;
top of page

ಶೋಷಿತರ ಬದುಕಿಗೆ ಅಕ್ಷರದ ಧ್ವನಿ ನೀಡಿದ ಅಣ್ಣಾ ಭಾವು ಸಾಠೆ

  • Writer: vilas joshi
    vilas joshi
  • 5 hours ago
  • 1 min read

ಬೋರಗಾಂವದಲ್ಲಿ ಜಯಂತಿ ಸಂಭ್ರಮ | ಯುವಪೀಳಿಗೆಗೆ ಅವರ ಸಾಹಿತ್ಯ–ಹೋರಾಟ ಪರಿಚಯಿಸಲು ಸತೀಶ ಜಾರಕಿಹೊಳಿ ಕರೆ.


ನಿಪ್ಪಾಣಿ:

‘ಶಿಕ್ಷಣದ ಪದವಿಗಳಿಲ್ಲದಿದ್ದರೂ ಬದುಕಿನ ಅನುಭವವನ್ನೇ ಪಾಠಶಾಲೆಯಾಗಿಸಿಕೊಂಡ ಡಾ. ಅಣ್ಣಾ ಭಾವು ಸಾಠೆ, ತಮ್ಮ ಬರಹಗಳಿಂದ ಶೋಷಿತರು ಮತ್ತು ದುಡಿಯುವ ವರ್ಗದ ನೋವಿಗೆ ಧ್ವನಿಯಾದರು. ಅವರ ಸಾಹಿತ್ಯ ಹಾಗೂ ಸಾಮಾಜಿಕ ಹೋರಾಟ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಬೋರಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಸಾಹಿತ್ಯರತ್ನ ಲೋಕಶಾಹಿರ್ ಡಾ. ಅಣ್ಣಾ ಭಾವು ಸಾಠೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರಾಂತಿಗೀತೆಗಳು ಮತ್ತು ಕಾದಂಬರಿಗಳ ಮೂಲಕ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸಿದ ಸಾಠೆ, ದಲಿತರು, ಕಾರ್ಮಿಕರು ಹಾಗೂ ಅಂಚಿನ ಸಮುದಾಯಗಳಲ್ಲಿ ಹಕ್ಕಿನ ಅರಿವು ಮೂಡಿಸಿದರು. ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಸಮಾನ ಸಮಾಜ ನಿರ್ಮಾಣಕ್ಕಾಗಿ ಸಾಹಿತ್ಯವನ್ನೇ ಪರಿಣಾಮಕಾರಿ ಹೋರಾಟದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು’ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಸಾಠೆ, ಸಾಮಾನ್ಯ ಜನರ ಬದುಕು–ಬವಣೆಗಳನ್ನು ತಮ್ಮ ಕೃತಿಗಳಲ್ಲಿ ಜೀವಂತವಾಗಿ ಕಟ್ಟಿಕೊಟ್ಟಿದ್ದಾರೆ. ಹೀಗಾಗಿಯೇ ಅವರ ಸಾಹಿತ್ಯ ಒಂದು ಕಾಲಘಟ್ಟಕ್ಕೆ ಸೀಮಿತವಾಗದೆ, ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

‘ಜಯಂತಿ ಆಚರಣೆ ವೇದಿಕೆಯ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು.

ಸಾಠೆ ಅವರ ಪ್ರಸಿದ್ಧ ಕಾದಂಬರಿಗಳು, ಕ್ರಾಂತಿಗೀತೆಗಳು ಮತ್ತು ಸಾಮಾಜಿಕ ಚಿಂತನೆಗಳನ್ನು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಅವರ ಸಮಾನತೆಯ ಸಂದೇಶ ಮುಂದಿನ ಪೀಳಿಗೆಗೂ ತಲುಪುವಂತೆ ನಿರಂತರ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಕರೆ ನೀಡಿದರು.

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಅಣ್ಣಾಸಾಹೇಬ್ ಕೊಹಳೆ, ಸುಪ್ರಿಯಾ ಪಾಟೀಲ, ರಾಜೇಂದ್ರ ಪಾಟೀಲ, ಸುರೇಶ ಐಹೊಳೆ, ರಮೇಶ ಮಾದರ, ಸುನೀತಾ ಐಹೊಳೆ ಸೇರಿದಂತೆ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


 
 
 

Comments


bottom of page