ಆಸ್ತಿ ಪಾಲಿಕೆಯದ್ದು; ಉತ್ತರ ಯಾರದ್ದು?
ಉಪಲೋಕಾಯುಕ್ತರ ಪ್ರಶ್ನೆಗಳಿಗೆ ಕಂದಾಯ ಶಾಖೆಯ ಲೆಕ್ಕಪತ್ರವೇ ಉತ್ತರವಾಗಬೇಕು
(ebelagavi SPL Report)
ಬೆಳಗಾವಿ-
ಪಾಲಿಕೆಯ ಆಸ್ತಿಗೆ ಗುತ್ತಿಗೆ ಅವಧಿ ಇದೆ. ಆ ಅವಧಿ ಮುಗಿದ ನಂತರ ಕೈಗೊಳ್ಳಬೇಕಾದ ಕ್ರಮಕ್ಕೂ ಹೊಣೆಗಾರರಿದ್ದಾರೆ. ಆದರೆ, ‘ಅವಧಿ ಮುಗಿದಿದ್ದು ಗೊತ್ತಿರಲಿಲ್ಲವೇ?’ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರವೇ ಸಿಗದಿದ್ದರೆ ಆಡಳಿತವನ್ನು ಅಳೆಯುವುದು ಹೇಗೆ?
ಗುರುವಾರ ಬೆಳಗಾವಿಯ ವಿವಿಧೆಡೆ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಪರಿಶೀಲನೆಯಲ್ಲಿ ಹೆಚ್ಚು ಗಮನ ಸೆಳೆದದ್ದು ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಕಾರ್ಯವೈಖರಿ.

ಎಪಿಎಂಸಿಯಲ್ಲಿ ರೈತರಿಗೆ ರಸೀದಿ ನೀಡುವ ವಿಚಾರದಿಂದ ಹಿಡಿದು, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹಣ ಪಡೆದು ರಸೀದಿ ನೀಡದಿರುವವರೆಗೆ ಅವರ ಪ್ರಶ್ನೆಗಳ ಕೇಂದ್ರದಲ್ಲಿ ಇದ್ದದ್ದು ಒಂದೇ ಸಂಗತಿ—ಕರ್ತವ್ಯ ನಿರ್ವಹಣೆಯ ಲೆಕ್ಕ.!
ಪಾಲಿಕೆಗೆ ಬಂದಾಗ ಅದೇ ಪ್ರಶ್ನೆ ಸಾರ್ವಜನಿಕ ಆಸ್ತಿಯ ರಕ್ಷಣೆಯತ್ತ ತಿರುಗಿತು.
‘ಕಥೆ ಹೇಳಬೇಡ, ನಾವೇನು ಮಕ್ಕಳಾ?’
ಕಂದಾಯ ಶಾಖೆಯ ಉಪ ಆಯುಕ್ತ ಸಿದ್ದು ಹುಲ್ಲೊಳ್ಳಿ ಅವರನ್ನು ಪ್ರಶ್ನಿಸುವಾಗ ಉಪಲೋಕಾಯುಕ್ತರು ಬಳಸಿದ ಈ ಮಾತು, ಸಭೆಯಲ್ಲಿನ ಒಂದು ಖಡಕ್ ಪ್ರತಿಕ್ರಿಯೆಯಷ್ಟೇ ಅಲ್ಲ. ದಾಖಲೆ ಆಧಾರಿತ ಉತ್ತರದ ಬದಲು ವಿವರಣೆಯಲ್ಲೇ ವಿಷಯ ಮುಗಿಸುವ ಆಡಳಿತದ ಧೋರಣೆಗೆ ಬಿದ್ದ ಚಾಟಿಯಂತಿತ್ತು.

ಗುತ್ತಿಗೆ ಅವಧಿ ಮುಗಿದ ಆಸ್ತಿಗಳ ಸ್ಥಿತಿ ಏನು? ಅವುಗಳ ಕುರಿತು ಕ್ರಮ ಕೈಗೊಂಡಿದ್ದೀರಾ? ಎ ಖಾತಾ, ಬಿ ಖಾತಾ ವಿಚಾರದಲ್ಲಿ ಅನುಸರಿಸುತ್ತಿರುವ ಕ್ರಮವೇನು? ದೀರ್ಘಾವಧಿಗೆ ಆಸ್ತಿಗಳನ್ನು ಗುತ್ತಿಗೆ ನೀಡಿರುವುದಕ್ಕೆ ಕಾನೂನಿನಲ್ಲಿ ಯಾವ ಅವಕಾಶವಿದೆ? ಒಂದರ ಹಿಂದೊಂದರಂತೆ ಬಂದ ಪ್ರಶ್ನೆಗಳು ಕಂದಾಯ ಶಾಖೆಯ ಮೂಲ ಜವಾಬ್ದಾರಿಯನ್ನೇ ಮುನ್ನೆಲೆಗೆ ತಂದವು.

ಹಿಂದೆ ನೀಡಿರುವ ಗುತ್ತಿಗೆಗಳೆಂಬ ವಿವರಣೆಗೆ, ಈಗಿರುವ ಅಧಿಕಾರಿಗಳ ಹೊಣೆಗಾರಿಕೆಯನ್ನು ನೆನಪಿಸುವ ಪ್ರಶ್ನೆಯೇ ಎದುರಾಯಿತು. ಹಿಂದಿನವರು ಮಾಡಿದ್ದನ್ನು ಈಗಿನವರು ಪರಿಶೀಲಿಸಬೇಕಲ್ಲವೇ ಎಂಬುದು ಅವರ ಮಾತಿನ ತಿರುಳು.
ಇಲ್ಲಿಯೇ ಪಾಲಿಕೆ ಆಡಳಿತ ಉತ್ತರಿಸಬೇಕಾದ ಮುಖ್ಯ ಪ್ರಶ್ನೆಯಿದೆ.
ಆಸ್ತಿ ಪಟ್ಟಿಯಲ್ಲಿ ಸಂಖ್ಯೆ ದಾಖಲಿಸುವುದರಿಂದ ಕರ್ತವ್ಯ ಮುಗಿಯುತ್ತದೆಯೇ? ಗುತ್ತಿಗೆ ಅವಧಿ, ನವೀಕರಣ, ಬಾಡಿಗೆ ವಸೂಲಿ ಹಾಗೂ ಅವಧಿ ಮೀರಿದ ಬಳಿಕದ ಕ್ರಮಗಳವರೆಗೆ ನಿರಂತರ ನಿಗಾ ಇರಬೇಕಲ್ಲವೇ? ಸಾರ್ವಜನಿಕ ಆಸ್ತಿ ಆದಾಯದ ಮೂಲವಾಗಬೇಕಾದರೆ ಕಡತಗಳು ಚಲಿಸಬೇಕು; ಅವುಗಳಲ್ಲಿರುವ ಷರತ್ತುಗಳು ಜಾರಿಯಾಗಬೇಕು.
ಮಾರುಕಟ್ಟೆಯಿಂದ ಬಸ್ ನಿಲ್ದಾಣದವರೆಗೆ ರಸೀದಿಯ ಪ್ರಶ್ನೆ
ಎಪಿಎಂಸಿಯಲ್ಲಿ ರೈತರ ವಹಿವಾಟಿಗೆ ಸಂಬಂಧಿಸಿದ ರಸೀದಿ ಹಾಗೂ ದರದ ಮಾಹಿತಿಯನ್ನು ಉಪಲೋಕಾಯುಕ್ತರು ಪ್ರಶ್ನಿಸಿದರು.

ರೈತ ಬೆಳೆದ ಉತ್ಪನ್ನ ಮಾರುಕಟ್ಟೆ ತಲುಪಿದ ನಂತರ ಅದರ ವ್ಯವಹಾರಕ್ಕೂ ಸ್ಪಷ್ಟ ಲೆಕ್ಕ ಇರಬೇಕು ಎಂಬ ಸಂಗತಿ ಅಲ್ಲಿ ಮುಖ್ಯವಾಯಿತು.
ಕೇಂದ್ರ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಕೆಗೆ ದರ ಫಲಕವಿಲ್ಲದಿರುವುದು, ಹಣ ಪಡೆದರೂ ರಸೀದಿ ನೀಡದಿರುವುದು ಗಮನಕ್ಕೆ ಬಂತು. ಉಪಹಾರ ಗೃಹಗಳ ಸ್ವಚ್ಛತೆ, ಆಹಾರ ಸುರಕ್ಷತೆ ಹಾಗೂ ದರಪಟ್ಟಿಯ ವಿಚಾರದಲ್ಲೂ ಸೂಚನೆ ನೀಡಿದರು. ಅವಧಿ ಮೀರಿದ ಆಹಾರವನ್ನು ಮುಟ್ಟುಗೋಲು ಹಾಕಲು ನಿರ್ದೇಶಿಸಿದರು.
ಪ್ರಯಾಣಿಕ ಪ್ರತಿದಿನ ಎದುರಿಸುವ ಸಣ್ಣ ಸಮಸ್ಯೆಗಳೇ ಪರಿಶೀಲನೆಯ ವೇಳೆ ಆಡಳಿತದ ದೊಡ್ಡ ಕೊರತೆಗಳಾಗಿ ಕಾಣಿಸಿಕೊಂಡವು.
ಬೀಮ್ಸ್ ಭೇಟಿಯಲ್ಲಿ ರೋಗಿಗಳೊಂದಿಗೆ ನಡೆಸಿದ ಮಾತುಕತೆ ಚಿಕಿತ್ಸೆಯ ವಿಚಾರದೊಂದಿಗೆ ಕನ್ನಡ, ಕರ್ನಾಟಕದ ಕುರಿತ ಸಂವಾದಕ್ಕೂ ಅವಕಾಶ ನೀಡಿತು.

ಪಾಲಿಕೆಯಲ್ಲಿ ಮಾಂಜಾ ದಾರದ ಪ್ರಕರಣದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ತರುವ ಸಂಗತಿಗಳಲ್ಲಿ ಇಲಾಖೆಗಳ ಪ್ರತಿಕ್ರಿಯೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿತು.
ದಿನದ ಭೇಟಿಗಳಲ್ಲಿ ಗಟ್ಟಿಯಾಗಿ ಕೇಳಿಸಿದ್ದು ಉಪಲೋಕಾಯುಕ್ತರ ಧ್ವನಿ. ಆದರೆ, ಅದರ ಪರಿಣಾಮ ಕಾಣಬೇಕಿರುವುದು ಅಧಿಕಾರಿಗಳ ಮುಂದಿನ ಕೆಲಸದಲ್ಲಿ. ವಿಶೇಷವಾಗಿ ಪಾಲಿಕೆಯ ಕಂದಾಯ ಶಾಖೆ ನೀಡಬೇಕಿರುವ ಉತ್ತರ ಮಾತಿನದಲ್ಲ—ಆಸ್ತಿಗಳ ಸ್ಪಷ್ಟ ಲೆಕ್ಕದಲ್ಲಿ, ಗುತ್ತಿಗೆಗಳ ಪರಿಶೀಲನೆಯಲ್ಲಿ, ಬಾಕಿ ವಸೂಲಿಯಲ್ಲಿ ಮತ್ತು ಕೈಗೊಂಡ ಕ್ರಮದ ದಾಖಲೆಗಳಲ್ಲಿ.
ಭೇಟಿ ಮುಗಿದಿದೆ. ಪ್ರಶ್ನೆಗಳು ಪಾಲಿಕೆಯಲ್ಲೇ ಉಳಿದಿವೆ.




Comments