ಸರ್ಕಾರಿ ಕಚೇರಿಗೆ ಜನ ಅಲೆದಾಡಬಾರದು’ ಅಧಿಕಾರಿಗಳು ಜನರ ಬಳಿಗೆ ಹೋಗಲಿ;
- vilas joshi
- 2 days ago
- 1 min read
‘
ಸಮಸ್ಯೆಗೆ ನಿಗದಿತ ಸಮಯದಲ್ಲೇ ಪರಿಹಾರ ಸಿಗಲಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ.
ಧರ್ಮಟ್ಟಿಯಲ್ಲಿ ಪ್ರಜಾಸೇವೆ ಆಂದೋಲನಕ್ಕೆ ಚಾಲನೆ | ಒಂದೇ ದಿನ 86 ಅರ್ಜಿ ಸ್ವೀಕಾರ
ಮೂಡಲಗಿ: ‘
ಸಣ್ಣಪುಟ್ಟ ಕೆಲಸಕ್ಕೂ ಸಾರ್ವಜನಿಕರು ಒಂದು ಸರ್ಕಾರಿ ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇರಬಾರದು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಸ್ಪಂದಿಸಿ, ನಿಗದಿತ ಅವಧಿಯೊಳಗೆ ಪರಿಹಾರ ಕಲ್ಪಿಸಬೇಕು’ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಾಲ್ಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ **‘ಪ್ರಜಾಸೇವೆ ಆಂದೋಲನ’**ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಹೊಸದಾಗಿ ಆರಂಭಿಸಿರುವ ಪ್ರಜಾಸೇವೆ ವ್ಯವಸ್ಥೆಯ ಮೂಲ ಉದ್ದೇಶವೇ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದಾಗಿದೆ ಎಂದರು.

‘ಸರ್ಕಾರಿ ಯೋಜನೆ ಅಥವಾ ಸೇವೆ ಪಡೆಯಲು ಜನರು ಪದೇಪದೇ ಕಚೇರಿಗಳ ಮೆಟ್ಟಿಲು ಹತ್ತುವಂತಾಗಬಾರದು. ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಿಸಿದ ಇಲಾಖೆ ಅದನ್ನು ಪರಿಶೀಲಿಸಿ ಸಾಧ್ಯವಾದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

ಜನರ ಬೇಡಿಕೆಗಳಿಗೆ ಹಂತ ಹಂತವಾಗಿ ಪರಿಹಾರ
ತಾಲ್ಲೂಕಿನ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳು, ಗ್ರಾಮಸ್ಥರ ಬೇಡಿಕೆಗಳು ಹಾಗೂ ಮೂಲಸೌಕರ್ಯ ಸಮಸ್ಯೆಗಳಿಗೆ ವಿಶೇಷ ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಾರಕಿಹೊಳಿ, ಜನರಿಂದ ಬರುವ ಅರ್ಜಿಗಳನ್ನು ಸರ್ಕಾರದ ಮಟ್ಟದಲ್ಲಿಯೂ ಪರಿಶೀಲಿಸಿ ಸಾಧ್ಯವಾದಷ್ಟು ನೆರವು ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ರೈತರ ಹಿತಾಸಕ್ತಿ, ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು. ನೀರಿನ ಕೊರತೆ ಎದುರಾಗುವ ಪ್ರದೇಶಗಳಲ್ಲಿ ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ, ಮುಂದಿನ ದಿನಗಳಲ್ಲಿ ಸಮಸ್ಯೆ ಮರುಕಳಿಸದಂತೆ ಶಾಶ್ವತ ಯೋಜನೆ ರೂಪಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ತಿರಂಗಾ ಯಾತ್ರೆಗೆ ಅಡ್ಡಿಅಡ್ಡಿ-ಸಹಿಸಲ್ಲ-

86 ಅರ್ಜಿ; ಸಂಬಂಧಿಸಿದ ಇಲಾಖೆಗಳಿಗೆ ರವಾನೆ
ಪ್ರಜಾಸೇವೆ ಆಂದೋಲನದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುಂದಿಟ್ಟರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸುಮಾರು 86 ಅರ್ಜಿಗಳು ಸ್ವೀಕೃತವಾಗಿವೆ.
‘ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ ಶ್ರೀಶೈಲ ಗುಡುಮೆ ತಿಳಿಸಿದರು.
ತಾ.ಪಂ. ಇಒ ಪ್ರಸನ್ನ ನೆರಳೇಕರ, ಅರಭಾವಿ ಸಿಡಿಪಿಒ ಯಲ್ಲಪ್ಪ ಗದಾಡಿ, ಹೆಸ್ಕಾಂ ಅಧಿಕಾರಿ ಎಂ.ಎಸ್. ನಾಗನ್ನವರ, ಸಿಪಿಐ ಶ್ರೀಶೈಲ ಬ್ಯಾಕೂಡ, ಮೂಡಲಗಿ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಸಿ.ಬಿ. ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

‘
ಅರ್ಜಿಯೊಂದಿಗೆ ಬಂದ ಜನರಿಗೆ ಪರಿಹಾರ ಸಿಗಬೇಕು; ಮತ್ತೊಂದು ಕಚೇರಿಗೆ ಹೋಗಿ ಎಂದು ಕೈತೋರಿಸುವ ವ್ಯವಸ್ಥೆ ಬೇಡ’
— ಬಾಲಚಂದ್ರ ಜಾರಕಿಹೊಳಿ




Comments