;
top of page

ಸತೀಶ್ ಮನೇಲಿ ಸಿಕ್ಕಿದ್ದು ಬರೀ ₹1.73 ಕೋಟಿ...!

Writer: vilas joshi
vilas joshi
4 days ago
2 min read


ಮನೆಯಲ್ಲಿ ವಶಪಡಿಸಿಕೊಂಡ ಹಣ: ₹1.73 ಕೋಟಿ

ಹಣಕ್ಕೆ ದಾಖಲೆ: ಲೆಕ್ಕ ಪರಿಶೋಧಕರಿಂದ ಸಿದ್ಧತೆ.


ಎರಡು ಟ್ರಂಕ್‌ ಆರೋಪ: ಒಂದರಲ್ಲಿ ಹಣ; ಮತ್ತೊಂದು ಖಾಲಿ.


₹750 ಕೋಟಿ ಹೂಡಿಕೆ: ಬಾಲಚಂದ್ರ ನಿರಾಕರಣೆ.


ರಾಹುಲ್–ಪ್ರಿಯಾಂಕಾ ಹೂಡಿಕೆ: ತಲಾ ₹25 ಸಾವಿರ ಮಾತ್ರ.


ಸತೀಶ್‌ಗೆ ಕಂಪನಿ ನಂಟು: ಇಲ್ಲ ಎಂಬ ಸ್ಪಷ್ಟನೆ.


ಇ.ಡಿ ಶೋಧ: ರಾಜಕೀಯವಲ್ಲ; ಆರೋಪ ಆಧಾರಿತ ತನಿಖೆ, ಮುಂದಿನ ಹಾದಿ:


ದಾಖಲೆ ಸಲ್ಲಿಕೆ ಮತ್ತು ಕಾನೂನು ಹೋರಾಟ.



E ಬೆಳಗಾವಿ | ವಿಶೇಷ ವರದಿ.


ಬೆಳಗಾವಿ:

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಮತ್ತು ಆಪ್ತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆದ ಇ.ಡಿ ಶೋಧದ ಬೆನ್ನಲ್ಲೇ ಹರಿದಾಡುತ್ತಿರುವ ₹750 ಕೋಟಿ ವಿದೇಶಿ ಹೂಡಿಕೆ, ಎರಡು ಟ್ರಂಕ್ ಹಣ ಹಾಗೂ ‘ಮೈಸೂರು ಲಿಂಕ್‌’ ಚರ್ಚೆಗಳಿಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ.

ಕುಟುಂಬದವರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅವರು, ‘ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ವಶಪಡಿಸಿಕೊಂಡಿರುವುದು ₹1.73 ಕೋಟಿ. ₹750 ಕೋಟಿ ವಿದೇಶಿ ಹೂಡಿಕೆ ಹಾಗೂ ಎರಡು ಟ್ರಂಕ್‌ಗಳಲ್ಲಿ ಹಣ ಪತ್ತೆಯಾಗಿದೆ ಎಂಬ ಸುದ್ದಿ ಸರಿಯಲ್ಲ’ ಎಂದು ಹೇಳಿದ್ದಾರೆ.



ಎರಡು ಟ್ರಂಕ್‌ ಹಣವೇ? ಬಾಲಚಂದ್ರ ಹೇಳಿದ್ದೇನು?


‘ಇ.ಡಿ ಅಧಿಕಾರಿಗಳು ಎರಡು ಟ್ರಂಕ್‌ಗಳನ್ನು ತಂದಿದ್ದರು. ಆದರೆ, ಒಂದು ಟ್ರಂಕ್‌ನಲ್ಲಿ ಹಣ ಕೊಂಡೊಯ್ದಿದ್ದು, ಮತ್ತೊಂದು ಖಾಲಿ ಟ್ರಂಕ್‌ ಅನ್ನು ಮನೆಯಲ್ಲಿಯೇ ಬಿಟ್ಟಿದ್ದಾರೆ.

ಅದನ್ನು ಬೇಕಾದವರಿಗೆ ತೋರಿಸಲು ಸಿದ್ಧ’ ಎಂದು ಬಾಲಚಂದ್ರ ಹೇಳಿದರು.

ಮನೆಯಲ್ಲಿ ವಶಪಡಿಸಿಕೊಂಡ ₹1.73 ಕೋಟಿಗೆ ಲೆಕ್ಕವಿದೆ. ಕುಟುಂಬದ ಲೆಕ್ಕಪರಿಶೋಧಕರು ಅಗತ್ಯ ದಾಖಲೆ ಸಿದ್ಧಪಡಿಸಿದ್ದು, ಅವುಗಳನ್ನು ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದೂ ತಿಳಿಸಿದರು.

ಆದರೆ, ಬೆಳಗಾವಿ, ಬೆಂಗಳೂರು ಅಥವಾ ಇತರ ಸ್ಥಳಗಳಲ್ಲಿ ನಡೆದ ಶೋಧದ ವಿವರ ತಮಗೆ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.



ವಿದೇಶಿ ಕಂಪನಿಯಲ್ಲಿ ಯಾರಿದ್ದಾರೆ?


ಬಾಲಚಂದ್ರ ಜಾರಕಿಹೊಳಿ ಅವರ ಪ್ರಕಾರ, ವಿದೇಶಿ ಕಂಪನಿಯಲ್ಲಿ ರಾಹುಲ್ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ ಹಾಗೂ ಮಹಾದೇವಿ ಭಾಗಿಯಾಗಿದ್ದಾರೆ. ಸತೀಶ್ ಜಾರಕಿಹೊಳಿಗೂ ಆ ಕಂಪನಿಗೂ ನೇರ ಸಂಬಂಧವಿಲ್ಲ ಎಂಬುದು ಅವರ ಪ್ರತಿಪಾದನೆ.



ರಾಹುಲ್ ಮತ್ತು ಪ್ರಿಯಾಂಕಾ ತಲಾ ₹25 ಸಾವಿರದಷ್ಟು ಮಾತ್ರ ಹೂಡಿಕೆ ಮಾಡಿದ್ದಾರೆ. ಆ ಕಂಪನಿ ಸದ್ಯ ಕಾರ್ಯನಿರ್ವಹಿಸುತ್ತಿಲ್ಲ. ಹೀಗಿರುವಾಗ ₹750 ಕೋಟಿ ಹೂಡಿಕೆ ಎಂದು ಬಿಂಬಿಸುವುದು ತಪ್ಪು ಎಂದು ಅವರು ಆಕ್ಷೇಪಿಸಿದರು.



‘ಹೂಡಿಕೆಯ ನಿಜವಾದ ಮೊತ್ತ ಕೇಳಿದರೆ ನೀವು ನಗುತ್ತೀರಿ. ಆದರೆ, ₹750 ಕೋಟಿ ಎಂದು ದೊಡ್ಡದಾಗಿ ತೋರಿಸಲಾಗುತ್ತಿದೆ.’

ಆದಾಗ್ಯೂ, ಹೂಡಿಕೆಯ ಮೊತ್ತ ಮತ್ತು ಹಣಕಾಸು ವ್ಯವಹಾರಗಳ ಅಧಿಕೃತ ಚಿತ್ರಣ ಇ.ಡಿ ಪ್ರಕಟಣೆ ಹಾಗೂ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.


ಇದು ರಾಜಕೀಯ ದಾಳಿಯಲ್ಲ’



ಇ.ಡಿ ಶೋಧಕ್ಕೆ ರಾಜಕೀಯ ಬಣ್ಣ ಹಚ್ಚುವುದನ್ನೂ ಬಾಲಚಂದ್ರ ನೇರವಾಗಿ ವಿರೋಧಿಸಿದರು.

‘ಯಾರಾದರೂ ಆರೋಪ ಅಥವಾ ದೂರು ಸಲ್ಲಿಸಿದರೆ ಇ.ಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ, ಲೋಕಾಯುಕ್ತ ಅಥವಾ ಪೊಲೀಸರು ವಿಚಾರಣೆ ನಡೆಸಲೇಬೇಕು. ಅದು ತನಿಖಾ ಸಂಸ್ಥೆಗಳ ಕರ್ತವ್ಯ. ಈ ಶೋಧವೂ ಆರೋಪವೊಂದರ ಆಧಾರದಲ್ಲಿ ನಡೆದ ಸಾಮಾನ್ಯ ಪ್ರಕ್ರಿಯೆ. ಹೀಗಾಗಿ ಕಾಂಗ್ರೆಸ್‌, ಬಿಜೆಪಿ ಅಥವಾ ಜೆಡಿಎಸ್‌ ನಾಯಕರು ಇದನ್ನು ರಾಜಕೀಯ ದಾಳಿ ಎಂದು ಬಿಂಬಿಸಬಾರದು’ ಎಂದರು.

ಸತೀಶ್ ಜಾರಕಿಹೊಳಿ ಅವರ ಬಳಿ ಕಾನೂನು ತಜ್ಞರ ತಂಡವಿದೆ. ಅವರು ದಾಖಲೆಗಳೊಂದಿಗೆ ಕಾನೂನು ಹೋರಾಟ ನಡೆಸಬೇಕು. ಅಂತಿಮವಾಗಿ ಸರಿ–ತಪ್ಪು ನಿರ್ಧರಿಸುವುದು ನ್ಯಾಯಾಲಯವೇ ಹೊರತು ಮಾಧ್ಯಮ ಚರ್ಚೆಗಳಲ್ಲ ಎಂದು ಪ್ರತಿಪಾದಿಸಿದರು.


2017ರಲ್ಲಿ ರಮೇಶ್‌ಗೂ ಇದೇ ಧೈರ್ಯ


‘2017ರಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾಗ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ಆಗ ಅವರೊಂದಿಗೆ ನಿಂತು ಕಾನೂನು ಹೋರಾಟ ನಡೆಸುವಂತೆ ಧೈರ್ಯ ತುಂಬಿದ್ದೆವು.

ಈಗ ಸತೀಶ್, ರಾಹುಲ್ ಮತ್ತು ಪ್ರಿಯಾಂಕಾ ಅವರಿಗೂ ಅದೇ ಧೈರ್ಯ ಹೇಳಿದ್ದೇವೆ’ ಎಂದು ಬಾಲಚಂದ್ರ ನೆನಪಿಸಿಕೊಂಡರು.


ಸಿದ್ದರಾಮಯ್ಯ–ಸತೀಶ್ ಅಹಿಂದದ ಎರಡು ಕಣ್ಣು’

ಇ.ಡಿ ಶೋಧದ ಹಿಂದೆ ‘ಮೈಸೂರು ಮೂಲದ ದೂರು’ ಇದೆ ಎಂಬ ಚರ್ಚೆಗಳ ಬಗ್ಗೆಯೂ ಅವರು ತೀವ್ರ ಅಸಮಾಧಾನ ಹೊರಹಾಕಿದರು.



ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಅವರದ್ದು ಸುಮಾರು 30 ವರ್ಷಗಳ ಸ್ನೇಹ. ಈ ಅವಧಿಯಲ್ಲಿ ಹತ್ತು ಬಾರಿ ಜಗಳವಾಡಿರಬಹುದು; ಮತ್ತೆ ಒಂದಾಗಿದ್ದಾರೆ. ಈಗಿನ ಶೋಧವನ್ನು ಮೈಸೂರಿನೊಂದಿಗೆ ಜೋಡಿಸಿ ಇಬ್ಬರ ಸಂಬಂಧ ಹಾಳುಮಾಡುವ ಪ್ರಯತ್ನ ನಡೆಯಬಾರದು’ ಎಂದರು.

ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಅಹಿಂದದ ಎರಡು ಕಣ್ಣುಗಳು.

ಆ ಕಣ್ಣುಗಳಿಗೆ ಪೆಟ್ಟು ಬಿದ್ದರೆ ಇಬ್ಬರು ನಾಯಕರಿಗಿಂತ ಅಹಿಂದ ಸಂಘಟನೆಗೆ ಹೆಚ್ಚು ಹಾನಿಯಾಗುತ್ತದೆ.’

ಇಬ್ಬರ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂದು ಆಶಿಸಿದ ಬಾಲಚಂದ್ರ, ತನಿಖೆ ನಡೆಯುತ್ತಿರುವಾಗ ಊಹಾಪೋಹ, ರಾಜಕೀಯ ಲೆಕ್ಕಾಚಾರ ಮತ್ತು ಸಂಬಂಧ ಕೆಡಿಸುವ ಚರ್ಚೆಗಳಿಂದ ದೂರವಿರಬೇಕೆಂದು ಮನವಿ ಮಾಡಿದರು.

 
 
 

Comments


bottom of page