ಕಂದಾಯ ಉಪ ಆಯುಕ್ತರ ವಿರುದ್ಧ ಭುಗಿಲೆದ್ದ ಅಸಮಾಧಾನ
ಹಣಕ್ಕಾಗಿ ಒತ್ತಡ, ಅವಮಾನ, ಬೆದರಿಕೆಯ ಆರೋಪ |
ನ. 5ರಂದು ಬೆಳಿಗ್ಗೆ 10.30ಕ್ಕೆ ಸಂಘದ ಮೂಲಕ ದೂರು ಸಲ್ಲಿಸಲು ನಿರ್ಧಾರ.
ಬೆಳಗಾವಿ,
ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ತೆರಿಗೆ ವಸೂಲಿ ಗುರಿ ಕುರಿತು ಎದ್ದ ಅಸಮಾಧಾನ ಈಗ ಉಪ ಆಯುಕ್ತರ ವಿರುದ್ಧ ದೂರು ಸಲ್ಲಿಸುವ ಹಂತಕ್ಕೆ ತಲುಪಿದೆ.
ಕಂದಾಯ ಉಪ ಆಯುಕ್ತ ಸಿದ್ದು ಹುಲ್ಲೊಳ್ಳಿ ಅವರು ಹಣಕ್ಕಾಗಿ ಒತ್ತಡ ಹೇರಿದ್ದಾರೆ, ಸಿಬ್ಬಂದಿಯನ್ನು ಅವಮಾನಿಸಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಕಂದಾಯ ನಿರೀಕ್ಷಕರು, ಗುರುವಾರ ಬೆಳಿಗ್ಗೆ 10.30ಕ್ಕೆ ಸಿಬ್ಬಂದಿ ಸಂಘದ ಮೂಲಕ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.
ವಿಭಾಗದ ಮುಖ್ಯಸ್ಥರು ಮತ್ತು ಸಹೋದ್ಯೋಗಿಗಳನ್ನು ಉದ್ದೇಶಿಸಿ ಬುಧವಾರ ಹಂಚಿಕೊಂಡ ವಾಟ್ಸ್‌ಆ್ಯಪ್ ಸಂದೇಶದಲ್ಲಿ, ದೂರು ಸಲ್ಲಿಸುವ ವೇಳೆ ಎಲ್ಲರೂ ಹಾಜರಾಗುವಂತೆ ಮನವಿ ಮಾಡಲಾಗಿದೆ.
ಇದು ನನ್ನೊಬ್ಬನ ಹೋರಾಟವಲ್ಲ. ಹಣಕ್ಕಾಗಿ ಒತ್ತಡ, ಅವಮಾನ ಮತ್ತು ಬೆದರಿಕೆ ಎದುರಿಸಿದ ಎಲ್ಲ ಸಿಬ್ಬಂದಿಗೂ ನ್ಯಾಯ ಸಿಗಬೇಕು’ ಎಂದು ಸಂದೇಶದಲ್ಲಿ ಹೇಳಲಾಗಿದೆ.

ತೆರಿಗೆ ವಸೂಲಿ ಗುರಿಗೂ ಆಕ್ಷೇಪ
‘ಸಿದ್ದು ಡಿಸಿಆರ್’ ಹೆಸರಿನ ವಾಟ್ಸ್‌ಆ್ಯಪ್ ಚಾಟ್‌ನ ಸ್ಕ್ರೀನ್‌ಶಾಟ್‌ನಲ್ಲಿ, ತೆರಿಗೆ ವಸೂಲಿಗೆ ನಿಗದಿಪಡಿಸಿದ ಗುರಿ ಸರಿಯಾಗಿಲ್ಲ ಎಂದು ಸಂದೇಶ ಕಳುಹಿಸಿದವರು ಆಕ್ಷೇಪಿಸಿದ್ದಾರೆ.
ತಮ್ಮನ್ನು ಕಾರಣವಿಲ್ಲದೆ ಗುರಿಯಾಗಿಸಲಾಗುತ್ತಿದೆ ಎಂದಿರುವ ಅವರು, ತಮ್ಮ ಬಳಿ ವಿಡಿಯೊ ದಾಖಲೆಗಳಿವೆ ಎಂದೂ ಹೇಳಿಕೊಂಡಿದ್ದಾರೆ.
ಸಿಬ್ಬಂದಿ ನಡುವೆ ಗುಂಪುಗಾರಿಕೆ ತಂದ ಆರೋಪ
ಪ್ರತ್ಯೇಕ ಕಂದಾಯ ಸಿಬ್ಬಂದಿ ಸಂಘ ಬೇಕೆಂಬ ಬೇಡಿಕೆ ತಮಗಿರಲಿಲ್ಲ. ಸಮಸ್ಯೆಯನ್ನು ವಿಭಾಗದೊಳಗೇ ಬಗೆಹರಿಸಿಕೊಳ್ಳಬಹುದಿತ್ತು.
ಉಪ ಆಯುಕ್ತರ ನಡೆ ಸಿಬ್ಬಂದಿ ನಡುವೆ ಗುಂಪುಗಳು ಉಂಟಾಗಲು ಕಾರಣವಾಯಿತು ಎಂದು ಮತ್ತೊಂದು ಸಂದೇಶದಲ್ಲಿ ಆರೋಪಿಸಲಾಗಿದೆ. ಬುಧವಾರ ತಮ್ಮೊಂದಿಗೆ ನಿಂತ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಸಿಬ್ಬಂದಿ, ಗುರುವಾರದ ದೂರು ಸಲ್ಲಿಕೆಯಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳುವಂತೆ ಕೋರಿದ್ದಾರೆ.




Comments