;
top of page

ಆರ್ಥಿಕ ದಿವಾಳಿಯ ಅಂಚಿನಲ್ಲಿ ರಾಜ್ಯ ಸರ್ಕಾರ

Writer: vilas joshi
vilas joshi
11 hours ago
1 min read

’

ಹಾಲು–ಬಸ್ ದರ ಏರಿಕೆಗೆ ವಿರೋಧ; ರೈತರ ₹700 ಕೋಟಿ ಪ್ರೋತ್ಸಾಹಧನ ಬಿಡುಗಡೆಗೆ ಪಿ.ರಾಜೀವ್ ಆಗ್ರಹ.


ಬೆಳಗಾವಿ:

‘₹22,954 ಕೋಟಿ ಆದಾಯ ಕೊರತೆಯ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರ, ಆರ್ಥಿಕ ದಿವಾಳಿತನದ ಅಂಚಿಗೆ ತಲುಪಿದೆ’ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಪಿ.ರಾಜೀವ್ ಆರೋಪಿಸಿದರು.

‘ಆದಾಯ ಕೊರತೆ ಶೂನ್ಯವಾಗಿರಬೇಕು. ಆದರೆ, ಸರ್ಕಾರ ಸಾಲ ಮತ್ತು ಬಡ್ಡಿ ಪಾವತಿಗೂ ಸಾಲ ಮಾಡುವ ಸ್ಥಿತಿಗೆ ಬಂದಿದೆ. ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇ 3ರ ಮಿತಿಯೊಳಗಿರಬೇಕಿದ್ದು, ಈಗಾಗಲೇ ಶೇ 2.95ಕ್ಕೆ ತಲುಪಿದೆ. ಒಟ್ಟು ಹೊಣೆಗಾರಿಕೆ ಶೇ 25ರ ಒಳಗಿರಬೇಕಾದರೆ, ಅದು ಶೇ 24.94ಕ್ಕೆ ಏರಿದೆ. ಹೊಸ ಸಾಲ ಪಡೆದರೆ ವಿತ್ತೀಯ ಶಿಸ್ತಿನ ಮಾನದಂಡಗಳು ಉಲ್ಲಂಘನೆಯಾಗಲಿವೆ’ ಎಂದರು.



‘ಖಜಾನೆ ಬರಿದಾಗಿರುವ ಕಾರಣ ರೈತರ ಹೆಸರಿನಲ್ಲಿ ಹಾಲಿನ ದರ ಹೆಚ್ಚಿಸಿ ಗ್ರಾಹಕರಿಗೆ ಹೊರೆ ಹಾಕಲಾಗುತ್ತಿದೆ.



ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರ ಪ್ರೋತ್ಸಾಹಧನವನ್ನು ಲೀಟರ್‌ಗೆ ₹5ರಿಂದ ₹7ಕ್ಕೆ ಹೆಚ್ಚಿಸುವುದಾಗಿ ಹೇಳಿತ್ತು. ₹50 ಸಾವಿರದ ಕ್ಷೀರ ಕ್ರಾಂತಿ ಕ್ರೆಡಿಟ್ ಕಾರ್ಡ್ ಹಾಗೂ ಮಹಿಳೆಯರಿಗೆ ಹಸು–ಎಮ್ಮೆ ಖರೀದಿಸಲು ₹3 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲದ ಭರವಸೆಯನ್ನೂ ಈಡೇರಿಸಿಲ್ಲ’ ಎಂದು ದೂರಿದರು.


‘

ಹಾಲು ಉತ್ಪಾದಕರಿಗೆ ಸುಮಾರು ₹700 ಕೋಟಿ ಪ್ರೋತ್ಸಾಹಧನ ಬಾಕಿ ಇದೆ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕು. ಸಾರಿಗೆ ನಿಗಮಗಳಿಗೆ ₹8 ಸಾವಿರ ಕೋಟಿ, ಶಕ್ತಿ ಯೋಜನೆಯಡಿ ₹5 ಸಾವಿರ ಕೋಟಿ ಪಾವತಿಸದೆ ಬಸ್ ದರ ಹೆಚ್ಚಿಸುವುದು ಜನವಿರೋಧಿ’ ಎಂದರು.

ಕುಡಚಿ ಗ್ರಾಮ ಪಂಚಾಯಿತಿಯಲ್ಲಿ ಎಸ್‌ಸಿ–ಎಸ್‌ಟಿ ಫಲಾನುಭವಿಗಳಿಗೆ ಮೀಸಲಾದ ₹25 ಲಕ್ಷವನ್ನು ಗುತ್ತಿಗೆದಾರರ ಖಾತೆಗೆ ವರ್ಗಾಯಿಸಲಾಗಿದೆ ಎಂದೂ ಆರೋಪಿಸಿದ ಅವರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.

 
 
 

Comments


bottom of page