;
top of page

ಗಡಿ ವಿಚಾರದಲ್ಲಿ ಸರ್ಕಾರದ ನಿಲುವೇ ಅಂತಿಮ: ಪಾಲಿಕೆಗೆ ಖಡಕ್ ಸೂಚನೆ

  • Writer: vilas joshi
    vilas joshi
  • 1 day ago
  • 1 min read

1988ರ ಸದನ ನಿರ್ಣಯದಂತೆ ನಡೆದುಕೊಳ್ಳಿ; ಇಂಥ ಪ್ರಸ್ತಾವನೆಗಳನ್ನು ಮತ್ತೆ ಸರ್ಕಾರಕ್ಕೆ ಕಳುಹಿಸಬೇಡಿ’.


ಬೆಳಗಾವಿ:

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಹಾನಗರ ಪಾಲಿಕೆ ಪ್ರತ್ಯೇಕ ನಿಲುವು ಕೈಗೊಳ್ಳುವ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ‘

1988ರ ಸದನ ನಿರ್ಣಯದಂತೆ ಮುಂದುವರಿಯಬೇಕು. ಇದೇ ಸ್ವರೂಪದ ಪ್ರಸ್ತಾವನೆಗಳನ್ನು ಮತ್ತೆ ಸರ್ಕಾರದ ಸ್ಪಷ್ಟೀಕರಣಕ್ಕಾಗಿ ಕಳುಹಿಸಬಾರದು’ ಎಂದು ಪಾಲಿಕೆಗೆ ಸೂಚಿಸಲು ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.

ಸೆಪ್ಟೆಂಬರ್ 4ರಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಆಗಸ್ಟ್ 29ರ ಸರ್ಕಾರದ ನಿರ್ದೇಶನವನ್ನು ಉಲ್ಲೇಖಿಸಲಾಗಿದ್ದು, 23 ಮಾರ್ಚ್ 1988ರ ಸದನ ನಿರ್ಣಯವೇ ಪಾಲಿಕೆಗೆ ಮಾರ್ಗಸೂಚಿ ಎಂದು ಸ್ಪಷ್ಟಪಡಿಸಲಾಗಿದೆ.

ಕನ್ನಡಪರ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಮೇ 13ರ ಪಾಲಿಕೆ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಅವರು ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯಕ್ಕೆ ಒತ್ತಾಯಿಸಿದ್ದರು.

ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಕಾರಣ ನಗರಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟನೆ ಪಡೆಯಲು ಆಗ ಸಭೆ ತೀರ್ಮಾನಿಸಿತ್ತು.

ಇದಕ್ಕೆ ಸಂಬಂಧಿಸಿದಂತೆ ಜುಲೈ 6ರಂದು ಜಿಲ್ಲಾಧಿಕಾರಿ ಕಚೇರಿ ಸಲ್ಲಿಸಿದ್ದ ವರದಿಯಲ್ಲಿ, ವಿಧಾನಸಭೆ–ವಿಧಾನಪರಿಷತ್ ಈಗಾಗಲೇ ಮಹಾಜನ ಆಯೋಗದ ವರದಿ ಜಾರಿಗೆ ಬದ್ಧತೆ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿತ್ತು. 2022ರ ಡಿಸೆಂಬರ್ 22ರ ವಿಧಾನಸಭೆ ನಿರ್ಣಯದಲ್ಲಿಯೂ ಇದೇ ನಿಲುವು ಪುನರುಚ್ಚರಿಸಲಾಗಿದೆ.


ಇದೇ ವೇಳೆ, 2005ರಲ್ಲಿ ಕೆಲವು ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪರವಾಗಿ ಪಾಲಿಕೆ ಕೈಗೊಂಡಿದ್ದ ನಿರ್ಣಯವನ್ನು ಸರ್ಕಾರವೇ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆಯ ಸೆಕ್ಷನ್ 98(2) ಅಡಿ ಅಮಾನತು ಗೊಳಿಸಿದ್ದನ್ನೂ ದಾಖಲೆ ನೆನಪಿಸಿದೆ.

ಒಟ್ಟಿನಲ್ಲಿ, ‘ಗಡಿ ವಿಚಾರದಲ್ಲಿ ಪಾಲಿಕೆಯದ್ದಲ್ಲ; ವಿಧಾನಮಂಡಲದ ನಿಲುವೇ ಅಂತಿಮ’ ಎಂಬ ಖಡಕ್ ಸಂದೇಶವನ್ನು ಸರ್ಕಾರ ರವಾನಿಸಿದೆ.

 
 
 

Comments


bottom of page