ಬೆಳಗಾವಿಯಲ್ಲಿ 'ಮುಂಬೈ ಮಾದರಿ'ಯ ಸಂಭ್ರಮ ---
- vilas joshi
- 20 hours ago
- 1 min read
ಅದ್ಧೂರಿ ಗಣೇಶ ಆಗಮನೋತ್ಸವಕ್ಕೆ ಜನಸಾಗರ
ಶಾಸಕ ಅಭಯ ಪಾಟೀಲರಿಂದ ಗಣೇಶನಿಗೆ ಮಹಾ ಆರತಿ.
(ಇ ಬೆಳಗಾವಿ ವಿಶೇಷ)
ಬೆಳಗಾವಿ
ಮುಂಬೈನ ಬೀದಿಗಳಲ್ಲಿ ಕಾಣಸಿಗುವ ವೈಭವ, ಕಣ್ಮನ ಸೆಳೆಯುವ ಅಲಂಕಾರ, ಯುವಕರ ಉತ್ಸಾಹ ಮತ್ತು ಜನಸಾಗರ ಈ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ಕಟ್ಟಿಕೊಡುವ ಮೂಲಕ ಬೆಳಗಾವಿಯಲ್ಲಿ ಅದ್ಧೂರಿ ಆಗಮನೋತ್ಸವ ಹೊಸ ಇತಿಹಾಸ ಬರೆಯಿತು.

ಕರ್ನಾಟಕ ದಲ್ಲಿಯೇ ಮೊದಲ ಬಾರಿಗೆ ಮುಂಬೈ ಮಾದರಿಯಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಆಗಮನೋತ್ಸವವನ್ನು ಆಯೋಜಿಸಲಾಗಿದೆ ಎಂಬ ಮಾತುಗಳು ಕಾರ್ಯಕ್ರಮದ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದವು.

ಗಣೇಶೋತ್ಸವ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ನಾಗರಿಕರ ಸಂಘಟಿತ ಪ್ರಯತ್ನದಿಂದ ನಡೆದ ಉತ್ಸವ ಬೆಳಗಾವಿಯ ಸಾಂಸ್ಕೃತಿಕ ಸಂಭ್ರಮಕ್ಕೆ ಹೊಸ ಮೆರುಗು ನೀಡಿತು.
ವಿಶೇಷ ಅಲಂಕಾರ, ಶಿಸ್ತುಬದ್ಧ ವ್ಯವಸ್ಥೆ ಮತ್ತು ಯುವಕರ ಉತ್ಸಾಹದಿಂದಾಗಿ ಇಡೀ ಪ್ರದೇಶ ಹಬ್ಬದ ವಾತಾವರಣದಲ್ಲಿ ಮಿಂದೆದ್ದಿತ್ತು.

ಕಾರ್ಯಕ್ರಮದ ವೈಭವ ಕಂಡ ಸಾರ್ವಜನಿಕರು ಕ್ಷಣಕಾಲ ತಾವು ಬೆಳಗಾವಿಯಲ್ಲಿದ್ದೇವೆಯೇ ಅಥವಾ ಮುಂಬೈನ ಉತ್ಸವವೊಂದರಲ್ಲಿ ಪಾಲ್ಗೊಂಡಿದ್ದೇವೆಯೇ ಎಂಬ ಮಾತುಗಳನ್ನು ಆಗಮನೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಅಭಯ ಪಾಟೀಲ ಹೇಳಿದರು.
"ಬೆಳಗಾವಿಯಲ್ಲಿ ಮೊದಲ ಬಾರಿಗೆ ಇಷ್ಟೊಂದು ಭವ್ಯ ಮತ್ತು ದಿವ್ಯವಾದ ಆಗಮನೋತ್ಸವ ನಡೆದಿದೆ. ಕಾರ್ಯಕ್ರಮದ ವೈಭವ ಕಂಡಾಗ ನಾವು ಬೇರೊಂದು ನಗರದಲ್ಲಿದ್ದೇವೆಯೇ ಎಂಬ ಭಾವನೆ ಮೂಡಿತು" ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
---
ಯುವಶಕ್ತಿಯ ಅನಾವರಣ

ಈ ಉತ್ಸವ ಕೇವಲ ಅದ್ಧೂರಿ ಕಾರ್ಯಕ್ರಮವಾಗಿ ಉಳಿಯಲಿಲ್ಲ. ಯುವಕರು ಮನಸ್ಸು ಮಾಡಿದರೆ ಶಿಸ್ತು, ಸಂಸ್ಕೃತಿ ಮತ್ತು ಸಂಭ್ರಮವನ್ನು ಒಟ್ಟುಗೂಡಿಸಿ ಎಂತಹ ದೊಡ್ಡ ಕಾರ್ಯಕ್ರಮವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದಕ್ಕೆ ನಿದರ್ಶನವಾಯಿತು.
ಬೆಳಗಾವಿಯ ವಿವಿಧ ಗಲ್ಲಿಯ ನಾಗರಿಕರು, ಯುವ ಸಮಿತಿಯ ಸದಸ್ಯರು ಹಾಗೂ ಮಂಡಳಿಯ ಎಲ್ಲ ಪದಾಧಿಕಾರಿಗಳು ಹಲವು ದಿನಗಳಿಂದ ನಡೆಸಿದ ಸಿದ್ಧತೆ ಕಾರ್ಯಕ್ರಮದ ಯಶಸ್ಸಿನಲ್ಲಿ ಎದ್ದು ಕಾಣಿಸಿತು. ಪ್ರತಿಯೊಂದು ವ್ಯವಸ್ಥೆಯಲ್ಲೂ ಕಾರ್ಯಕರ್ತರ ಪರಿಶ್ರಮ ಮತ್ತು ಸಂಘಟನಾ ಸಾಮಥ್ರ್ಯ ಪ್ರತಿಫಲಿಸಿತು.
--
ಉತ್ಸವ ಪರಂಪರೆಗೆ ಹೊಸ ಆಯಾಮ
ಗಣೇಶೋತ್ಸವ ಸೇರಿದಂತೆ ಸಾರ್ವಜನಿಕ ಉತ್ಸವಗಳಿಗೆ ಹೆಸರಾದ ಬೆಳಗಾವಿಯಲ್ಲಿ ಮುಂಬೈ ಮಾದರಿಯ ಆಗಮನೋತ್ಸವ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದೆ. ಜನರ ಸಹಭಾಗಿತ್ವ, ಯುವಕರ ಉತ್ಸಾಹ ಹಾಗೂ ಮಂಡಳಿಯ ಅಚ್ಚುಕಟ್ಟಾದ ಯೋಜನೆ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿತು.




Comments