;
top of page

ಬೆಳಗಾವಿಗೆ ಐಟಿ ‘ಬೂಸ್ಟ್’-2 ಸಾವಿರ ಉದ್ಯೋಗ ಸೃಷ್ಟಿಯ ಆಶಾಕಿರಣ- ಅಭಯ

  • Writer: vilas joshi
    vilas joshi
  • 39 minutes ago
  • 2 min read

ಐಟಿ ಕಂಪನಿಯೊಂದಿಗೆ ಅಂತಿಮ ಹಂತದ ಮಾತುಕತೆ: ಶಾಸಕ ಅಭಯ ಪಾಟೀಲ.


ಯಳ್ಳೂರು ಕೋಟೆಗೆ ₹60 ಕೋಟಿ ವೆಚ್ಚದಲ್ಲಿ ಕೇಬಲ್ ಕಾರ್ ಯೋಜನೆ.


ಸ್ಥಗಿತಗೊಂಡ ವಿಮಾನ ಮಾರ್ಗಗಳ ಪುನರಾರಂಭಕ್ಕೂ ಕೇಂದ್ರದ ಮೇಲೆ ಒತ್ತಡ


(E belagavi )


ಬೆಳಗಾವಿ: ನಗರದಲ್ಲೇ ಸುಮಾರು ಎರಡು ಸಾವಿರ ಯುವಜನರಿಗೆ ಉದ್ಯೋಗ ಕಲ್ಪಿಸುವ ಸಾಮರ್ಥ್ಯ ಹೊಂದಿರುವ ಐಟಿ ಕಂಪನಿಯೊಂದನ್ನು ಬೆಳಗಾವಿಗೆ ಕರೆತರಲು ಪ್ರಯತ್ನ ನಡೆಯುತ್ತಿದೆ. ಕಂಪನಿಯೊಂದಿಗೆ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದರು.


ನಗರದ ವಾರ್ಡ್‌ ನಂ.43ರಲ್ಲಿ ನಗರಸೇವಕಿ ವಾಣಿ ಜೋಶಿ ಅವರು ಗಣೇಶೋತ್ಸವ ಮಂಡಳಿಗಳಿಗೆ ಕೊಡಮಾಡಿದ ‘ಹಿಂದೂ’ ಎಂದು ಬರೆಯಲಾದ ಕುರ್ತಾಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.

‘ಉದ್ಯೋಗಕ್ಕಾಗಿ ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ಗೆ ತೆರಳುತ್ತಿರುವ ಬೆಳಗಾವಿಯ ಪ್ರತಿಭಾವಂತ ಯುವಕರಿಗೆ ಇಲ್ಲಿಯೇ ಅವಕಾಶ ಕಲ್ಪಿಸುವುದು ನಮ್ಮ ಗುರಿ.’

ಎರಡು ಸಾವಿರ ಜನರಿಗೆ ಉದ್ಯೋಗ ನೀಡಬಲ್ಲ ಕಂಪನಿಯೊಂದಿಗೆ ಅಂತಿಮ ಹಂತದ ಚರ್ಚೆ ನಡೆದಿದೆ. ಈ ಪ್ರಯತ್ನ ಕಾರ್ಯರೂಪಕ್ಕೆ ಬಂದರೆ ಬೆಳಗಾವಿಯ ಉದ್ಯೋಗ ಕ್ಷೇತ್ರಕ್ಕೆ ಹೊಸ ದಿಕ್ಕು ಸಿಗಲಿದೆ. ಸ್ಥಳೀಯ ಪ್ರತಿಭೆಗಳ ವಲಸೆ ತಡೆಯಲೂ ನೆರವಾಗಲಿದೆ ಎಂದು ಹೇಳಿದರು.


ವಿಮಾನ ಸಂಪರ್ಕ ಹೆಚ್ಚಿಸಲು ಒತ್ತಡ

ಕೈಗಾರಿಕೆಗಳು ಹಾಗೂ ಐಟಿ ಕಂಪನಿಗಳನ್ನು ಬೆಳಗಾವಿಗೆ ಆಕರ್ಷಿಸಲು ಪ್ರಮುಖ ನಗರಗಳಿಗೆ ನಿರಂತರ ವಿಮಾನ ಸಂಪರ್ಕ ಅತ್ಯಗತ್ಯ. ‘ಉಡಾನ್–3’ ಯೋಜನೆಯಡಿ ದೇಶದಲ್ಲೇ ಹೆಚ್ಚಿನ ವಿಮಾನಯಾನ ಸಂಪರ್ಕ ಪಡೆದ ನಗರವಾಗಿ ಬೆಳಗಾವಿ ಗುರುತಿಸಿಕೊಂಡಿತ್ತು. ನಂತರ ಕೆಲವು ಪ್ರಮುಖ ಮಾರ್ಗಗಳು ಸ್ಥಗಿತಗೊಂಡಿವೆ ಎಂದು ಅಭಯ ಪಾಟೀಲ ಹೇಳಿದರು.


ಬೆಳಗಾವಿಯಿಂದ ಈ ಹಿಂದೆ ಉದಯಪುರ, ಜೈಪುರ ಮತ್ತು ಚೆನ್ನೈಗೆ ವಿಮಾನ ಸೇವೆ ಇತ್ತು. ಉದ್ಯಮಿಗಳ ಸಂಚಾರಕ್ಕೆ ಅನುಕೂಲವಾಗುವ ಈ ಮಾರ್ಗಗಳನ್ನು ಪುನರಾರಂಭಿಸುವಂತೆ ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಡ ತರಲಾಗುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹಕಾರವನ್ನೂ ಪಡೆಯಲಾಗುವುದು ಎಂದು ತಿಳಿಸಿದರು.


ಯಳ್ಳೂರು ಕೋಟೆಗೆ ₹60 ಕೋಟಿ ಕೇಬಲ್ ಕಾರ್


ಐತಿಹಾಸಿಕ ಯಳ್ಳೂರು ಕೋಟೆಗೆ ಸುಮಾರು ₹60 ಕೋಟಿ ವೆಚ್ಚದಲ್ಲಿ ಕೇಬಲ್ ಕಾರ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಧಾರ್ಮಿಕ, ನೈಸರ್ಗಿಕ ಹಾಗೂ ಐತಿಹಾಸಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಆದರೆ, ಅವುಗಳಿಗೆ ನಿರೀಕ್ಷಿತ ಮಟ್ಟದ ಪ್ರಚಾರ ಸಿಕ್ಕಿಲ್ಲ. ವ್ಯಾಕ್ಸಿನ್ ಡಿಪೊದಲ್ಲಿ ನಾಲ್ಕು ಮಹತ್ವದ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ನವೆಂಬರ್‌ನಲ್ಲಿ ಉದ್ಘಾಟಿಸುವ ಉದ್ದೇಶವಿದೆ. ಅವು ಆರಂಭವಾದರೆ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆಯಿದೆ ಎಂದರು.


ನೀರಿನ ಯೋಜನೆ ವಿಳಂಬಕ್ಕೆ ಅಸಮಾಧಾನ


ನಗರದ ನಿರಂತರ ಕುಡಿಯುವ ನೀರಿನ ಯೋಜನೆ 2013ರಲ್ಲಿಯೇ ₹240 ಕೋಟಿ ವೆಚ್ಚದಲ್ಲಿ ಆರಂಭವಾಗಬೇಕಿತ್ತು. ಆಗಲೇ ಅನುಷ್ಠಾನಗೊಂಡಿದ್ದರೆ 2016ರ ವೇಳೆಗೆ ಪೂರ್ಣಗೊಳ್ಳುತ್ತಿತ್ತು. ವಿಳಂಬದಿಂದ ಯೋಜನೆಯ ವೆಚ್ಚ ₹588 ಕೋಟಿಗೆ ಏರಿತು ಎಂದು ಅಭಯ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆಗೆ ಅನುಮೋದನೆ ಪಡೆಯಲು ಹಲವು ಬಾರಿ ಪ್ರಯತ್ನಿಸಬೇಕಾಯಿತು. ದಿವಂಗತ ಅನಂತಕುಮಾರ್ ಅವರ ಸಹಕಾರವೂ ಮಹತ್ವದ್ದಾಗಿತ್ತು ಎಂದು ಸ್ಮರಿಸಿದರು.

ಎಲ್‌ಆ್ಯಂಡ್‌ಟಿ ಕಂಪನಿಯ ಪೈಪ್‌ಲೈನ್ ಕಾಮಗಾರಿಗಾಗಿ ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಮತ್ತೆ ಅಗೆಯಲಾಗುತ್ತಿದೆ. ರಸ್ತೆ ಹಾಗೂ ನೀರಿನ ಪೈಪ್‌ಲೈನ್ ಕಾಮಗಾರಿಗಳ ನಡುವೆ ಸಮನ್ವಯ ಇಲ್ಲದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಮಾದರಿ ನಗರಸೇವಕಿ ವಾಣಿ ಜೋಶಿ



ನಗರಸೇವಕಿ ವಾಣಿ ಜೋಶಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅಭಯ ಪಾಟೀಲ, ‘ನಗರಸೇವಕರು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ವಾಣಿ ಜೋಶಿ ಮಾದರಿಯಾಗಿದ್ದಾರೆ. ವಾರ್ಡ್‌ನ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುತ್ತಿದ್ದಾರೆ. ಕ್ರಿಯಾಶೀಲ ನಗರಸೇವಕಿಯಾಗಿ ವಾರ್ಡ್‌ನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ’ ಎಂದು ಅಭಿನಂದಿಸಿದರು.

ಬ್ರಾಹ್ಮಣ ಸಮಾಜ ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ, ಅರುಣಾ ನಾಯಕ, ಅರವಿಂದ ಹುನಗುಂದ, ಮಧು ಗುರವ ಹಾಗೂ ಶೇಖರ ಇನಾಮದಾರ್ ಮಾತನಾಡಿದರು.

ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ವಾರ್ಡ್‌ನ ನಿವಾಸಿಗಳು ಪಾಲ್ಗೊಂಡಿದ್ದರು.

--

ಸತತ ಪ್ರಯತ್ನವೇ ನಮ್ಮ ಸಂಕಲ್ಪ


‘ಬೆಳಗಾವಿಗೆ ಮೂಲಸೌಕರ್ಯ ಅಭಿವೃದ್ಧಿಯಷ್ಟೇ ಸಾಲದು. ಸ್ಥಳೀಯ ಯುವಜನರಿಗೆ ಇಲ್ಲಿಯೇ ಉದ್ಯೋಗ ಸೃಷ್ಟಿಯಾಗಬೇಕು. ಐಟಿ ಪಾರ್ಕ್, ರಕ್ಷಣಾ ಉತ್ಪಾದನಾ ಘಟಕಗಳು ಹಾಗೂ ಪ್ರವಾಸೋದ್ಯಮ ಯೋಜನೆಗಳನ್ನು ಸಾಕಾರಗೊಳಿಸಲು ಸತತ ಪ್ರಯತ್ನ ನಡೆಸಲಾಗುತ್ತಿದೆ.’

ಅಭಯ ಪಾಟೀಲ, ಶಾಸಕ

 
 
 

Comments


bottom of page