ಕೋರೆಯವರ ದೂರದೃಷ್ಟಿಯ ಕನಸಿಗೆ ‘ಆರೋಗ್ಯ ಮಹಾದ್ವಾರ’
ಗಬ್ಬೂರಿನಲ್ಲಿ ಡಾ.ಪ್ರಭಾಕರ ಕೋರೆ ಸಂಕಲ್ಪದ ಸಾಕಾರ ರೂಪ
1,200 ಹಾಸಿಗೆಗಳ ಆಸ್ಪತ್ರೆ, ಜೆಜಿಎಂಎಂ ವೈದ್ಯಕೀಯ ಕಾಲೇಜು ಇಂದು ಲೋಕಾರ್ಪಣೆ
ವಿಶೇಷ ವರದಿ- ebelagavi.
ಹುಬ್ಬಳ್ಳಿ:
ದೂರದೃಷ್ಟಿ ಎಂದರೆ ನಾಳೆಯದನ್ನು ಮೊದಲೇ ಕಾಣುವುದು. ನಾಯಕತ್ವ ಎಂದರೆ ಕಂಡ ಕನಸನ್ನು ಕಾರ್ಯರೂಪಕ್ಕೆ ತರುವುದು.
ಇವೆರಡರ ಸಂಗಮವಾಗಿ ಹುಬ್ಬಳ್ಳಿಯ ಗಬ್ಬೂರಿನಲ್ಲಿ ಬೃಹತ್ ಆರೋಗ್ಯ ಸಂಕೀರ್ಣವೊಂದು ತಲೆಎತ್ತಿದೆ.
ಕೆಎಲ್‌ಇ ಸಂಸ್ಥೆಯ ಔರವ ಕಾರ್ಯಾಧ್ಯಕ್ಷ ರೂ ಆಗಿರುವ ಪದ್ಮಶ್ರೀ .ಪ್ರಭಾಕರ ಕೋರೆ ಅವರ ಸಂಕಲ್ಪದ ಫಲವಾದ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಕಟ್ಟಡ ಹಾಗೂ 1,200 ಹಾಸಿಗೆಗಳ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಶನಿವಾರ (ಸೆ.19) ಲೋಕಾರ್ಪಣೆಯಾಗಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಿಗ್ಗೆ 11ರ ಸುಮಾರಿಗೆ ಸಂಕೀರ್ಣವನ್ನು ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಸಚಿವರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಕಟ್ಟಡದಾಚೆಗಿನ ಕನಸು...
ಉತ್ತರ ಕರ್ನಾಟಕದ ಜನರು ಸಂಕೀರ್ಣ ಚಿಕಿತ್ಸೆಗಾಗಿ ಬೆಂಗಳೂರು, ಮುಂಬೈ, ಪುಣೆ ಅಥವಾ ಹೈದರಾಬಾದ್‌ಗೆ ಅಲೆಯಬಾರದು. ಅವರ ನೆಲದಲ್ಲೇ ಅತ್ಯಾಧುನಿಕ ಚಿಕಿತ್ಸೆ ಸಿಗಬೇಕು. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಅವಕಾಶ ದೊರೆಯಬೇಕು—ಇದು ಡಾ.ಕೋರೆ ಅವರ ಬಹುಕಾಲದ ಆಶಯ.

ಆ ಆಶಯವೇ ಈಗ ಗಬ್ಬೂರಿನ ಸುಮಾರು 25 ಎಕರೆ ಪ್ರದೇಶದಲ್ಲಿ ‘ಆರೋಗ್ಯ ನಗರ’ದ ರೂಪ ಪಡೆದಿದೆ. ಆಸ್ಪತ್ರೆ, ವೈದ್ಯಕೀಯ ಕಾಲೇಜು, ಪ್ರಯೋಗಾಲಯ, ಕೌಶಲ ತರಬೇತಿ ಕೇಂದ್ರ ಮತ್ತು ಸಂಶೋಧನಾ ವ್ಯವಸ್ಥೆಯನ್ನು ಒಂದೇ ಆವರಣದಲ್ಲಿ ಬೆಸೆಯಲಾಗಿದೆ.
ಆಧುನಿಕ ವೈದ್ಯಕೀಯ ಉಪಕರಣಗಳ ಜತೆಗೆ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನೂ ಆಸ್ಪತ್ರೆಯ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ದೇಶದ ವಿವಿಧೆಡೆ ಉನ್ನತ ತರಬೇತಿ ಪಡೆದ ಯುವ ತಜ್ಞ ವೈದ್ಯರ ತಂಡ ಸೇವೆಗೆ ಸಿದ್ಧವಾಗಿದೆ.
ಬೆಳಗಾವಿಯಿಂದ ಹುಬ್ಬಳ್ಳಿಗೆ ಸೇವೆಯ ವಿಸ್ತರಣೆ.
ಬೆಳಗಾವಿಯನ್ನು ಪ್ರಮುಖ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸಾ ಕೇಂದ್ರವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಡಾ.ಕೋರೆ, ಈಗ ಅದೇ ಮಾದರಿಯನ್ನು ಹುಬ್ಬಳ್ಳಿಗೆ ವಿಸ್ತರಿಸಿದ್ದಾರೆ. ಜೆಜಿಎಂಎಂ ವೈದ್ಯಕೀಯ ಕಾಲೇಜು ವರ್ಷಕ್ಕೆ 150 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ.

ಈ ಕೇಂದ್ರ ಧಾರವಾಡದ ಜತೆಗೆ ಗದಗ, ಹಾವೇರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳ ರೋಗಿಗಳಿಗೆ ಆಸರೆಯಾಗುವ ನಿರೀಕ್ಷೆಯಿದೆ. ಭವಿಷ್ಯದಲ್ಲಿ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಆವರಣದಲ್ಲಿ ಜಾಗವನ್ನೂ ಮೀಸಲಿಡಲಾಗಿದೆ.
“ಸಂಸ್ಥೆ ಎಷ್ಟು ದೊಡ್ಡದು ಎನ್ನುವುದಕ್ಕಿಂತ, ಅದರ ಸೇವೆ ಎಷ್ಟು ಜನರನ್ನು ತಲುಪಿತು ಎಂಬುದೇ ಮುಖ್ಯ” ಎಂಬ ಕಾರ್ಯಸಂಸ್ಕೃತಿಯೇ ಡಾ.ಕೋರೆ ಅವರ ದೂರದೃಷ್ಟಿಯ ಜೀವಾಳ.
ಶನಿವಾರ ಲೋಕಾರ್ಪಣೆಯಾಗುವುದು ಕೇವಲ ಕಟ್ಟಡವಲ್ಲ. ಅದು ದೂರದೃಷ್ಟಿಯ ಸಂಕಲ್ಪ, ದಶಕಗಳ ಪರಿಶ್ರಮ ಮತ್ತು ಉತ್ತರ ಕರ್ನಾಟಕದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೇವೆ ಒದಗಿಸುವ ಭರವಸೆಯ ಸಾಕಾರ ರೂಪ.




Comments