;
top of page

ನಸುಕಿನಲ್ಲೇ ರೌಡಿಗಳ ಮನೆ ಬಾಗಿಲು ತಟ್ಟಿದ ಪೊಲೀಸರು

  • Writer: vilas joshi
    vilas joshi
  • 1 day ago
  • 1 min read

ಉತ್ತರ ವಲಯದ 1,041 ರೌಡಿಶೀಟರ್‌ಗಳ ಮನೆ ಮೇಲೆ ದಿಢೀರ್ ದಾಳಿ; 27 ದಾಖಲೆರಹಿತ ವಾಹನ, 9 ಮಾರಕಾಸ್ತ್ರ ಜಪ್ತಿ


ಬೆಳಗಾವಿ:

ಇನ್ನೂ ಬೆಳಕು ಹರಿದಿರಲಿಲ್ಲ. ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ಪೊಲೀಸ್ ತಂಡಗಳು ಏಕಕಾಲಕ್ಕೆ ಕಾರ್ಯಾಚರಣೆಗೆ ಇಳಿದಿದ್ದವು. ಕೆಲವೇ ಗಂಟೆಗಳಲ್ಲಿ 1,041 ಸಕ್ರಿಯ ರೌಡಿಶೀಟರ್‌ಗಳ ಮನೆಗಳನ್ನು ಜಾಲಾಡಿದ ಪೊಲೀಸರು, ಅವರ ಚಲನವಲನ ಹಾಗೂ ಅಪರಾಧ ಸಂಪರ್ಕಗಳ ಕುರಿತು ಮಾಹಿತಿ ಕಲೆಹಾಕಿದ್ದಾರೆ.


ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಭಾನುವಾರ ನಸುಕಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಾಳಿ ವೇಳೆ ಸಮರ್ಪಕ ದಾಖಲೆಗಳಿಲ್ಲದ 27 ವಾಹನಗಳು ಮತ್ತು 9 ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ ತಿಳಿಸಿದ್ದಾರೆ.


ವಿಜಯಪುರದಲ್ಲಿ ಅತಿ ಹೆಚ್ಚು 482, ಬೆಳಗಾವಿಯಲ್ಲಿ 201, ಗದಗದಲ್ಲಿ 195, ಬಾಗಲಕೋಟೆಯಲ್ಲಿ 117 ಹಾಗೂ ಧಾರವಾಡದಲ್ಲಿ 46 ರೌಡಿಶೀಟರ್‌ಗಳ ಮನೆಗಳನ್ನು ಪರಿಶೀಲಿಸಲಾಗಿದೆ.


ಕಾರ್ಯಾಚರಣೆ ಮುಂದುವರಿಕೆ.

ಜಪ್ತಿಯಾದ ವಾಹನ ಮತ್ತು ಶಸ್ತ್ರಾಸ್ತ್ರಗಳ ಮೂಲದ ಕುರಿತು ತನಿಖೆ ನಡೆಯುತ್ತಿದ್ದು, ಪತ್ತೆಯಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.

“ರೌಡಿಶೀಟರ್‌ಗಳ ಚಲನವಲನದ ಮೇಲೆ ನಿಗಾ ಬಿಗಿಗೊಳಿಸಲಾಗಿದೆ. ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಖಚಿತ. ಇಂತಹ ದಿಢೀರ್ ಕಾರ್ಯಾಚರಣೆಗಳು ಮುಂದುವರಿಯಲಿವೆ”

— ಸಂದೀಪ್ ಪಾಟೀಲ, ಐಜಿಪಿ, ಉತ್ತರ ವಲಯ.


ದಾಳಿಯ ಲೆಕ್ಕಾಚಾರ

1,041 ಮನೆಗಳ ಪರಿಶೀಲನೆ | 27 ವಾಹನ ಜಪ್ತಿ | 9 ಮಾರಕಾಸ್ತ್ರ ವಶ | ಇಬ್ಬರು ಪರಾರಿಗಳ ಬಂಧನ

 
 
 

Comments


bottom of page