ಪೇಜಾವರ ಶ್ರೀಗಳ ಜನ್ಮಶತಾಬ್ದಕ್ಕೆ ಪಂಚವಾರ್ಷಿಕ ಸಂಕಲ್ಪ
ಪ್ರಧಾನಿ ಮೋದಿ ಅವರಿಂದ ಲಾಂಛನ ಅನಾವರಣ; ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸಲು ಸಲಹೆ
ನವದೆಹಲಿ:
ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಾಬ್ದ ಅಂಗವಾಗಿ 2031ರವರೆಗೆ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಂಚವಾರ್ಷಿಕ ಯೋಜನೆಗಳ ಅಧಿಕೃತ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವದೆಹಲಿಯಲ್ಲಿ ಅನಾವರಣಗೊಳಿಸಿದರು.
ನವದೆಹಲಿಯ ವಸಂತ್‌ಕುಂಜ್‌ನಲ್ಲಿರುವ ಪೇಜಾವರ ಶಾಖಾಮಠದ ವೇದವ್ಯಾಸ ಗುರುಕುಲದ ಶ್ರೀಕೃಷ್ಣಧಾಮದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು,
ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭ ಜನ್ಮಶತಾಬ್ದ ಯೋಜನೆಯ ಉದ್ದೇಶ ಮತ್ತು ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.

ಶ್ರೀ ವಿಶ್ವೇಶತೀರ್ಥರ ಜನ್ಮಶತಾಬ್ದವನ್ನು ಕೇವಲ ಸ್ಮರಣೋತ್ಸವವಾಗಿ ಆಚರಿಸದೆ, ಅವರ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಮುಂದುವರಿಸುವ ಕಾರ್ಯಕ್ರಮಗಳನ್ನು ಐದು ವರ್ಷಗಳ ಕಾಲ ನಡೆಸಲು ಪೇಜಾವರ ಮಠ ಉದ್ದೇಶಿಸಿದೆ. ಅದರ ಗುರುತಾಗಿ ರೂಪಿಸಿರುವ ಲಾಂಛನವನ್ನು ಪ್ರಧಾನಿ ಬಿಡುಗಡೆ ಮಾಡಿದರು.
ಉಡುಪಿ–ದ್ವಾರಕಾ ನಂಟಿಗೆ ಒತ್ತು
ಲಾಂಛನ ಅನಾವರಣಗೊಳಿಸಿದ ಮೋದಿ, ‘ಶ್ರೀ ವಿಶ್ವೇಶತೀರ್ಥರು ಹಾಗೂ ಪೇಜಾವರ ಮಠ ಸಮಾಜಕ್ಕೆ ನೀಡಿರುವ ಕೊಡುಗೆ ಸದಾ ಪ್ರೇರಣಾದಾಯಕ. ಜನ್ಮಶತಾಬ್ದ ಯೋಜನೆಗಳು ಸಮಾಜ ಮತ್ತು ದೇಶಕ್ಕೆ ಮತ್ತಷ್ಟು ಬಲ ನೀಡಲಿ’ ಎಂದು ಹಾರೈಸಿದರು.
‘ಉಡುಪಿ ಮತ್ತು ದ್ವಾರಕೆಯ ನಡುವೆ ಗಾಢವಾದ ಧಾರ್ಮಿಕ ಸಂಬಂಧವಿದೆ. ಆದ್ದರಿಂದ ಜನ್ಮಶತಾಬ್ದ ಪಂಚವಾರ್ಷಿಕ ಯೋಜನೆಗಳಲ್ಲಿ ದ್ವಾರಕೆಯನ್ನೂ ಸೇರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು’ ಎಂದು ಸಲಹೆ ನೀಡಿದರು.
ಬಿಜೆಪಿಯ ಬೆಳವಣಿಗೆಗೆ ಉಡುಪಿ ನೀಡಿರುವ ಕೊಡುಗೆಯನ್ನೂ ಪ್ರಧಾನಿ ಇದೇ ವೇಳೆ ಸ್ಮರಿಸಿದರು.

ಮೋದಿಗೆ ಯಕ್ಷಗಾನದ ರಾಜಕಿರೀಟ
ಪ್ರಧಾನಿಯನ್ನು ಆಶೀರ್ವದಿಸಿದ ವಿಶ್ವಪ್ರಸನ್ನತೀರ್ಥ ಶ್ರೀಗಳು, ಅವರಿಗೆ ಯಕ್ಷಗಾನದ ರಾಜಕಿರೀಟ ತೊಡಿಸಿ, ಶಾಲು ಹೊದಿಸಿದರು. ಸ್ವರ್ಣಲೇಪಿತ ಕಾಲೀಯಮರ್ದನ ಕೃಷ್ಣನ ಪ್ರತಿಮೆ, ಫಲ ಹಾಗೂ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಮೋದಿ ಅವರ ಜನ್ಮದಿನದ ಅಂಗವಾಗಿ ಅವರ ಹೆಸರು, ಗೋತ್ರ, ನಕ್ಷತ್ರ ಮತ್ತು ರಾಶಿಯಲ್ಲಿ ಸಂಕಲ್ಪ ನೆರವೇರಿಸಿ ವೇದವ್ಯಾಸ ಗುರುಕುಲದಲ್ಲಿ ನಡೆಸಿದ್ದ ಪೂರ್ಣ ನವಗ್ರಹ ಹೋಮ ಹಾಗೂ ರಾಷ್ಟ್ರಸೂಕ್ತ ಹೋಮದ ಪ್ರಸಾದವನ್ನೂ ನೀಡಿದರು.
ದೇಶ ಮತ್ತು ಧರ್ಮದ ಒಳಿತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪ್ರಧಾನಿ ಮೋದಿ, ಮೂರನೇ ಅವಧಿಯಲ್ಲೂ ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ದೇಶ ಮತ್ತು ಭಾರತೀಯರ ಗೌರವವನ್ನು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರು ಇನ್ನೂ ದೀರ್ಘಕಾಲ ಯಶಸ್ವಿಯಾಗಿ ದೇಶವನ್ನು ಮುನ್ನಡೆಸಲಿ’ ಎಂದು ಶ್ರೀಗಳು ಹಾರೈಸಿದರು.
ಮಾನವೀಯತೆ ಮರೆತ ಕಾಂಗ್ರೆಸ್

‘ದೆಹಲಿ ಚಾತುರ್ಮಾಸ್ಯ ಸಾರ್ಥಕ’
‘ಇಂದ್ರಪ್ರಸ್ಥದಲ್ಲಿ ಕೈಗೊಂಡ ಚಾತುರ್ಮಾಸ್ಯ ವ್ರತ ಸಂತೋಷ ಮತ್ತು ತೃಪ್ತಿ ತಂದಿದೆ. ದೇಶ–ಧರ್ಮದ ಒಳಿತಿಗಾಗಿ ಹೋಮ–ಹವನ, ಸತ್ಸಂಗ ಮತ್ತು ಜಪಯಜ್ಞಗಳನ್ನು ನಡೆಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಮಂತ್ರೋಪದೇಶ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಗುರುಗಳ ಜನ್ಮಶತಾಬ್ದ ಯೋಜನೆಯ ಲಾಂಛನ ಪ್ರಧಾನಿಯಿಂದ ಅನಾವರಣಗೊಂಡಿರುವುದು ಅರ್ಥಪೂರ್ಣ’ ಎಂದು ವಿಶ್ವಪ್ರಸನ್ನತೀರ್ಥರು ಹೇಳಿದರು.
ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್, ಉದ್ಯಮಿಗಳಾದ ಪಿ. ರಾಮಪ್ರಸಾದ್, ಡಾ. ಕೆ. ಪ್ರಕಾಶ್ ಶೆಟ್ಟಿ, ರವಿ ಶ್ಯಾಮ್, ನವದೆಹಲಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಹರೀಶ್ ರಾಯಸ್, ಎಚ್. ವಾಸುದೇವ ಭಟ್, ಬದರಿ ನಾರಾಯಣ ಲಡ್ಡಾ, ಶ್ರೀನಿವಾಸ ಪ್ರಸಾದ್, ಟಿ.ಪಿ. ಅನಂತ್, ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ ಹಾಗೂ ಶ್ರೀಗಳ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ವಾಸುದೇವ ಭಟ್ ಪೆರಂಪಳ್ಳಿ ಭೇಟಿಯನ್ನು ಸಂಯೋಜಿಸಿದರು.
ಶ್ರೀಗಳ ಮಾರ್ಗದರ್ಶನದಲ್ಲಿ ಲಾಂಛನ
ಶ್ರೀ ವಿಶ್ವಪ್ರಸನ್ನತೀರ್ಥರ ಮಾರ್ಗದರ್ಶನದಲ್ಲಿ ವಾಸುದೇವ ಭಟ್ ಪೆರಂಪಳ್ಳಿ ಲಾಂಛನವನ್ನು ವಿನ್ಯಾಸಗೊಳಿಸಿದ್ದಾರೆ. ಉಡುಪಿಯ ನಿಧಿ ಗ್ರಾಫಿಟೆಕ್‌ನ ಮುರಳಿಕೃಷ್ಣ ರಾವ್ ಅದಕ್ಕೆ ಕಲಾರೂಪ ನೀಡಿದ್ದಾರೆ.
ಪಂಚವಾರ್ಷಿಕ ಯೋಜನೆ ಏನು?
ಶ್ರೀ ವಿಶ್ವೇಶತೀರ್ಥರ ಜನ್ಮಶತಾಬ್ದದ ಹಿನ್ನೆಲೆಯಲ್ಲಿ ರೂಪಿಸಿರುವ ಕಾರ್ಯಕ್ರಮ
2031ರವರೆಗೆ ಐದು ವರ್ಷಗಳ ಕಾಲ ವಿವಿಧ ಧಾರ್ಮಿಕ–ಸಾಮಾಜಿಕ ಚಟುವಟಿಕೆ
ಶ್ರೀಗಳ ಆದರ್ಶ ಮತ್ತು ಸೇವೆಯನ್ನು ಜನರಿಗೆ ತಲುಪಿಸುವ ಉದ್ದೇಶ
ಉಡುಪಿ ಜತೆಗೆ ದ್ವಾರಕೆಯನ್ನೂ ಯೋಜನೆಗೆ ಸೇರಿಸಲು ಪ್ರಧಾನಿ ಸಲಹೆ
ಸಮಾಜ ಮತ್ತು ರಾಷ್ಟ್ರಹಿತದ ಕಾರ್ಯಕ್ರಮಗಳಿಗೆ ಆದ್ಯತೆ




Comments