;
top of page

ಮನೆಗೆ ಕರೆಸಿ ಹೊಡೆದರೆ ಅದೇ ಬುದ್ಧಿವಾದವೇ?’

Writer: vilas joshi
vilas joshi
11 minutes ago
1 min read

‘

ಚನ್ನರಾಜ ಹಟ್ಟಿಹೊಳಿ ವಿರುದ್ಧ ಬಿಜೆಪಿ ಆಕ್ರೋಶ; ಕ್ರಿಮಿನಲ್ ಪ್ರಕರಣ ದಾಖಲಿಸಿ ಎಸ್‌ಐಟಿ ತನಿಖೆ ನಡೆಸಲು ಆಗ್ರಹ.



ಬೆಳಗಾವಿ:

ಹೆಸ್ಕಾಂ ಅಧಿಕಾರಿಗಳ ಮೇಲೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ರಾಜಕೀಯ ಸಂಘರ್ಷಕ್ಕೆ ತಿರುಗಿದೆ. ‘ಅಧಿಕಾರಿಗಳನ್ನು ಮನೆಗೆ ಕರೆಸಿ ಹೊಡೆಯುವುದೇ ಕಾಂಗ್ರೆಸ್‌ನ ಬುದ್ಧಿವಾದವೇ?’ ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ‌ ಪಿ.ರಾಜೀವ ಅವರು ಹಟ್ಟಿಹೊಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.


‘

ಅಧಿಕಾರಿಗಳೊಂದಿಗೆ ಗೂಂಡಾ ರೀತಿಯಲ್ಲಿ ವರ್ತಿಸುವುದು ಖಂಡನೀಯ. ಕಾಂಗ್ರೆಸ್ ಆಡಳಿತದಲ್ಲಿ ಕಾನೂನು–ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ನಾಯಕರ ಏಜೆಂಟರ ಕೊಠಡಿಗಳಾಗಿ, ಗೂಂಡಾಗಳ ಅಡ್ಡೆಗಳಾಗಿ ಬದಲಾಗುತ್ತಿವೆ’ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.



ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಅಧಿಕಾರಿಗಳು ದೂರು ನೀಡಲು ಹಿಂದೇಟು ಹಾಕಿರುವುದರ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ‘ದೂರು ನೀಡಲು ಮುಂದಾದ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದು ಯಾರು? ಪೊಲೀಸ್ ಠಾಣೆಯಲ್ಲಿ ನಡೆದ ಗೌಪ್ಯ ಮಾತುಕತೆಯ ಹಿಂದಿನ ಶಕ್ತಿ ಯಾವುದು? ಪ್ರಕರಣ ದಾಖಲಿಸುವ ಮೊದಲೇ ಪೊಲೀಸರು ಕೈಚೆಲ್ಲಿದ್ದೇಕೆ?’ ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.



ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ‘ಬೇರೆಯವರ ಬಗ್ಗೆ ಮಾತನಾಡಿ ನಾಲಿಗೆಯನ್ನು ಸುಸ್ತು ಮಾಡಿಕೊಳ್ಳಬೇಡಿ. ಮೊದಲು ರಾಜ್ಯದ ಕಾನೂನು–ಸುವ್ಯವಸ್ಥೆಗೆ ಆದ್ಯತೆ ಕೊಡಿ’ ಎಂದು ತಿರುಗೇಟು ನೀಡಿದ್ದಾರೆ.

‘ಈ ಪ್ರಕರಣವನ್ನು ಯಾವುದೇ ರಾಜಕೀಯ ಒತ್ತಡವಿಲ್ಲದೆ ತನಿಖೆ ನಡೆಸಬೇಕು. ವಿಶೇಷ ತನಿಖಾ ತಂಡ ರಚಿಸುತ್ತೀರೋ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸುತ್ತೀರೋ ಅದು ಸರ್ಕಾರಕ್ಕೆ ಬಿಟ್ಟದ್ದು. ಆದರೆ, ಸತ್ಯ ಹೊರಬರಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು’ ಎಂದು ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.

ಅಧಿಕಾರಿಗಳೇ ಸುರಕ್ಷಿತರಲ್ಲದಿದ್ದರೆ ಜನಸಾಮಾನ್ಯರ ಗತಿಯೇನು? ಎಂಬ ಪ್ರಶ್ನೆ ಇದೀಗ ಪ್ರಕರಣದ ಸುತ್ತ ಗಟ್ಟಿಯಾಗಿ ಕೇಳಿಬಂದಿದೆ.

 
 
 

Comments


bottom of page