;
top of page

ಸುದ್ದಿಯ ಮನೆಯೊಳಗೂ ಹಾಡಿದೆ!

Writer: vilas joshi
vilas joshi
11 minutes ago
1 min read

ಪತ್ರಕರ್ತರು ಮತ್ತು ಅವರ ಮಕ್ಕಳ ಪ್ರತಿಭೆಗೆ ‘ಗಾನ ಸಮ್ಮಾನ’ ವೇದಿಕೆ; ಎರಡು ದಿನಗಳ ಸಿದ್ಧತೆಯಲ್ಲಿ ಮೂಡಿದ ಸಂಗೀತ ಸಂಭ್ರಮ


ಬೆಳಗಾವಿ:

ದಿನವಿಡೀ ಜನರ ನಡುವೆ ಓಡಾಡಿ, ಅವರ ನೋವು, ನಲಿವು, ಸಾಧನೆಗಳನ್ನು ಸುದ್ದಿಯಾಗಿಸುವ ಪತ್ರಕರ್ತರು ಮನೆಗೆ ಮರಳಿದಾಗ ಅವರಿಗಾಗಿ ಕಾಯುವುದು ಮತ್ತೊಂದು ಜಗತ್ತು. ಆ ಮನೆಯೊಳಗೆ ಹಾಡು ಕಲಿಯುವ ಮಕ್ಕಳು ಇದ್ದಾರೆ; ಸ್ವತಃ ಪತ್ರಕರ್ತರಲ್ಲೂ ಸ್ವರದ ಸೆಳೆತವಿದೆ. ಬಹುತೇಕ ಜನರ ಗಮನಕ್ಕೆ ಬಾರದ ಆ ಪ್ರತಿಭೆಯನ್ನು ವೇದಿಕೆಗೆ ಕರೆತಂದದ್ದು ಬೆಳಗಾವಿ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಗಾನ ಸಮ್ಮಾನ’ ಕಾರ್ಯಕ್ರಮ.



ವೈದ್ಯರ ಮಕ್ಕಳು ವೈದ್ಯರಾಗುತ್ತಾರೆ, ಶಿಕ್ಷಕರ ಮಕ್ಕಳು ಶಿಕ್ಷಕರಾಗುತ್ತಾರೆ ಎಂಬಂತೆ ಪತ್ರಕರ್ತರ ಮಕ್ಕಳೂ ಪತ್ರಕರ್ತರೇ ಆಗುತ್ತಾರೆ ಎಂಬ ಕಲ್ಪನೆ ಸಾಮಾನ್ಯ. ಆದರೆ ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ತಂದೆ ತಾಯಿಯ ವೃತ್ತಿಯ ಮಿತಿ ಇರುವುದಿಲ್ಲ.



ಈ ಮಾತನ್ನು ಕೇವಲ ಹೇಳಿಕೆಗೆ ಸೀಮಿತಗೊಳಿಸದೆ, ಪತ್ರಕರ್ತರು ಹಾಗೂ ಅವರ ಮಕ್ಕಳಿಗೆ ಹಾಡುವ ಅವಕಾಶ ಕಲ್ಪಿಸುವ ಮೂಲಕ ಸಂಘವು ಸಾರ್ವಜನಿಕರ ಮುಂದಿಟ್ಟಿತು.

ನಾಗನೂರು ರುದ್ರಾಕ್ಷಿ ಮಠದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ರೂಪುರೇಷೆ ಸಿದ್ಧವಾಗಿದ್ದು ಕೇವಲ ಎರಡು ದಿನಗಳಲ್ಲಿ. ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅವರ ಆಶೀರ್ವಾದ ಮತ್ತು ಸಹಕಾರ ಕಾರ್ಯಕ್ರಮದ ಆಯೋಜನೆಗೆ ನೆರವಾಯಿತು.



ಅಧಿವೇಶನದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿವಿಧ ಸಭೆಗಳಲ್ಲಿ ನಿರತರಾಗಿದ್ದರಿಂದ ಕಾರ್ಯಕ್ರಮದ ಆರಂಭಕ್ಕೆ ಸ್ವಲ್ಪ ವಿಳಂಬವಾಯಿತು. ಆದರೆ ವೇದಿಕೆಯಲ್ಲಿ ಗಾಯನ ಆರಂಭವಾದ ಬಳಿಕ ಸಭಿಕರ ಗಮನವನ್ನು ಹಿಡಿದಿಟ್ಟದ್ದು ಹಾಡುಗಳೇ.


ತರುಣ ಭಾರತ ಪತ್ರಿಕೆಯ ವರದಿಗಾರ ರಮೇಶ ಹಿರೇಮಠ ಅವರ ಪುತ್ರಿ ಶ್ರದ್ಧಾ ಹಿರೇಮಠ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್‌ನ ನೌಶಾದ್ ಬಿಜಾಪುರ ಅವರ ಪುತ್ರಿ ನಿಧಾ ತಮ್ಮ ಗಾಯನದ ಮೂಲಕ ಮೆಚ್ಚುಗೆ ಗಳಿಸಿದರು.



ಕನ್ನಡಪ್ರಭದ ಹಿರಿಯ ವರದಿಗಾರ ಶ್ರೀಶೈಲ ಮಠದ, ಪುಢಾರಿ ದಿನಪತ್ರಿಕೆಯ ವರದಿಗಾರ ಸಂಜಯ ಸೂರ್ಯವಂಶಿ, ಗೋಮಾಂತಕ ಟೈಮ್ಸ್‌ನ ಲೂಯಿಸ್ ರಾಡ್ರಿಗ್ಸ್ , ಕ್ಸೇಯಾಮೆರಾಮನ್ರಿ ಈರಣ್ದಾ ಇನಾಮತಿ ಸೇರಿದಂತೆ ಇತರ ಪತ್ರಕರ್ತರೂ ಮೈಕ್ ಹಿಡಿದು ಹಾಡಿದರು. ವರದಿಗಾರರಾಗಿ ಪರಿಚಿತರಾದವರು ಗಾಯಕರೆಂದೂ ಗುರುತಿಸಿಕೊಂಡ ಕ್ಷಣಗಳಿಗೆ ಸಭಿಕರ ಚಪ್ಪಾಳೆ ಸಾಥ್ ನೀಡಿತು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಕುಟುಂಬಗಳ ಜತೆಗೆ ಸಾಹಿತಿಗಳು, ವೈದ್ಯರು, ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು, ಹಿರೇಬಾಗೇವಾಡಿಯ ಜನರು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳ ಜನರು ಒಂದೆಡೆ ಸೇರಿದ್ದರಿಂದ ಇದು ಪತ್ರಕರ್ತರ ನಡುವಿನ ಕಾರ್ಯಕ್ರಮವಾಗಿ ಉಳಿಯದೆ, ಪ್ರತಿಭೆಯನ್ನು ಮೆಚ್ಚುವ ಆತ್ಮೀಯ ಸಮಾಗಮವಾಯಿತು.

ಪ್ರತಿದಿನ ಇನ್ನೊಬ್ಬರ ಸಾಧನೆಗೆ ಶೀರ್ಷಿಕೆ ಬರೆಯುವ ಪತ್ರಕರ್ತರ ಮನೆಗಳಲ್ಲಿಯೂ ಸುದ್ದಿಯಾಗಬೇಕಾದ ಪ್ರತಿಭೆಯಿದೆ. ‘ಗಾನ ಸಮ್ಮಾನ’ ಆ ಪ್ರತಿಭೆಗೆ ಮೈಕ್ ಕೊಟ್ಟಿತು; ಕೇಳಲು ಬಂದವರು ಅದಕ್ಕೆ ಚಪ್ಪಾಳೆ ಕೊಟ್ಟರು.

 
 
 

Comments


bottom of page