ಉತ್ತರ ಕರ್ನಾಟಕದ ಕೈಗಾರಿಕಾ ಕಾರಿಡಾರ್‌ಗೆ ₹33 ಸಾವಿರ ಕೋಟಿ.
ರಾಜ್ಯ ಸರ್ಕಾರ ಭೂಮಿ ನೀಡಿದರೆ ಯೋಜನೆ ಅನುಷ್ಠಾನ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
‘ಕೆಎಲ್‌ಇಗೆ ಜಾಗತಿಕ ಮನ್ನಣೆ ತಂದುಕೊಟ್ಟವರು ಡಾ.ಪ್ರಭಾಕರ ಕೋರೆ’ |
ಹುಬ್ಬಳ್ಳಿ–ಅಂಕೋಲ ರೈಲು ಮಾರ್ಗ, ಬೇಲಿಕೇರಿ ಬಂದರು ಅಭಿವೃದ್ಧಿಗೆ ಕ್ರಮ.
ಹುಬ್ಬಳ್ಳಿ: ಉತ್ತರ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಹೊಸ ದಿಕ್ಕು ನೀಡಲಿರುವ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹33 ಸಾವಿರ ಕೋಟಿ ಮೀಸಲಿಟ್ಟಿದ್ದು, ರಾಜ್ಯ ಸರ್ಕಾರ ಅಗತ್ಯ ಭೂಮಿ ನೀಡಿದರೆ ಯೋಜನೆ ಅನುಷ್ಠಾನಕ್ಕೆ ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಘೋಷಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕೈಗಾರಿಕೆ, ಸಾರಿಗೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ಹಲವು ಯೋಜನೆಗಳನ್ನು ಪ್ರಸ್ತಾಪಿಸಿದರು.

‘
ಉತ್ತರ ಕರ್ನಾಟಕದಲ್ಲಿ ಉತ್ಪಾದನೆಯಾಗುವ ಸರಕುಗಳನ್ನು ಸಮೀಪದ ಬಂದರಿಗೆ ತ್ವರಿತವಾಗಿ ಸಾಗಿಸಲು ಸಮರ್ಥ ರೈಲು ಹಾಗೂ ಬಂದರು ಸಂಪರ್ಕ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ಅಂಕೋಲ ರೈಲು ಮಾರ್ಗಕ್ಕೆ ಅನುಮೋದನೆ ದೊರಕಿಸಲು ಪ್ರಯತ್ನಪೂರ್ವಕವಾಗಿ ಕೆಲಸ ಮಾಡಲಾಗುತ್ತಿದೆ. ಬೇಲಿಕೇರಿ ಬಂದರಿನ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
‘ಕೈಗಾರಿಕಾ ಕಾರಿಡಾರ್, ಹುಬ್ಬಳ್ಳಿ–ಅಂಕೋಲ ರೈಲು ಮಾರ್ಗ ಹಾಗೂ ಬೇಲಿಕೇರಿ ಬಂದರು ಅಭಿವೃದ್ಧಿ ಯೋಜನೆಗಳು ಸಾಕಾರಗೊಂಡರೆ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಅವಕಾಶಗಳು ತೆರೆದುಕೊಳ್ಳಲಿವೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆಯಲಿದೆ’ ಎಂದು ಪ್ರತಿಪಾದಿಸಿದರು.
‘ಕೋರೆಯವರ ನಾಯಕತ್ವದಲ್ಲಿ ಕೆಎಲ್‌ಇ ಜಾಗತಿಕ ಸಂಸ್ಥೆ’

ಡಾ.ಪ್ರಭಾಕರ ಕೋರೆ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಜೋಶಿ
ಏಳು ಮಂದಿ ಶಿಕ್ಷಕರು ಆರಂಭಿಸಿದ ಕೆಎಲ್‌ಇ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ಕೀರ್ತಿ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ ಎಂದು ಜೋಶಿ ಮುಕ್ತಕಂಠದಿಂದ ಪ್ರಶಂಸಿಸಿದರು.
‘ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕೆಎಲ್‌ಇ ಸಂಸ್ಥೆ ಇಂದು ದೇಶದ ಅತಿದೊಡ್ಡ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಡಾ.ಪ್ರಭಾಕರ ಕೋರೆ ಅವರ ದೂರದೃಷ್ಟಿ ಮತ್ತು ಸಮರ್ಥ ನಾಯಕತ್ವದಿಂದ ಸಂಸ್ಥೆ ಜಾಗತಿಕ ಮನ್ನಣೆ ಪಡೆದಿದೆ. ಇದು ಕರ್ನಾಟಕ ಮಾತ್ರವಲ್ಲ, ಇಡೀ ದೇಶವೇ ಹೆಮ್ಮೆಪಡುವ ಸಾಧನೆ’ ಎಂದರು.
‘ಬೆಳಗಾವಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಉತ್ತರ ಕರ್ನಾಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆದ ಕೆಎಲ್‌ಇ ಸಂಸ್ಥೆ, ಈಗ ಹುಬ್ಬಳ್ಳಿಯಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸಿದೆ.

ಈ ಭಾಗದ ಜನರ ದೀರ್ಘಕಾಲದ ಅಗತ್ಯವನ್ನು ಕೋರೆ ಅವರು ಮನಗಂಡು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಇಂಥ ಮಹತ್ವದ ಸಂಸ್ಥೆ ಸ್ಥಾಪನೆಯಾಗಲು ಡಾ.ಪ್ರಭಾಕರ ಕೋರೆ ಅವರೇ ಪ್ರಮುಖ ಕಾರಣಕರ್ತರು’ ಎಂದು ಹೇಳಿದರು.
‘ಸಂಸ್ಥೆಯ ಚೇರ್ಮನ್ ಅಮಿತ್ ಕೋರೆ ಯುವ ನಾಯಕತ್ವದಲ್ಲಿ ಕೆಎಲ್‌ಇಯ ಸೇವಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಡಾ.ಪ್ರಭಾಕರ ಕೋರೆ, ಅಮಿತ್ ಕೋರೆ ಮತ್ತು ಸಂಸ್ಥೆಯ ನಿರ್ದೇಶಕರ ಪರಿಶ್ರಮದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶ ಲಭಿಸಿದೆ’ ಎಂದು ಅಭಿನಂದಿಸಿದರು.
ದಾನ ಪರಂಪರೆಗೆ ಮೆಚ್ಚುಗೆ
ವೈದ್ಯಕೀಯ ಕಾಲೇಜಿನ ಸ್ಥಾಪನೆಗಾಗಿ ಜಾಗ ದಾನ ಮಾಡಿದ ಮೂರುಸಾವಿರ ಮಠದ ಹಿಂದಿನ ಪೀಠಾಧಿಪತಿ ಹಾಗೂ ಈಗಿನ ಜಗದ್ಗುರುಗಳ ಕೊಡುಗೆಯನ್ನೂ ಜೋಶಿ ಸ್ಮರಿಸಿದರು.
‘ಹಿಂದಿನ ಗುರುಗಳು ನೀಡಿದ ವಚನವನ್ನು ಈಗಿನ ಸ್ವಾಮೀಜಿ ಪಾಲಿಸಿದ್ದಾರೆ. ದಾನವಾಗಿ ನೀಡಿದ ಜಾಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ, ಗುರುಗಳ ಹೆಸರನ್ನೇ ಕಾಲೇಜಿಗೆ ಇಟ್ಟಿರುವುದು ಶ್ಲಾಘನೀಯ. ಈ ದಾನ ಪರಂಪರೆಗೆ ಎಲ್ಲರೂ ಕೃತಜ್ಞತೆ ಸಲ್ಲಿಸಬೇಕು’ ಎಂದರು.
ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 751ಕ್ಕೆ ಏರಿಕೆ
ದೇಶದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದ ಪರಿವರ್ತನೆಯಾಗಿದೆ ಎಂದು ಜೋಶಿ ಹೇಳಿದರು.
‘ದೇಶದಲ್ಲಿ ಹಿಂದೆ ಸುಮಾರು 300ರಷ್ಟಿದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಈಗ 751ಕ್ಕೆ ಏರಿಕೆಯಾಗಿದೆ. ವೈದ್ಯಕೀಯ ಸೀಟುಗಳು 51 ಸಾವಿರದಿಂದ 1.30 ಲಕ್ಷಕ್ಕೆ ಹೆಚ್ಚಿವೆ. ದೇಶದಾದ್ಯಂತ ಏಮ್ಸ್‌ಗಳ ಸಂಖ್ಯೆ 22ಕ್ಕೆ ತಲುಪಿದೆ’ ಎಂದು ವಿವರಿಸಿದರು.
‘ಪ್ರತಿ ಸಾವಿರ ಜನರಿಗೆ ಒಬ್ಬ ವೈದ್ಯ ಇರಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಭಾರತ ಶೀಘ್ರದಲ್ಲೇ ದಾಟಲಿದೆ. ಭಾರತೀಯ ವೈದ್ಯರು, ನರ್ಸ್‌ಗಳು ಮತ್ತು ವೈದ್ಯಕೀಯ ತಂತ್ರಜ್ಞರ ಮೇಲೆ ಜಗತ್ತಿನಾದ್ಯಂತ ಅಪಾರ ವಿಶ್ವಾಸವಿದೆ. ಹಲವು ಪ್ರಮುಖ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತೀಯ ವೈದ್ಯರೇ ಮುಂಚೂಣಿಯಲ್ಲಿದ್ದಾರೆ’ ಎಂದರು.
‘ಸರ್ವೇ ಸಂತು ನಿರಾಮಯ’ ಎಂಬ ಸಂದೇಶ ಭಾರತದ ಸಂಸ್ಕೃತಿಯ ಮೂಲದಲ್ಲೇ ಇದೆ. ಎಲ್ಲರೂ ರೋಗಮುಕ್ತರಾಗಿ ಆರೋಗ್ಯದಿಂದ ಇರಬೇಕು ಎಂಬ ಮಾನವೀಯ ಸ್ಪರ್ಶವಿರುವ ವೈದ್ಯಕೀಯ ಪರಂಪರೆ ಭಾರತದ್ದು ಎಂದು ಹೇಳಿದರು.
‘ಬಟಾಟೆ ಚಿಪ್ಸ್‌ನಿಂದ ಸೆಮಿಕಂಡಕ್ಟರ್ ಚಿಪ್ಸ್‌ವರೆಗೆ’
ದೇಶದ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಜೋಶಿ, ‘ಹಿಂದೆ ಭಾರತದಲ್ಲಿ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ ಚಿಪ್ಸ್‌ಗಳು ತಯಾರಾಗುತ್ತಿರಲಿಲ್ಲ. ವಿದೇಶಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ ಇಂದು ದೇಶದಲ್ಲೇ ಚಿಪ್ಸ್ ತಯಾರಾಗುತ್ತಿವೆ’ ಎಂದರು.
‘ಮೊದಲು ಭಾರತದಲ್ಲಿ ಬಟಾಟೆ ಚಿಪ್ಸ್ ಮಾತ್ರ ತಯಾರಾಗುತ್ತಿವೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದರು. ಈಗ ಸೆಮಿಕಂಡಕ್ಟರ್‌ನಿಂದ ಅತ್ಯಾಧುನಿಕ ಎಲೆಕ್ಟ್ರಾನಿಕ್ ಚಿಪ್ಸ್‌ವರೆಗೆ ಉತ್ಪಾದಿಸಿ, ಜಗತ್ತಿಗೆ ಪೂರೈಸುವ ಸ್ಥಿತಿಗೆ ಭಾರತ ಬರುತ್ತಿದೆ. ಇದು ದೇಶದಲ್ಲಿ ನಡೆಯುತ್ತಿರುವ ದೊಡ್ಡ ಪರಿವರ್ತನೆ’ ಎಂದು ಹೇಳಿದರು.
‘ಸುಂಕದ ಒತ್ತಡಕ್ಕೂ ಜಗ್ಗದ ಭಾರತ’
ಜಾಗತಿಕ ಸುಂಕದ ಒತ್ತಡಗಳಿಂದ ಭಾರತದ ರಫ್ತು ಕುಸಿಯಲಿದೆ ಎಂಬ ಆತಂಕ ಹುಸಿಯಾಗಿದೆ ಎಂದು ಪ್ರತಿಪಾದಿಸಿದ ಅವರು, ‘ಮೀನು ರಫ್ತಿಗೆ ತೊಂದರೆ ಎದುರಾದಾಗ ಭಾರತ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಿತು. ಪರಿಣಾಮವಾಗಿ ಮೀನು ರಫ್ತು ಶೇ 12ರಷ್ಟು ಹೆಚ್ಚಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತು ಐದು ಪಟ್ಟು ವೃದ್ಧಿಸಿದೆ’ ಎಂದು ತಿಳಿಸಿದರು.
‘ಜಗತ್ತಿನ ಹಲವು ರಾಷ್ಟ್ರಗಳು ಯುದ್ಧ ಮತ್ತು ಆರ್ಥಿಕ ಅನಿಶ್ಚಿತತೆಯಿಂದ ಸಂಕಷ್ಟ ಎದುರಿಸುತ್ತಿವೆ. ಆದರೆ ಭಾರತ ಸುರಕ್ಷತೆ, ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಯೊಂದಿಗೆ ವೇಗವಾಗಿ ಮುನ್ನಡೆಯುತ್ತಿದೆ’ ಎಂದರು.
ಯುವಜನರಿಗೆ ಅಪಾರ ಅವಕಾಶ
‘ಭಾರತ ಜಗತ್ತಿನ ಅತ್ಯಂತ ಯುವ ರಾಷ್ಟ್ರ. ದೇಶದ ಮಾನವ ಸಂಪನ್ಮೂಲವನ್ನು ಕೌಶಲಪೂರ್ಣವಾಗಿಸುವ ಕೆಲಸ ನಡೆಯುತ್ತಿದೆ. ವೈದ್ಯಕೀಯ, ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನ ಮತ್ತು ಡೀಪ್ ಟೆಕ್ನಾಲಜಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಜನರಿಗೆ ವಿಶಾಲ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದು ಹೇಳಿದರು.
‘ಮಕ್ಕಳು ಸಾಂಪ್ರದಾಯಿಕ ಆಲೋಚನೆಗಳಿಗೆ ಸೀಮಿತರಾಗಬಾರದು. ಹೊಸ ತಂತ್ರಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ತೆರೆದುಕೊಳ್ಳಬೇಕು. ದೇಶದ ಅಭಿವೃದ್ಧಿಯೊಂದಿಗೆ ಹೆಜ್ಜೆ ಹಾಕಲು ಯುವಜನರು ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಕೋರೆ ಅವರ ಸಾಧನೆ ದೇಶಕ್ಕೇ ಹೆಮ್ಮೆ’
“ಏಳು ಮಂದಿ ಶಿಕ್ಷಕರು ಆರಂಭಿಸಿದ ಕೆಎಲ್‌ಇ ಸಂಸ್ಥೆ ಇಂದು ಡಾ.ಪ್ರಭಾಕರ ಕೋರೆ ಅವರ ನಾಯಕತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿ ವೈದ್ಯಕೀಯ ಕಾಲೇಜು ಸ್ಥಾಪಿಸಿರುವ ಅವರ ದೂರದೃಷ್ಟಿ ಶ್ಲಾಘನೀಯ. ಇದು ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ದೇಶವೇ ಹೆಮ್ಮೆಪಡುವ ಸಾಧನೆ.”
— ಪ್ರಲ್ಹಾದ ಜೋಶಿ, ಕೇಂದ್ರ ಸಚಿವ




Comments