ಯುವತಿಯ ಕರೆ ನಂಬಿ ಬಂದ ಯುವಕನ ಅಪಹರಣ?
ಮಂಡೋಳಿ ರಸ್ತೆಗೆ ಕರೆಸಿಕೊಂಡು ಚಾಕುವಿನಿಂದ ಇರಿತ; ಕಾರಿನಲ್ಲಿ ಬಲವಂತವಾಗಿ ಕರೆದೊಯ್ದ ಆರೋಪ.
(Ebelagavi special)
ಬೆಳಗಾವಿ:
ಯುವತಿಯೊಬ್ಬಳು ದೂರವಾಣಿ ಕರೆ ಮಾಡಿ ಕರೆಸಿಕೊಂಡಿದ್ದಾಳೆ ಎನ್ನಲಾದ ಹಿನ್ನೆಲೆಯಲ್ಲಿ ಮಂಡೋಳಿ ರಸ್ತೆಗೆ ತೆರಳಿದ್ದ ಗಾಂಧಿನಗರದ ಯುವಕನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ, ಕಾರಿನಲ್ಲಿ ಅಪಹರಿಸಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡೋಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುವತಿಯ ಕರೆ ನಂಬಿ ಯುವಕ ನಿರ್ದಿಷ್ಟ ಸ್ಥಳಕ್ಕೆ ತೆರಳಿದ್ದ. ಆತ ಅಲ್ಲಿಗೆ ತಲುಪುತ್ತಿದ್ದಂತೆಯೇ ಹೊಂಚು ಹಾಕಿ ಕಾಯುತ್ತಿದ್ದ ಕೆಲವರು ಏಕಾಏಕಿ ದಾಳಿ ಮಾಡಿದ್ದಾರೆ. ಚಾಕುವಿನಿಂದ ಇರಿದು ಗಾಯಗೊಳಿಸಿದ ಬಳಿಕ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಾಂದರ್ಭಿಕ ಚಿತ್ರ
ಕರೆ ಮಾಡಿದ್ದ ಯುವತಿ ಯಾರು?
ಯುವಕನಿಗೆ ಕರೆ ಮಾಡಿದ್ದ ಯುವತಿ ಯಾರು? ಆಕೆ ಸ್ವಯಂಪ್ರೇರಿತವಾಗಿ ಕರೆ ಮಾಡಿದ್ದಳೇ ಅಥವಾ ಯಾರದ್ದಾದರೂ ಒತ್ತಡಕ್ಕೆ ಒಳಗಾಗಿ ಯುವಕನನ್ನು ಕರೆಸಿಕೊಂಡಿದ್ದಳೇ? ಹಲ್ಲೆ ಮತ್ತು ಅಪಹರಣಕ್ಕೆ ಮೊದಲೇ ಸಂಚು ರೂಪಿಸಲಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ತನಿಖೆಯ ಕೇಂದ್ರಬಿಂದುವಾಗಿವೆ.

ಯುವಕನ ಮೊಬೈಲ್ ಕರೆಗಳ ವಿವರ, ಕೊನೆಯ ಲೊಕೇಷನ್ ಹಾಗೂ ಯುವತಿಯೊಂದಿಗೆ ನಡೆದಿರಬಹುದಾದ ಸಂಭಾಷಣೆಯ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಯುವಕನನ್ನು ಕರೆಸಿಕೊಳ್ಳಲು ಬಳಸಿದ ದೂರವಾಣಿ ಸಂಖ್ಯೆಯ ಜಾಡು ಹಿಡಿಯುವ ಕಾರ್ಯವೂ ನಡೆದಿದೆ.
ನಾಪತ್ತೆ ದೂರಿಗೂ ನಂಟು?
ಇದೇ ಯುವಕ ನಾಪತ್ತೆಯಾಗಿರುವ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ನಾಪತ್ತೆ ಪ್ರಕರಣಕ್ಕೂ ಮಂಡೋಳಿ ರಸ್ತೆಯಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಹಲ್ಲೆ–ಅಪಹರಣ ಘಟನೆಗೂ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಮಲಗೌಡ ನಾಯ್ಕರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಂಡೋಳಿ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಿ, ಅನುಮಾನಾಸ್ಪದ ಕಾರು ಹಾಗೂ ವ್ಯಕ್ತಿಗಳ ಚಲನವಲನ ಪತ್ತೆಹಚ್ಚಲಾಗುತ್ತಿದೆ.
ಯುವತಿಯ ಕರೆ, ಚಾಕು ಇರಿತ ಮತ್ತು ಕಾರಿನಲ್ಲಿ ಕರೆದೊಯ್ದಿದ್ದಾರೆ ಎನ್ನಲಾದ ಮಾಹಿತಿಯ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ. ಯುವಕನ ಪತ್ತೆಯಾದ ಬಳಿಕವಷ್ಟೇ ಘಟನೆಯ ಹಿಂದಿನ ನಿಖರ ಕಾರಣ ಹಾಗೂ ಯುವತಿಯ ಪಾತ್ರದ ಕುರಿತು ಸ್ಪಷ್ಟ ಚಿತ್ರಣ ಹೊರಬರಲಿದೆ.




Comments