;
top of page

ಉತ್ತರ ಕರ್ನಾಟಕದ ಆರೋಗ್ಯ ಸೇವೆಗೆ ಹೊಸ ಶಕ್ತಿ- ಕೋರೆ

Writer: vilas joshi
vilas joshi
2 days ago
1 min read

ಹುಬ್ಬಳ್ಳಿಯಲ್ಲಿ ₹700 ಕೋಟಿ ವೆಚ್ಚದ ಕೆಎಲ್‌ಇ ಆಸ್ಪತ್ರೆ; ಸೆ.19ರಂದು ಅಮಿತ್ ಶಾ ಲೋಕಾರ್ಪಣೆ


ಹುಬ್ಬಳ್ಳಿ

: ‘ಉತ್ತರ ಕರ್ನಾಟಕದ ಜನರು ಅತ್ಯಾಧುನಿಕ ಚಿಕಿತ್ಸೆಗಾಗಿ ಬೆಂಗಳೂರು, ಮುಂಬೈ ಅಥವಾ ಪುಣೆಗೆ ತೆರಳಬೇಕಾದ ಅನಿವಾರ್ಯತೆಯನ್ನು ತಪ್ಪಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ 1,200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗಿದೆ’ ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ, ಪದ್ಮಶ್ರೀ ಡಾ.ಪ್ರಭಾಕರ ಕೋರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ,


‘ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮೀಜಿ ಮೂರ್‌ಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ನೂತನ ಆಸ್ಪತ್ರೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 19ರಂದು ಜನಸೇವೆಗೆ ಸಮರ್ಪಿಸಲಿದ್ದಾರೆ’ ಎಂದು ತಿಳಿಸಿದರು.


ಸುಮಾರು 50 ಎಕರೆ ಪ್ರದೇಶದಲ್ಲಿ, 30 ಲಕ್ಷ ಚದರ ಅಡಿಗೂ ಅಧಿಕ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಯೋಜನೆಗೆ ₹700 ಕೋಟಿ ವೆಚ್ಚ ಮಾಡಲಾಗಿದೆ. ಮಲ್ಟಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯೊಂದಿಗೆ ತುರ್ತು ಚಿಕಿತ್ಸೆ, ಟ್ರಾಮಾ ಕೇರ್, ತೀವ್ರ ನಿಗಾ ಘಟಕ, ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ, ರೇಡಿಯಾಲಜಿ ಹಾಗೂ ಸುಧಾರಿತ ಪ್ರಯೋಗಾಲಯ ಸೇವೆಗಳು ಒಂದೇ ಸೂರಿನಡಿ ದೊರೆಯಲಿವೆ.


ಜನರಲ್ ಮೆಡಿಸಿನ್, ಸರ್ಜರಿ, ಹೃದ್ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡ, ತಾಯಿ–ಮಗು ಆರೋಗ್ಯ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಸೇರಿದಂತೆ ಸರ್ಕಾರಿ ಯೋಜನೆಗಳಡಿ ಅರ್ಹ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ಪ್ರವೇಶ ಸಾಮರ್ಥ್ಯವನ್ನು 150ರಿಂದ 200ಕ್ಕೆ ಹೆಚ್ಚಿಸಲಾಗಿದ್ದು, 2026–27ರಿಂದ 250ಕ್ಕೆ ವಿಸ್ತರಿಸುವ ಗುರಿಯಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 20 ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಸಿದ್ಧತೆ ನಡೆದಿದೆ. ಪ್ರತಿವರ್ಷ ಸುಮಾರು 800 ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ತರಬೇತಿ ದೊರೆಯಲಿದೆ.

‘ಚಿಕಿತ್ಸೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯನ್ನು ಒಂದೇ ವೇದಿಕೆಯಡಿ ಜೋಡಿಸಿರುವ ಈ ಕ್ಯಾಂಪಸ್ ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಹಣದ ಕೊರತೆಯಿಂದ ಯಾರೂ ಗುಣಮಟ್ಟದ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬುದೇ ನಮ್ಮ ಸಂಕಲ್ಪ’ ಎಂದು ಡಾ.ಕೋರೆ ಹೇಳಿದರು.

 
 
 

Comments


bottom of page