;
top of page

ರಾಜ್ಯೋತ್ಸವ ಸಭೆಯಲ್ಲಿ ಮೇಯರ್‌, ಉಪಮೇಯರ್‌ಗೆ ಧಿಕ್ಕಾರ

Writer: vilas joshi
vilas joshi
9 hours ago
1 min read

ರಾಜ್ಯೋತ್ಸವಕ್ಕೆ ಆಹ್ವಾನ ನೀಡದಂತೆ ಕನ್ನಡಪರ ಮುಖಂಡರ ಪಟ್ಟು; ಪಾಲಿಕೆ ನಿರ್ಣಯದ ವಿಳಂಬಕ್ಕೆ ಆಕ್ರೋಶ.


ಬೆಳಗಾವಿ:

ರಾಜ್ಯೋತ್ಸವ ಆಚರಣೆಯ ರೂಪರೇಷೆ ಚರ್ಚಿಸಲು ಸೇರಿದ್ದ ಕನ್ನಡಪರ ಸಂಘಟನೆಗಳ ಮುಖಂಡರು, ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯ ಅಂಗೀಕರಿಸಲು ವಿಳಂಬ ಮಾಡಿದ ಈ ಇಬ್ಬರಿಗೂ ರಾಜ್ಯೋತ್ಸವದ ಆಹ್ವಾನ ನೀಡಬಾರದು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಈ ವಿವಾದ ಮುನ್ನೆಲೆಗೆ ಬಂತು.

ನವೆಂಬರ್‌ 1ರ ಆಚರಣೆಗೆ ಸಂಬಂಧಿಸಿದ ಚರ್ಚೆಯ ಮಧ್ಯೆ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ವಾಜೀದ ಹಿರೇಕೋಡಿ ಮತ್ತಿತರರು ಮೇಯರ್‌ ಹಾಗೂ ಉಪಮೇಯರ್‌ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.



‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎನ್ನುವ ಗೊತ್ತುವಳಿ ಸ್ವೀಕರಿಸಲು ಆರು ತಿಂಗಳು ತೆಗೆದುಕೊಂಡಿದ್ದಾರೆ. ಸರ್ಕಾರದಿಂದ ನಿರ್ದೇಶನ ಬಂದ ನಂತರವೇ ಠರಾವು ಅಂಗೀಕರಿಸಲಾಗಿದೆ’ ಎಂದು ಆರೋಪಿಸಿದರು. ಇಬ್ಬರನ್ನೂ ‘ನಾಡದ್ರೋಹಿಗಳು’ ಎಂದು ಕರೆದ ಮುಖಂಡರು, ರಾಜ್ಯೋತ್ಸವಕ್ಕೆ ಆಹ್ವಾನ ಕೊಡಲೇಬಾರದು ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಕರವೇ ಬಣದ ಸುರೇಶ ಗವನ್ನವರ ಮೇಯರ್‌ ಹಾಗೂ ಉಪಮೇಯರ್‌ ಪರವಾಗಿ ಎದ್ದು ನಿಂತರು. ಆಹ್ವಾನದ ವಿಚಾರದಲ್ಲಿ ಕನ್ನಡಪರ ಮುಖಂಡರ ನಡುವೆ ಭಿನ್ನ ನಿಲುವು ವ್ಯಕ್ತವಾಯಿತು.



ಹೋರಾಟಕ್ಕೆ ದೊರೆತ ಫಲ: ಜಿಲ್ಲಾಧಿಕಾರಿ

ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಅಂಗೀಕಾರವಾಗಿರುವುದು ಕನ್ನಡಪರ ಸಂಘಟನೆಗಳ ದೀರ್ಘಕಾಲದ ಹೋರಾಟಕ್ಕೆ ದೊರೆತ ಫಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹೇಳಿದರು.



‘ಸುಮಾರು 20–25 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಹೋರಾಟದಲ್ಲಿ ಇದು ಒಳ್ಳೆಯ ಹೆಜ್ಜೆ. ಅದರ ಶ್ರೇಯಸ್ಸು ಕನ್ನಡಪರ ಸಂಘಟನೆಗಳಿಗೆ ಸಲ್ಲಬೇಕು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಯಾವುದೇ ಸಂಶಯಕ್ಕೆ ಅವಕಾಶವಿಲ್ಲದಂತೆ ಪಾಲಿಕೆ ಸ್ಪಷ್ಟಪಡಿಸಿದೆ’ ಎಂದರು. ಈ ಪ್ರಕ್ರಿಯೆಯಲ್ಲಿ ಸರ್ಕಾರ, ಜಿಲ್ಲಾಡಳಿತ ಹಾಗೂ ಕನ್ನಡಪರ ಸಂಘಟನೆಗಳ ಸಹಕಾರವಿದೆ ಎಂದು ತಿಳಿಸಿದರು.

ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಉದ್ದೇಶದಿಂದ ಸುಮಾರು 57 ಕನ್ನಡಪರ ಸಂಘಟನೆಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ರೋಷನ್‌ ತಿಳಿಸಿದರು.



ಆಚರಣೆಯ ರೂಪರೇಷೆ, ಪಾಲಿಕೆಯಿಂದ ಆಗಬೇಕಾದ ವ್ಯವಸ್ಥೆಗಳು ಹಾಗೂ ಜಿಲ್ಲಾಡಳಿತ ಒದಗಿಸಬೇಕಾದ ನೆರವಿನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.



ಪೊಲೀಸ್‌ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸಂಭ್ರಮದ ಆಚರಣೆಯ ಸಿದ್ಧತೆ ನಡುವೆ ಮೇಯರ್‌–ಉಪಮೇಯರ್‌ಗೆ ಆಹ್ವಾನ ನೀಡುವ ವಿಚಾರ ಸಭೆಯ ಪ್ರಮುಖ ವಿವಾದವಾಗಿ ಹೊರಹೊಮ್ಮಿತು.

 
 
 

Comments


bottom of page