ಗಣೇಶನ ಸನ್ನಿಧಿಯಲ್ಲಿ ಮೊಳಗಲಿದೆ ಸಂಘದ ‘ಘೋಷ' ನಾದ
’
ನಗರದ 27 ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಆರ್‌ಎಸ್‌ಎಸ್‌ನಿಂದ ‘ಗಣೇಶ ವಂದನ’ •
ಎರಡು ಮಾರ್ಗಗಳಲ್ಲಿ ಸ್ವಯಂಸೇವಕರ ಸಂಚಾರ.
ಬೆಳಗಾವಿ:
ಒಂದೆಡೆ ಶಂಖನಾದ, ಮತ್ತೊಂದೆಡೆ ಆನಕ–ವಂಶಿ ಸೇರಿದಂತೆ ಘೋಷ ವಾದ್ಯಗಳ ನಿನಾದ; ಶಿಸ್ತುಬದ್ಧವಾಗಿ ಹೆಜ್ಜೆ ಹಾಕುವ ಸ್ವಯಂಸೇವಕರು; ಸಾರ್ವಜನಿಕ ಗಣೇಶ ಮೂರ್ತಿಗಳ ಸಮ್ಮುಖದಲ್ಲಿ ಸಂಗೀತಮಯ ವಂದನೆ...!

ನಗರದ ಗಣೇಶೋತ್ಸವ ಸಂಭ್ರಮಕ್ಕೆ ವಿಶೇಷ ಮೆರುಗು ನೀಡುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳಗಾವಿ ಘಟಕವು ಸೆಪ್ಟೆಂಬರ್ 22ರಂದು ‘ಗಣೇಶ ವಂದನ’ ಕಾರ್ಯಕ್ರಮ ಆಯೋಜಿಸಿದೆ.

ನಗರದ ವಿವಿಧ ಬಡಾವಣೆಗಳ 27 ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಸಂಘದ ಸ್ವಯಂಸೇವಕರು ಘೋಷ ವಾದ್ಯಗಳನ್ನು ನುಡಿಸಿ ಗಣಪತಿಗೆ ವಂದನೆ ಸಲ್ಲಿಸಲಿದ್ದಾರೆ.
ಮಂಗಳವಾರ ಸಂಜೆ 6ಕ್ಕೆ ಎರಡು ಕಡೆಗಳಿಂದ ಏಕಕಾಲಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.
ಮೊದಲ ತಂಡವು ಶಾಸ್ತ್ರಿನಗರದ ಅಟಲೆ ಗಲ್ಲಿಯಿಂದ ಹಾಗೂ ಎರಡನೇ ತಂಡವು ಮಹಾಂತೇಶನಗರದ ಬಸವ ಬಡಾವಣೆಯಿಂದ ಸಂಚಾರ ಆರಂಭಿಸಲಿದೆ.
ನಿಗದಿತ ಮಾರ್ಗದಲ್ಲಿರುವ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿ ಘೋಷವಾದನ ನಡೆಸಲಿದೆ.

ಹಳೆ ಬೆಳಗಾವಿಯಲ್ಲಿ ಮೊದಲ ತಂಡ.
ಅಟಲೆ ಗಲ್ಲಿಯಿಂದ ಹೊರಡುವ ತಂಡವು ಶಹಾಪುರದ ಕೋರೆ ಗಲ್ಲಿ, ಖಾಸಬಾಗದ ಬಸವನ ಗಲ್ಲಿ, ವಡಗಾವಿಯ ಸಪಾರ ಗಲ್ಲಿ, ಯಳ್ಳೂರು ರಸ್ತೆಯ ಅಷ್ಟವಿನಾಯಕ ನಗರ, ಅನಗೋಳದ ಸಂಭಾಜಿ ಚೌಕ, ಚಿದಂಬರ ನಗರ, ಟಿಳಕವಾಡಿಯ ಶುಕ್ರವಾರ ಪೇಟೆ, ಮೊದಲ ರೈಲ್ವೆ ಗೇಟ್, ಗುರುಪ್ರಸಾದ ಕಾಲೊನಿಯ ಭವಾನಿ ನಗರ ಹಾಗೂ ಕ್ಯಾಂಪ್ ಪೊಲೀಸ್ ಠಾಣೆ ಸಮೀಪದ ಮಂಡಳಿಗಳಲ್ಲಿ ಗಣೇಶ ವಂದನೆ ಸಲ್ಲಿಸಲಿದೆ.
ಉತ್ತರ ಭಾಗದಲ್ಲಿ ಎರಡನೇ ತಂಡ
ಮಹಾಂತೇಶನಗರದ ಬಸವ ಬಡಾವಣೆಯಿಂದ ಹೊರಡುವ ತಂಡವು ಶ್ರೀನಗರ ಪೊಲೀಸ್ ಠಾಣೆ ಸಮೀಪ, ರಾಮನಗರದ ವಡ್ಡರವಾಡಿ, ಶಿವಾಜಿನಗರದ ಮೊದಲ ಮುಖ್ಯರಸ್ತೆ–ಮೂರನೇ ಅಡ್ಡರಸ್ತೆ, ಬಸವ ಕಾಲೊನಿ, ಕಂಗ್ರಾಳಿಯ ನಾರಾಯಣ ಗಲ್ಲಿ, ಕೆಎಲ್‌ಇ ಇಂಟರ್‌ನ್ಯಾಷನಲ್ ಶಾಲೆ ಸಮೀಪದ ಓಂಕಾರ ನಗರ ಹಾಗೂ ಸರಸ್ವತಿನಗರದ ಗಣೇಶಪುರ ಪೆಟ್ರೋಲ್ ಬಂಕ್ ಬಳಿಯ ಮಂಡಳಿಗಳಿಗೆ ತೆರಳಲಿದೆ.

ರಾತ್ರಿ ಒಂದಾಗಲಿವೆ ಎರಡೂ ತಂಡಗಳು
ಪ್ರತ್ಯೇಕ ಮಾರ್ಗಗಳಲ್ಲಿ ಸಂಚರಿಸುವ ಎರಡೂ ತಂಡಗಳು ರಾತ್ರಿ 10.30ಕ್ಕೆ ಒಂದಾಗಲಿವೆ. ಬಳಿಕ ಖಡೇಬಜಾರದ ಸಂಯುಕ್ತ ಮಹಾರಾಷ್ಟ್ರ ಚೌಕ, ಗಾಂಧಿನಗರದ ದುರ್ಗಾಮಾತಾ ರಸ್ತೆ, ನರಗುಂದಕರ ಭಾವೆ ಚೌಕ, ತಿಲಕ ಚೌಕ, ಶನಿಮಂದಿರ ಹಾಗೂ ಪ್ರಕಾಶ ಚಿತ್ರಮಂದಿರದ ಎದುರಿನ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಸಾಮೂಹಿಕ ಘೋಷವಾದನ ನಡೆಯಲಿದೆ.
ಭಕ್ತಿ, ಸಂಗೀತ ಮತ್ತು ಶಿಸ್ತಿನ ಸಂಗಮವಾಗಲಿರುವ ಈ ಕಾರ್ಯಕ್ರಮದ ಮೂಲಕ ನಗರದ ಗಣೇಶೋತ್ಸವ ಸಂಭ್ರಮಕ್ಕೆ ವಿಶಿಷ್ಟ ಸಾಂಸ್ಕೃತಿಕ ಸ್ಪರ್ಶ ನೀಡಲು ಸಂಘ ಮುಂದಾಗಿದೆ.




Comments