;
top of page

₹175 ಕೋಟಿಯ ಸದ್ದು… ಕೊನೆಗೆ ಸಿಕ್ಕಿದ್ದು ₹3.30 ಕೋಟಿ!

Writer: vilas joshi
vilas joshi
2 days ago
2 min read


ಎರಡು ದಿನ, 18 ಕಡೆ ಶೋಧ; ₹ಸಾವಿರಾರು ಕೋಟಿ ವಾರ್ಷಿಕ ವಹಿವಾಟಿನ ಉದ್ಯಮ ಸಮೂಹದಲ್ಲಿ ಇಡಿ ಪತ್ತೆ ಎಷ್ಟು?


ಜಾರಕಿಹೊಳಿ ಸುತ್ತ ಎದ್ದ ಅನುಮಾನಗಳಿಗೂ ಅಧಿಕೃತ ಪ್ರಕಟಣೆಯಲ್ಲಿರುವ ಅಂಶಗಳಿಗೂ ಭಾರಿ ಅಂತರ.


e ಬೆಳಗಾವಿ‌ ವಿಶೇಷ


ಬೆಳಗಾವಿ:

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅವರ ಕುಟುಂಬ ಹಾಗೂ ಆಪ್ತರಿಗೆ ಸಂಬಂಧಿಸಿದ 18 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ಎರಡು ದಿನ ನಡೆಸಿದ ಶೋಧ ಕಾರ್ಯಾಚರಣೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿತು.


ದಾಳಿ ಆರಂಭವಾದಾಗ ₹175 ಕೋಟಿ ವ್ಯವಹಾರ, ದೊಡ್ಡ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಬಹುದು ಎಂಬ ಮಾತುಗಳು ಟೀವಿಲಿ ಹರಿದಾಡಿದ್ದವು. ಆದರೆ, ಇಡಿ ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ನಗದು ಮೊತ್ತ ₹3.30 ಕೋಟಿ ಮಾತ್ರ!



ವರ್ಷಕ್ಕೆ ಸುಮಾರು ಸಾವಿರಾರು ಕೋಟಿ ವಹಿವಾಟು ನಡೆಸುತ್ತದೆ ಎನ್ನಲಾದ ಜಾರಕಿಹೊಳಿ ಕುಟುಂಬದ ವಿಶಾಲ ಉದ್ಯಮ ಸಮೂಹದ ಹಿನ್ನೆಲೆಯಲ್ಲಿ ನೋಡಿದರೆ, ವಶಪಡಿಸಿಕೊಂಡಿರುವ ₹3.30 ಕೋಟಿ ನಗದು ದಾಳಿಗೂ ಮುನ್ನ ಸೃಷ್ಟಿಯಾಗಿದ್ದ ನಿರೀಕ್ಷೆ ಹಾಗೂ ರಾಜಕೀಯ ಸದ್ದಿಗೆ ತಕ್ಕ ಪ್ರಮಾಣದಲ್ಲಿಲ್ಲ.

ಆದರೆ, ಈ ಹಣಕ್ಕೆ ಲೆಕ್ಕವಿಲ್ಲ ಎಂದು ಇಡಿ ಹೇಳಿರುವುದರಿಂದ, ಅದರ ಮೂಲ ಮತ್ತು ಮಾಲೀಕತ್ವವನ್ನು ತನಿಖೆಯೇ ನಿರ್ಧರಿಸಬೇಕಾಗಿದೆ.

ಸೆಪ್ಟೆಂಬರ್ 9 ಮತ್ತು 10ರಂದು ಬೆಂಗಳೂರು, ಬೆಳಗಾವಿ, ಗೋಕಾಕ ಮತ್ತು ಕೊಲ್ಲಾಪುರ ಸೇರಿದಂತೆ ನಾಲ್ಕು ನಗರಗಳ 21 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಇಡಿ ಪ್ರಕಟಣೆ ತಿಳಿಸಿದೆ.

ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಹಾಗೂ ವೈ.ಡಿ. ಮಂಜುನಾಥ ಅವರಿಗೆ ಸಂಬಂಧಿಸಿದ ಸ್ಥಳಗಳು ಶೋಧದ ವ್ಯಾಪ್ತಿಗೆ ಒಳಪಟ್ಟಿದ್ದವು.

ಆರಂಭಿಕ ವರದಿಗಳಲ್ಲಿ 18 ಸ್ಥಳಗಳ ಉಲ್ಲೇಖವಿದ್ದರೆ, ಅಂತಿಮ ಇಡಿ ಪ್ರಕಟಣೆಯಲ್ಲಿ 21 ಸ್ಥಳಗಳನ್ನು ಶೋಧಿಸಲಾಗಿದೆ ಎಂದು ಹೇಳಲಾಗಿದೆ. ದಾಳಿ ಆರಂಭದ ವರದಿ

ಸದ್ದು ₹175 ಕೋಟಿಯದು; ದಾಖಲೆ ₹3.30 ಕೋಟಿಯದು!

ದಾಳಿ ಆರಂಭವಾದ ಕ್ಷಣದಿಂದಲೇ ₹175 ಕೋಟಿಯ ವ್ಯವಹಾರದ ಕುರಿತು ಚರ್ಚೆಗಳು ದೊಡ್ಡ ಪ್ರಮಾಣದಲ್ಲಿ ಮುನ್ನೆಲೆಗೆ ಬಂದಿದ್ದವು.

ಆದರೆ, ಇಡಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ₹175 ಕೋಟಿ ನಗದು ಅಥವಾ ಆ ಪ್ರಮಾಣದ ಆಸ್ತಿ ಪತ್ತೆಯಾಗಿದೆ ಎಂಬ ಉಲ್ಲೇಖವೇ ಇಲ್ಲ. ಪ್ರಕಟಣೆಯಲ್ಲಿರುವ ಸ್ಪಷ್ಟ ವಶಪಡಿಸಿಕೊಳ್ಳುವಿಕೆ ಎಂದರೆ ₹3.30 ಕೋಟಿ ಲೆಕ್ಕಕ್ಕೆ ಸಿಗದ ಕರೆನ್ಸಿ ಹಾಗೂ ಸುಮಾರು ₹15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ ಮತ್ತು ಯುರೊ ವಿದೇಶಿ ಕರೆನ್ಸಿ.

ಹೀಗಾಗಿ, “₹175 ಕೋಟಿ ಹೋಯಿತು” ಎಂಬ ಆರಂಭಿಕ ಸದ್ದಿಗೂ, “₹3.30 ಕೋಟಿ ಸಿಕ್ಕಿತು” ಎಂಬ ಅಧಿಕೃತ ಲೆಕ್ಕಕ್ಕೂ ಇರುವ ಅಂತರವೇ ಈಗ ಚರ್ಚೆಯ ಕೇಂದ್ರಬಿಂದು.


ವಿದೇಶಿ ಗಣಿ ಹೂಡಿಕೆಯತ್ತ ಇಡಿ ಕಣ್ಣು


ಇಡಿ ಪ್ರಕಟಣೆ ಪ್ರಕಾರ, ಜಾರಕಿಹೊಳಿ ಕುಟುಂಬಕ್ಕೆ ಸಂಬಂಧಿಸಿದವರು ಕಾಂಗೊದಲ್ಲಿರುವ Eldorado Mining Resources ಮತ್ತು ಜಾಂಬಿಯಾದ Nava Aurum Mining Ltd ಕಂಪನಿಗಳಲ್ಲಿ ವಿದೇಶಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಕಾಂಗೊದ ಚಿನ್ನದ ಗಣಿ ಕಂಪನಿಯಾದ Magnitude Star SARLನಲ್ಲಿ ಶೇ 40ರಷ್ಟು ಪಾಲು ಪಡೆಯುವ ಪ್ರಕ್ರಿಯೆಯನ್ನೂ ಇಡಿ ಉಲ್ಲೇಖಿಸಿದೆ.

ಆದರೆ, ವಿದೇಶದಲ್ಲಿ ಹೂಡಿಕೆ ಮಾಡಿರುವುದೇ ಅಪರಾಧವಲ್ಲ. ಆ ಹೂಡಿಕೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಫೆಮಾ ನಿಯಮಗಳಿಗೆ ಅನುಗುಣವಾಗಿದೆಯೇ, ಹಣ ಯಾವ ಮಾರ್ಗದಲ್ಲಿ ಹೋಗಿದೆ ಹಾಗೂ ಅದಕ್ಕೆ ಸಮರ್ಪಕ ದಾಖಲೆಗಳಿವೆಯೇ ಎಂಬುದೇ ತನಿಖೆಯ ನಿರ್ಣಾಯಕ ಅಂಶ.


ಇಡಿ ಪ್ರಕಾರ, ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಕೆಲವು ಟೆಂಡರ್ ಪ್ರಕ್ರಿಯೆಗಳ ದಾಖಲೆಗಳೂ ಪತ್ತೆಯಾಗಿವೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಹಣಕಾಸು ವ್ಯವಹಾರದ ವಿವರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಇವೆಲ್ಲವೂ ಸದ್ಯಕ್ಕೆ ಇಡಿಯ ಪ್ರಾಥಮಿಕ ಆರೋಪಗಳು ಮತ್ತು ತನಿಖಾ ಅಂಶಗಳಷ್ಟೇ. ನ್ಯಾಯಾಲಯದಲ್ಲಿ ಸಾಕ್ಷ್ಯಗಳ ಮೂಲಕ ಸಾಬೀತಾಗುವವರೆಗೆ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲಾಗದು.







 
 
 

Comments


bottom of page