;
top of page

ಬೀದಿ ವ್ಯಾಪಾರಿಗಳ ನೆರವಿಗೆ ರಾಷ್ಟ್ರದ ಮಾನ್ಯತೆ, ಇಂದಿರಾ ಕ್ಯಾಂಟೀನ್‌ಗೆ ರಾಜ್ಯ ಪ್ರಶಸ್ತಿ

Writer: vilas joshi
vilas joshi
2 hours ago
1 min read

‘ಸ್ವನಿಧಿಯಿಂದ ಸಮೃದ್ಧಿ’ ವಿಭಾಗದಲ್ಲಿ ತುಮಕೂರು ಪಾಲಿಕೆಗೆ ದೇಶದಲ್ಲೇ ಮೊದಲ ಸ್ಥಾನ |


ಸ್ವಚ್ಛತೆ, ಗುಣಮಟ್ಟದ ಆಹಾರ ವಿತರಣೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಗೌರವ.


ತುಮಕೂರು —

ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ನೆರವಾಗುವ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲೇ ಮೊದಲ ಸ್ಥಾನ, ಸಾರ್ವಜನಿಕರಿಗೆ ಗುಣಮಟ್ಟದ ಊಟ ಒದಗಿಸುವ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ರಾಜ್ಯದ ಪ್ರಶಸ್ತಿ. ಹೀಗೆ ನಗರ ಬದುಕಿನ ಎರಡು ದೈನಂದಿನ ಅಗತ್ಯಗಳಿಗೆ ಸ್ಪಂದಿಸಿದ ತುಮಕೂರು ಮಹಾನಗರ ಪಾಲಿಕೆಗೆ ಸತತ ಎರಡು ದಿನಗಳಲ್ಲಿ ಬೆಂಗಳೂರು ಮತ್ತು ನವದೆಹಲಿಯಲ್ಲಿ ಗೌರವ ಸಂದಿದೆ.



ಒಂದು ಲಕ್ಷದಿಂದ ಹತ್ತು ಲಕ್ಷ ಜನಸಂಖ್ಯೆಯ ನಗರಗಳ ಪೈಕಿ ಅಗ್ರಸ್ಥಾನ

ಕೇಂದ್ರದ ಪಿಎಂ ಸ್ವನಿಧಿ ಯೋಜನೆಯ ‘ಸ್ವನಿಧಿಯಿಂದ ಸಮೃದ್ಧಿ’ ವಿಭಾಗದಲ್ಲಿ ಒಂದು ಲಕ್ಷದಿಂದ ಹತ್ತು ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ತುಮಕೂರು ಮಹಾನಗರ ಪಾಲಿಕೆ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿದೆ. ನವೆಂಬರ್‌ 20ರಂದು ನವದೆಹಲಿಯ ಡಾ. ಬಿ.ಆರ್‌. ಅಂಬೇಡ್ಕರ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ‘ಸ್ವನಿಧಿ ಸಮ್ಮಾನ್‌ ಪ್ರಶಸ್ತಿಗಳು–2026’ ಸಮಾರಂಭದಲ್ಲಿ ಪಾಲಿಕೆಯ ಆಯುಕ್ತೆ ಶುಭ‌ ಬಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದರು .



ಬೀದಿಬದಿ ವ್ಯಾಪಾರಿಗಳಿಗೆ ಅಗತ್ಯ ಆರ್ಥಿಕ ನೆರವು ಒದಗಿಸುವುದರ ಜತೆಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬೆಂಬಲ ನೀಡುವುದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಈ ಯೋಜನೆಯ ಉದ್ದೇಶ.


*ಊಟದ ಗುಣಮಟ್ಟ, ಸ್ವಚ್ಛತೆಗೆ ರಾಜ್ಯದ ಮನ್ನಣೆ*


ಇಂದಿರಾ ಕ್ಯಾಂಟೀನ್‌ನ ಅಚ್ಚುಕಟ್ಟಾದ ನಿರ್ವಹಣೆ, ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ವಿತರಿಸುವ ಕ್ರಮಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ತುಮಕೂರು ಪಾಲಿಕೆಯನ್ನು ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನದ ಅಂಗವಾಗಿ ನವೆಂಬರ್‌ 19ರಂದು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ನಡೆದ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್‌ ಪ್ರಶಸ್ತಿ ಪ್ರದಾನ ಮಾಡಿದರು

ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ.


ತುಮಕೂರು ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಿಗ್ಗೆ ಇಡ್ಲಿ, ಉಪ್ಪಿಟ್ಟು, ಪೊಂಗಲ್‌ ದೊರೆಯುತ್ತವೆ. ಮಧ್ಯಾಹ್ನ ಮತ್ತು ರಾತ್ರಿ ಚಪಾತಿ, ಮುದ್ದೆ, ಅನ್ನ, ಸಾಂಬಾರ್‌ ಹಾಗೂ ಪಲ್ಯ ನೀಡಲಾಗುತ್ತದೆ.

 
 
 

Comments


bottom of page