;
top of page

12 ಸಾವಿರ ಕೋಟಿ ‘ಬಜೆಟ್‌ರಹಿತ’ ಕಾಮಗಾರಿ; ಗುತ್ತಿಗೆದಾರರಿಗೆ ಬಿಲ್‌ ಸಂಕಷ್ಟ ಹಿಂದಿನ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನಿರ್ಧಾರವೇ ಇಕ್ಕಟ್ಟಿಗೆ ಕಾರಣ: ಸಚಿವ ಸತೀಶ ಜಾರಕಿಹೊಳಿ

  • Writer: vilas joshi
    vilas joshi
  • 2 days ago
  • 1 min read

ವಿಜಯಪುರ:

ಬಜೆಟ್‌ನಲ್ಲಿ ಹಣ ಮೀಸಲಿಡದೆ ಹಿಂದಿನ ಬಿಜೆಪಿ ಸರ್ಕಾರ ₹12 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದೇ ಗುತ್ತಿಗೆದಾರರ ಬಿಲ್‌ ಪಾವತಿ ವಿಳಂಬಕ್ಕೆ ಮೂಲ ಕಾರಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.

ನಗರದಲ್ಲಿ ನಡೆದ ಗುತ್ತಿಗೆದಾರರ ಸಂಘದ ಬೆಳ್ಳಿ ಮಹೋತ್ಸವ ಹಾಗೂ ಗುತ್ತಿಗೆದಾರರ ಭವನವನ್ನು ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಅವರೊಂದಿಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಈ ಹಿಂದೆ ಮೂರು ತಿಂಗಳಿಗೊಮ್ಮೆ ಬಿಲ್‌ ಪಾವತಿಯಾಗುತ್ತಿತ್ತು. ಆದರೆ, ಹಣಕಾಸಿನ ಬೆಂಬಲವಿಲ್ಲದೇ ಕಾಮಗಾರಿ ಆರಂಭಿಸಿದ ಹಿಂದಿನ ಸರ್ಕಾರದ ತಪ್ಪಿನಿಂದ ಈಗ ಗುತ್ತಿಗೆದಾರರು ಮತ್ತು ನಮ್ಮ ಸರ್ಕಾರ ಎರಡೂ ಇಕ್ಕಟ್ಟಿಗೆ ಸಿಲುಕಿವೆ. ಬಾಕಿ ಬಿಲ್‌ ಬಿಡುಗಡೆ ಕುರಿತು ಮುಖ್ಯಮಂತ್ರಿ ಜತೆ ಮಹತ್ವದ ಸಭೆ ನಡೆಸಲಾಗಿದ್ದು, ಶೀಘ್ರ ಪಾವತಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ’ ಎಂದರು.

ಚಿಕ್ಕ ಗುತ್ತಿಗೆದಾರರ ಬಿಲ್‌ ಪಾವತಿಗೆ ಮೊದಲ ಆದ್ಯತೆ ನೀಡಲಾಗುವುದು. ಗುತ್ತಿಗೆ ನವೀಕರಣ ಅವಧಿಯನ್ನು ಹತ್ತು ವರ್ಷಕ್ಕೆ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ.



ಅಂದಾಜು ಮೊತ್ತಕ್ಕೆ ಅನುಗುಣವಾಗಿ ಅನುದಾನ ನೀಡಿದ್ದರಿಂದ ರಾಜ್ಯದಲ್ಲಿ ಶೇ 90ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ 48 ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ತಿಳಿಸಿದರು.

ಡಾ.ಎಂ.ಬಿ. ಪಾಟೀಲ ಮಾತನಾಡಿ, ‘ಸಾಲ ಮಾಡಿ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಬಿಲ್‌ ವಿಳಂಬವಾದರೆ ಬಡ್ಡಿಯ ಹೊರೆ ಬೀಳುತ್ತದೆ. ಹಿಂದಿನ ಸರ್ಕಾರ ಆರ್ಥಿಕ ಶಿಸ್ತು ಪಾಲಿಸದಿದ್ದರೂ, ಅದರ ತಪ್ಪನ್ನು ಮುಂದಿಟ್ಟುಕೊಂಡು ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಬಾಕಿ ಹಣ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ನಡೆಯಲಿದೆ’ ಎಂದರು.

 
 
 

Comments


bottom of page