;
top of page

ತೆಲಂಗಾಣ ಬಿಜೆಪಿ ಸಹ ಉಸ್ತುವಾರಿಯಾಗಿ ಅಭಯ ಪಾಟೀಲ

Writer: vilas joshi
vilas joshi
11 minutes ago
1 min read

ಸಂಘಟನಾ ಚತುರನಿಗೆ ಮಹತ್ವದ ಹೊಣೆ; ಗಡಿ ದಾಟಿದ ಬೆಳಗಾವಿ ಶಾಸಕರ ನಾಯಕತ್ವ.


(Ebelagavi Special Report)

ಬೆಳಗಾವಿ:

ಪಕ್ಷ ಸಂಘಟನೆ, ಕಾರ್ಯಕರ್ತರೊಂದಿಗಿನ ನಿರಂತರ ಸಂಪರ್ಕ ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿನ ಅನುಭವದಿಂದ ಗುರುತಿಸಿಕೊಂಡಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಬಿಜೆಪಿ ಹೈಕಮಾಂಡ್‌ ಮಹತ್ವದ ಹೊಣೆ ನೀಡಿದೆ.

ಅವರನ್ನು ತೆಲಂಗಾಣ ರಾಜ್ಯದ ಬಿಜೆಪಿ ಸಹ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ.



ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು, ಯುವ ಕಾರ್ಯಕರ್ತರನ್ನು ಸಂಘಟಿಸುವುದು ಹಾಗೂ ಚುನಾವಣೆ ಸಂದರ್ಭದಲ್ಲಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವುದರಲ್ಲಿ ಅಭಯ ಪಾಟೀಲ ಅವರಿಗೆ ವಿಶೇಷ ಅನುಭವವಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಭದ್ರ ನೆಲೆ ನಿರ್ಮಿಸುವ ಜೊತೆಗೆ, ವಿವಿಧ ವರ್ಗಗಳ ಮತದಾರರನ್ನು ಸಂಘಟನೆಯೊಂದಿಗೆ ಬೆಸೆಯುವಲ್ಲಿ ಅವರು ತೋರಿದ ಸಾಮರ್ಥ್ಯ ಪಕ್ಷದ ವರಿಷ್ಠರ ಗಮನ ಸೆಳೆದಿದೆ.


ಸದಾ ಕಾರ್ಯಕರ್ತರ ನಡುವೆ ಇರುವ ನಾಯಕ ಎಂಬ ವರ್ಚಸ್ಸು ಹೊಂದಿರುವ ಅವರು, ಸಂಘಟನೆಯ ಶಿಸ್ತು ಮತ್ತು ಪಕ್ಷನಿಷ್ಠೆಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಬೂತ್‌ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ರೂಪಿಸುವುದು, ಜನಸಂಪರ್ಕದ ಮೂಲಕ ಪಕ್ಷದ ನೆಲೆಯನ್ನು ವಿಸ್ತರಿಸುವುದು ಅವರ ಕಾರ್ಯಶೈಲಿಯ ಪ್ರಮುಖ ಲಕ್ಷಣವಾಗಿದೆ.



ತೆಲಂಗಾಣದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸ್ಥಳೀಯ ನಾಯಕರ ನಡುವೆ ಸಮನ್ವಯ ಸಾಧಿಸುವುದು ಹಾಗೂ ಮುಂಬರುವ ರಾಜಕೀಯ ಸವಾಲುಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಮಹತ್ವದ ಜವಾಬ್ದಾರಿ ಈಗ ಅವರ ಹೆಗಲೇರಿದೆ. ಕರ್ನಾಟಕದ ಗಡಿಯಾಚೆಗೂ ಅವರ ಸಂಘಟನಾ ಅನುಭವವನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿರುವುದು, ಅಭಯ ಪಾಟೀಲ ಅವರ ರಾಜಕೀಯ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಅವರ ನೇಮಕಕ್ಕೆ ಬೆಳಗಾವಿಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ, ತೆಲಂಗಾಣದಲ್ಲಿ ಪಕ್ಷವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಶುಭ ಹಾರೈಸಿದ್ದಾರೆ.

 
 
 

Comments


bottom of page