;
top of page

ವೈದ್ಯಕೀಯ ಶಿಕ್ಷಣದಲ್ಲಿ ಕರ್ನಾಟಕ ದೇಶದಲ್ಲೇ ನಂ.1: ಶರಣಪ್ರಕಾಶ ಪಾಟೀಲ

Writer: vilas joshi
vilas joshi
2 hours ago
1 min read

72 ವೈದ್ಯಕೀಯ ಕಾಲೇಜುಗಳು; ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ, ಸ್ನಾತಕೋತ್ತರ ಸೀಟುಗಳು’


ಕೆಎಲ್‌ಇ ಸಾಧನೆಯ ಹಿಂದೆ ಪ್ರಭಾಕರ ಕೋರೆ ಅವರ ಶ್ರಮ, ಬದ್ಧತೆ


ebelagavi report

ಹುಬ್ಬಳ್ಳಿ: ‘

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 72 ವೈದ್ಯಕೀಯ ಕಾಲೇಜುಗಳಿದ್ದು, ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಹಾಗೂ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಹೊಂದಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಕೆಎಲ್‌ಇ ಸಂಸ್ಥೆಯ ನೂತನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ವೈದ್ಯಕೀಯ ಮಾತ್ರವಲ್ಲದೆ ನರ್ಸಿಂಗ್, ಫಿಸಿಯೊಥೆರಪಿ ಮತ್ತು ಫಾರ್ಮಸಿ ಶಿಕ್ಷಣದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಹೀಗಾಗಿ ರಾಜ್ಯವು ದೇಶದ ಪ್ರಮುಖ ಆರೋಗ್ಯ ಮತ್ತು ವೃತ್ತಿಪರ ಶಿಕ್ಷಣದ ಕೇಂದ್ರವಾಗಿ ಬೆಳೆದಿದೆ’ ಎಂದರು.



‘ಈ ಸಾಧನೆಯ ಶ್ರೇಯಸ್ಸು ಸರ್ಕಾರಕ್ಕೆ ಮಾತ್ರ ಸಲ್ಲುವುದಿಲ್ಲ. ಹಿಂದಿನ ಸರ್ಕಾರಗಳ ದೂರದೃಷ್ಟಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಿದ ಅವಕಾಶ, ಮಠಮಾನ್ಯಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾದಾಸೋಹವೂ ಇದಕ್ಕೆ ಪ್ರಮುಖ ಕಾರಣ. ಕೆಎಲ್‌ಇ, ಬಿಎಲ್‌ಡಿಇ, ಮಣಿಪಾಲ್, ಎಚ್‌ಕೆ ಸೊಸೈಟಿ ಹಾಗೂ ಜೆಎಸ್‌ಎಸ್‌ನಂತಹ ಸಂಸ್ಥೆಗಳು ದಶಕಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿವೆ’ ಎಂದು ಹೇಳಿದರು.


ಕೋರೆ ಮುಖ್ಯ ರೂವಾರಿ’


ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯ ಮುಖ್ಯ ರೂವಾರಿ ಡಾ. ಪ್ರಭಾಕರ ಕೋರೆ. ಕೇವಲ 34 ಶಾಲಾ–ಕಾಲೇಜುಗಳನ್ನು ಹೊಂದಿದ್ದ ಸಂಸ್ಥೆಯನ್ನು 320ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಒಳಗೊಂಡ ಬೃಹತ್ ಶಿಕ್ಷಣ ಸಮೂಹವನ್ನಾಗಿ ರೂಪಿಸಿರುವುದು ಸಾಮಾನ್ಯ ಸಾಧನೆಯಲ್ಲ. ಇದರ ಹಿಂದೆ ಅವರ ಶ್ರಮ, ಪ್ರಾಮಾಣಿಕತೆ, ಬದ್ಧತೆ ಮತ್ತು ನಿಸ್ವಾರ್ಥ ಸೇವಾಭಾವವಿದೆ’ ಎಂದು ಪಾಟೀಲ ಶ್ಲಾಘಿಸಿದರು.


ಸಂಸ್ಥೆಯಲ್ಲಿ ಈಗ 1.48 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅದರ ಆಸ್ಪತ್ರೆಗಳಲ್ಲಿ ಸಾವಿರಾರು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಸರ್ಕಾರ ನಿರ್ವಹಿಸಬೇಕಾದ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಮಹತ್ವದ ಹೊಣೆಯನ್ನು ಇಂತಹ ಸಂಸ್ಥೆಗಳು ಹಂಚಿಕೊಂಡಿವೆ’ ಎಂದರು.

‘ಉತ್ತಮ ಕಾರ್ಯಗಳಿಗೆ ಸರ್ಕಾರದ ಬೆಂಬಲ’

‘ರಾಜ್ಯದ ಪ್ರತಿಭಾವಂತ ಯುವಜನರು, ಅವರ ಕೌಶಲ, ಉತ್ಸಾಹ ಹಾಗೂ ಪರಿಶ್ರಮದಿಂದಾಗಿ ಜಗತ್ತಿನ ಗಮನ ಕರ್ನಾಟಕದತ್ತ ಹರಿದಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿ ರೂಪುಗೊಳ್ಳಲು ರಾಜ್ಯದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳ ಕೊಡುಗೆ ದೊಡ್ಡದು’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವ ಕೆಎಲ್‌ಇ ಸೇರಿದಂತೆ ಎಲ್ಲ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ಮುಂದುವರಿಯಲಿದೆ’ ಎಂದು ಭರವಸೆ ನೀಡಿದರು.

 
 
 

Comments


bottom of page