ದಕ್ಷಿಣದಲ್ಲಿ ಹೊತ್ತಿತು 53 ಸಾವಿರ ‘ಮೋದಿ ಜ್ಯೋತಿ’
ಪ್ರಧಾನಿ ಜನ್ಮದಿನಕ್ಕೆ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಮನೆಮನೆ ದೀಪೋತ್ಸವ; ಬೆಳಕಿನಲ್ಲಿ ಮಿಂದೆದ್ದ ಬಡಾವಣೆಗಳು.
(ಇ ಬೆಳಗಾವಿ ವರದಿ)
ಬೆಳಗಾವಿ:
ಸೂರ್ಯ ಮುಳುಗುತ್ತಿದ್ದಂತೆ ಬೆಳಗಾವಿ ದಕ್ಷಿಣ ಕ್ಷೇತ್ರದ ಮನೆಗಳ ಅಂಗಳದಲ್ಲಿ ಒಂದೊಂದಾಗಿ ದೀಪಗಳು ಹೊತ್ತಿಕೊಂಡವು.
ಕೆಲವೇ ಹೊತ್ತಿನಲ್ಲಿ ಆ ದೀಪಗಳ ಸಂಖ್ಯೆ 53 ಸಾವಿರ ದಾಟಿತು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವು ದಕ್ಷಿಣ ಕ್ಷೇತ್ರದಲ್ಲಿ ಹೀಗೆ ಬೆಳಕಿನ ಸಂಭ್ರಮವಾಗಿ ರೂಪುಗೊಂಡಿತು.
ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಆಯೋಜಿಸಿದ್ದ ಈ ವಿಶಿಷ್ಟ ದೀಪೋತ್ಸವದಲ್ಲಿ ಕ್ಷೇತ್ರದ ಸುಮಾರು 53 ಸಾವಿರ ಕುಟುಂಬಗಳು ಪಾಲ್ಗೊಂಡವು. ಮನೆಗಳ ಬಾಗಿಲು, ಅಂಗಳ, ದೇವರ ಕೋಣೆ ಹಾಗೂ ಕಟ್ಟಡಗಳ ಮುಂಭಾಗದಲ್ಲಿ ದೀಪ ಬೆಳಗಿಸಿ, ಮೋದಿ ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಕೋರಲಾಯಿತು.

ವಾರ್ಡ್‌ವಾರು ದೀಪದ ಅಭಿಯಾನ
ದಕ್ಷಿಣ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ನಗರಸೇವಕರು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದರು.

ಮನೆಮನೆಗೆ ತೆರಳಿ ಜನರನ್ನು ದೀಪೋತ್ಸವದಲ್ಲಿ ಭಾಗಿಯಾಗುವಂತೆ ಮಾಡಿದರು. ಮಹಿಳೆಯರು ರಂಗೋಲಿ ಬಿಡಿಸಿ ದೀಪ ಹಚ್ಚಿದರೆ, ಮಕ್ಕಳು ಮತ್ತು ಯುವಕರು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.

ಏಕಕಾಲದಲ್ಲಿ ಸಾವಿರಾರು ದೀಪಗಳು ಪ್ರಜ್ವಲಿಸಿದ್ದರಿಂದ ಬಡಾವಣೆಗಳು ಹಬ್ಬದ ವಾತಾವರಣದಲ್ಲಿ ಮಿಂದೆದ್ದವು. ಪ್ರಧಾನಿ ಜನ್ಮದಿನವನ್ನು ಸಾಮೂಹಿಕ ಸಂಭ್ರಮವನ್ನಾಗಿಸಿದ ಈ ಕಾರ್ಯಕ್ರಮ ನಗರದಲ್ಲಿ ಗಮನ ಸೆಳೆಯಿತು.

ಪೂಜೆಯಿಂದ ಸೇವೆಯವರೆಗೆ...
ನಗರದ ಮತ್ತೊಂದು ಭಾಗದಲ್ಲಿ ಸಂಸದ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಬಿಮ್ಸ್‌ಗೆ ತೆರಳಿ ರೋಗಿಗಳಿಗೆ ಹಣ್ಣು–ಹಂಪಲು ವಿತರಿಸಿದರು. ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಮನೆಮನೆ ದೀಪ... ದಕ್ಷಿಣ ಕ್ಷೇತ್ರದ ತುಂಬೆಲ್ಲ ಮೋದಿ ಜನ್ಮದಿನದ ಬೆಳಕಿನ ಸಂಭ್ರಮ




Comments