಭಜಂತ್ರಿ, ವಾಣಿವಿಲಾಸ ಜೋಶಿ ಹಾಗೂ ಮಧ್ವ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.




Comments