ಮಲಪ್ರಭಾ ನಿಂತರೆ ಲಾಭ ಯಾರ ಕಾರ್ಖಾನೆಗೆ?’
ಹರ್ಷ ಶುಗರ್ಸ್, ಮೃಣಾಲ ಶುಗರ್ಸ್ ಹೆಸರು ಪ್ರಸ್ತಾಪಿಸಿ ಸಿದಗೌಡ ಮೋದಗಿ ಪ್ರಶ್ನೆ;
ಹೆಬ್ಬಾಳಕರ , ಚನ್ನರಾಜ ಹಟ್ಟಿಹೊಳಿ ಸ್ಪಷ್ಟನೆಗೆ ಆಗ್ರಹ
(Ebelagavi ವಿಶೇಷ
ಬೆಳಗಾವಿ
ಕಬ್ಬು ನುರಿಸುವ ಹಂಗಾಮು ಆರಂಭವಾಗಿ ನಾಲ್ಕೇ ದಿನಕ್ಕೆ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಟರ್ಬೈನ್ ಸ್ಫೋಟಗೊಂಡಿದೆ. ಕಾರ್ಖಾನೆಯೂ ಸ್ಥಗಿತವಾಗಿದೆ.
ಈಗ ರೈತರ ಮುಂದಿರುವ ಪ್ರಶ್ನೆ ಸ್ಫೋಟಕ್ಕೆ ಕಾರಣವೇನು ಎಂಬುದಷ್ಟೇ ಅಲ್ಲ.
ಮಲಪ್ರಭಾ ನಿಂತ ಬಳಿಕ ಅದರ ವ್ಯಾಪ್ತಿಯ ಕಬ್ಬು ಎಲ್ಲಿಗೆ ಹೋಗುತ್ತಿದೆ, ಅದರಿಂದ ಯಾರಿಗೆ ಲಾಭವಾಗುತ್ತಿದೆ?
ಈ ಪ್ರಶ್ನೆಯೊಂದಿಗೆ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ, ಹೆಬ್ಬಾಳಕರ ಪರಿವಾರ ಮತ್ತು ಚನ್ನರಾಜ ಹಟ್ಟಿಹೊಳಿ ಅವರ ಪಾತ್ರದ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.
ಹರ್ಷ ಶುಗರ್ಸ್ ಹಾಗೂ ಮೃಣಾಲ ಶುಗರ್ಸ್ ಹೆಸರುಗಳನ್ನೂ ಪ್ರಸ್ತಾಪಿಸಿರುವ ಅವರು, ಸಹಕಾರಿ ಕಾರ್ಖಾನೆ ಸ್ಥಗಿತಗೊಂಡ ನಂತರದ ಕಬ್ಬು ಸಾಗಣೆ ಮತ್ತು ನುರಿಸುವಿಕೆಯ ಲೆಕ್ಕವನ್ನು ರೈತರ ಮುಂದೆ ಇಡುವಂತೆ ಆಗ್ರಹಿಸಿದ್ದಾರೆ.

‘ಕಾರ್ಖಾನೆ ಹಾಳು ಮಾಡಿದವರು ಯಾರು ಎಂಬುದಕ್ಕೆ ಉತ್ತರ ಬೇಕು.
ಮಲಪ್ರಭಾ ನಿಂತಾಗ ಕಬ್ಬು ಯಾವ ಕಾರ್ಖಾನೆಗೆ, ಯಾರ ನಿರ್ಧಾರದ ಮೇಲೆ ಹೋಗುತ್ತಿದೆ ಎಂಬುದನ್ನೂ ರೈತರಿಗೆ ತಿಳಿಸಬೇಕು’ ಎಂಬುದು ಮೋದಗಿ ಎತ್ತಿರುವ ಪ್ರಶ್ನೆಗಳ ಸಾರ.
ಪುನಶ್ಚೇತನದ ಬೆನ್ನಲ್ಲೇ ಸ್ಫೋಟ
ಕಾರ್ಖಾನೆಯ ಪುನಶ್ಚೇತನಕ್ಕೆ ಎಷ್ಟು ಹಣ ಖರ್ಚಾಗಿದೆ? ಯಾವ ಯಂತ್ರಗಳನ್ನು ದುರಸ್ತಿ ಮಾಡಲಾಗಿದೆ? ಹಂಗಾಮು ಆರಂಭಿಸುವ ಮುನ್ನ ಟರ್ಬೈನ್‌ನ ತಾಂತ್ರಿಕ ಪರೀಕ್ಷೆ ನಡೆದಿತ್ತೇ? ನುರಿಸುವಿಕೆಗೆ ಕಾರ್ಖಾನೆ ಸಿದ್ಧವಾಗಿದೆ ಎಂದು ಯಾರು ದೃಢಪಡಿಸಿದ್ದರು? ನಾಲ್ಕೇ ದಿನದಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಈ ಪ್ರತಿಯೊಂದು ಪ್ರಶ್ನೆಗೂ ದಾಖಲೆ ಸಮೇತ ಉತ್ತರ ನೀಡಬೇಕು ಎಂದು ಮೋದಗಿ ಒತ್ತಾಯಿಸಿದ್ದಾರೆ.
ಸ್ಫೋಟದ ನಿಖರ ಕಾರಣ ಮತ್ತು ಕಾರ್ಖಾನೆಗೆ ಸಂಭವಿಸಿದ ನಷ್ಟ ತಿಳಿಯಲು ಸ್ವತಂತ್ರ ತಾಂತ್ರಿಕ ತನಿಖೆ ನಡೆಸಬೇಕು. ಅದರ ವರದಿಯನ್ನು ಬಹಿರಂಗಪಡಿಸಿ, ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿಸಿದವರ ಹೊಣೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಹರ್ಷ, ಮೃಣಾಲ ಶುಗರ್ಸ್ ಪ್ರಸ್ತಾಪ ಏಕೆ?
ಮಲಪ್ರಭಾ ಕಾರ್ಖಾನೆ ನಿಂತ ನಂತರ ರೈತರು ತಂದ ಕಬ್ಬನ್ನು ಹರ್ಷ ಶುಗರ್ಸ್‌ಗೆ ಸಾಗಿಸಲಾಗಿದೆ ಎಂಬ ವಿಚಾರದ ಕುರಿತು ಮೋದಗಿ ಪ್ರಶ್ನೆ ಎತ್ತಿದ್ದಾರೆ.
ಈ ಸಾಗಣೆಗೆ ಯಾರು ಅನುಮೋದನೆ ನೀಡಿದರು? ಯಾವ ಷರತ್ತುಗಳ ಮೇಲೆ ಕಬ್ಬು ಕಳುಹಿಸಲಾಗಿದೆ?
ತೂಕ, ಕಬ್ಬಿನ ದರ ಮತ್ತು ಹಣ ಪಾವತಿಯ ದಾಖಲೆಗಳನ್ನು ರೈತರಿಗೆ ನೀಡಲಾಗಿದೆಯೇ ಎಂದು ಕೇಳಿದ್ದಾರೆ.
ಅದೇ ಸಂದರ್ಭದಲ್ಲಿ ಮೃಣಾಲ ಶುಗರ್ಸ್ ಹೆಸರನ್ನೂ ಪ್ರಸ್ತಾಪಿಸಿರುವ ಅವರು, ಮಲಪ್ರಭಾದ ವ್ಯಾಪ್ತಿಯ ಕಬ್ಬು ಬೇರೆ ಕಾರ್ಖಾನೆಗಳಿಗೆ ಹೋಗುವ ವ್ಯವಸ್ಥೆಯ ಸಂಪೂರ್ಣ ವಿವರವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಬ್ಬು ಸಾಗಣೆಯ ದಾಖಲೆಗಳು ಹೊರಬಂದಾಗ ಮಾತ್ರ ಯಾವ ಕಾರ್ಖಾನೆಗೆ ಎಷ್ಟು ಕಬ್ಬು ಹೋಗಿದೆ ಎಂಬುದು ಸ್ಪಷ್ಟವಾಗಲಿದೆ.
‘ಹೆಬ್ಬಾಳಕರ ಉತ್ತರಿಸಲಿ’

ಕಾರ್ಖಾನೆಯ ದುಸ್ಥಿತಿಯ ಬಗ್ಗೆ ಮಾತನಾಡುವಾಗ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಚನ್ನರಾಜ ಹಟ್ಟಿಹೊಳಿ ಅವರ ಜವಾಬ್ದಾರಿಯ ಪ್ರಶ್ನೆಯನ್ನು ಕಡೆಗಣಿಸಲಾಗದು ಎಂದು ಮೋದಗಿ ಹೇಳಿದ್ದಾರೆ.
ಸಹಕಾರಿ ಸಂಸ್ಥೆಯ ನಿರ್ಧಾರಗಳಿಂದ ನಷ್ಟ ಅನುಭವಿಸುವವರು ರೈತರು. ಆದ್ದರಿಂದ ಕಾರ್ಖಾನೆ ನಡೆಸಿದವರು ಪುನಶ್ಚೇತನ ವೆಚ್ಚದಿಂದ ಹಿಡಿದು ಸ್ಫೋಟದ ಬಳಿಕದ ಕಬ್ಬು ಸಾಗಣೆಯವರೆಗೆ ಪೂರ್ಣ ಲೆಕ್ಕ ನೀಡಬೇಕು ಎಂಬುದು ಅವರ ಆಗ್ರಹ.
ರೈತರು ಕೇಳುತ್ತಿರುವ ಲೆಕ್ಕ
ಟರ್ಬೈನ್ ಸ್ಫೋಟಕ್ಕೆ ನಿಖರ ಕಾರಣವೇನು? ಹಂಗಾಮಿನ ಮುನ್ನ ಯಂತ್ರ ಪರೀಕ್ಷೆ ನಡೆದಿತ್ತೇ?
ಪುನಶ್ಚೇತನಕ್ಕೆ ಎಷ್ಟು ವೆಚ್ಚವಾಗಿದೆ? ಯಾವ ಕಾಮಗಾರಿಗಳು ಪೂರ್ಣಗೊಂಡಿವೆ?

ಮಲಪ್ರಭಾ ನಿಂತ ಬಳಿಕ ಎಷ್ಟು ಕಬ್ಬು ಹರ್ಷ ಶುಗರ್ಸ್‌ಗೆ ಸಾಗಿಸಲಾಗಿದೆ?
ಮೃಣಾಲ ಶುಗರ್ಸ್‌ಗೆ ಕಬ್ಬು ಸಾಗಿದೆಯೇ? ಸಾಗಿದ್ದರೆ ಎಷ್ಟು ಮತ್ತು ಯಾವ ಷರತ್ತುಗಳ ಮೇಲೆ?
ರೈತರ ಕಬ್ಬಿನ ತೂಕ, ದರ ಹಾಗೂ ಹಣ ಪಾವತಿಗೆ ಯಾರು ಹೊಣೆ?




Comments