ಎಪಿಎಂಸಿ ಹೆಸರಿಗೆ ಅಷ್ಟೇ!’: ಕಾರ್ಯದರ್ಶಿಗೆ ವೀರಪ್ಪ ತರಾಟೆ
‘
ರೈತರಿಗೆ ರಸೀದಿ ಇಲ್ಲವೇ? ಸೆಸ್ ಲೆಕ್ಕವೂ ಗೊತ್ತಿಲ್ಲವೇ? ಮಾರುಕಟ್ಟೆ ಅವ್ಯವಸ್ಥೆಗೆ ಉಪಲೋಕಾಯುಕ್ತರ ಅಸಮಾಧಾನ.
ಬೆಳಗಾವಿ:
ರೈತರ ಉತ್ಪನ್ನ ಮಾರಾಟವಾಗುತ್ತದೆ; ಆದರೆ ರಸೀದಿ ನೀಡುವ ಬಗ್ಗೆ ಸ್ಪಷ್ಟತೆಯಿಲ್ಲ. ಮಾರುಕಟ್ಟೆಗೆ ಸೆಸ್ ಬರುತ್ತದೆ; ವಾರ್ಷಿಕ ಸಂಗ್ರಹವೆಷ್ಟು ಎಂಬ ಪ್ರಶ್ನೆಗೆ ತಕ್ಷಣ ಉತ್ತರವಿಲ್ಲ. ಸ್ವಚ್ಛತೆ, ಬೀದಿದೀಪಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲ—ಬೆಳಗಾವಿ ಎಪಿಎಂಸಿ ಪರಿಶೀಲನೆ ವೇಳೆ ಈ ಅಂಶಗಳನ್ನು ಪ್ರಶ್ನಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ, ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.

‘
ಇದು ಎಪಿಎಂಸಿ ತರ ಮಾಡ್ತಾ ಇಲ್ಲ ಸರ್. ಯಾರು ಇಷ್ಟ ಬಂದಾಗ ಏನು ಬೇಕೋ ಮಾಡ್ಕೊಂಡು ಹೋಗ್ತಾರೆ. ಅಂದ್ರೆ ಎಪಿಎಂಸಿ ಹೆಸರಿಗೆ ಅಷ್ಟೇ. ಇದೊಂಥರ ಪ್ರೈವೇಟ್ ಬಿಸಿನೆಸ್!’ ಎಂದು ಖಡಕ್ಕಾಗಿ ಹೇಳಿದರು.
ಗುರುವಾರ ಮಾರುಕಟ್ಟೆಗೆ ಭೇಟಿ ನೀಡಿದ ಅವರು, ವ್ಯಾಪಾರಿಗಳ ಬಳಿ ಖರೀದಿ–ಮಾರಾಟದ ವಿವರ ಕೇಳಿದರು. ರೈತರಿಗೆ ರಸೀದಿ ನೀಡುವ ವಿಚಾರದಲ್ಲಿ ಸಮರ್ಪಕ ಉತ್ತರ ಸಿಗದಿದ್ದಾಗ, ‘ಅವರಿಗೆ ರಿಸೀಪ್ಟ್ ಕೊಡಬೇಕಲ್ಲ’ ಎಂದು ಪ್ರಶ್ನಿಸಿದರು.
ನಿಯಮಿತವಾಗಿ ರಸೀದಿ ನೀಡಲಾಗುತ್ತಿದೆ ಎಂಬ ಸಮರ್ಥನೆಗೆ, ‘ರೆಗ್ಯುಲರ್ ಆಗಿ ಒಬ್ಬರಿಗೂ ಕೊಡ್ತಾ ಇಲ್ವಲ್ಲ’ ಎಂದು ಆಕ್ಷೇಪಿಸಿದರು.

ರೈತರಿಂದ ಪಡೆಯುವ ಕಮಿಷನ್ ಬಗ್ಗೆಯೂ ವಿಚಾರಿಸಿದ ಅವರು, ‘ಇಲ್ಲಿ ನೀವು ಬದುಕಬೇಕು. ಬೇರೆಯವರು ಬದುಕಬೇಕು. ಅದರಲ್ಲಿ ಇಷ್ಟ ಬಂದ ಹಾಗೆ ಮಾಡೋಂಗಿಲ್ಲ’ ಎಂದು ವ್ಯಾಪಾರಿಗೆ ಹೇಳಿದರು.
ಮಾರುಕಟ್ಟೆಯ ತ್ಯಾಜ್ಯ ಹಾಗೂ ಬೀದಿದೀಪಗಳ ಕೊರತೆಯ ಬಗ್ಗೆ ಪ್ರಶ್ನಿಸಿದಾಗ, ವ್ಯಾಪಾರ ಮುಗಿದ ಬಳಿಕ ಸ್ವಚ್ಛತೆ ಕೈಗೊಳ್ಳುವುದಾಗಿ ಅಧಿಕಾರಿಗಳು ವಿವರಿಸಿದರು.

‘
ವರ್ಷಕ್ಕೆ ಎಷ್ಟು ಸೆಸ್ ಬರುತ್ತೆ ರೀ?’ ಎಂಬ ಪ್ರಶ್ನೆಗೆ ತಕ್ಷಣ ಸ್ಪಷ್ಟ ಮಾಹಿತಿ ಸಿಗದಿದ್ದಾಗ, ‘ಅಂದಾಜು ಗೊತ್ತಾಗಲ್ಲ ನಿನಗೆ?’ ಎಂದು ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಮೊದಲು ಹೇಳಿದ ₹10ರಿಂದ ₹15 ಲಕ್ಷ ಮೊತ್ತವು ತಿಂಗಳ ಸಂಗ್ರಹ ಎಂದು ಬಳಿಕ ಸ್ಪಷ್ಟಪಡಿಸಲಾಯಿತು.
ರಸೀದಿ ವಿತರಣೆ, ವ್ಯಾಪಾರದ ನಿಯಂತ್ರಣ ಮತ್ತು ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ಎಪಿಎಂಸಿ ಆಡಳಿತ ಜವಾಬ್ದಾರಿ ನಿಭಾಯಿಸಬೇಕೆಂದು ತಾಕೀತು ಮಾಡಿದರು.




Comments