;
top of page

ನೌಕಾಸಿಬ್ಬಂದಿ ರಕ್ಷಣೆಗೆ ಮೋದಿ ಪ್ರಸ್ತಾವ

Writer: vilas joshi
vilas joshi
1 day ago
2 min read

ಮನಿಲಾದಲ್ಲಿ ಆಸಿಯಾನ್–ಭಾರತ, ಪೂರ್ವ ಏಷ್ಯಾ ಶೃಂಗಸಭೆ |


ವಿಪತ್ತು ನಿರ್ವಹಣೆಗೆ ಜಂಟಿ ಹೇಳಿಕೆ |


ಆಸಿಯಾನ್ ಪ್ರವಾಸಿಗರಿಗೆ ಉಚಿತ ಇ–ವೀಸಾ ಪ್ರಸ್ತಾಪ


ಮನಿಲಾ, ನ. 17:

ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳು ಮತ್ತು ಅವುಗಳ ಸಿಬ್ಬಂದಿ ದಾಳಿಗೆ ಗುರಿಯಾಗುತ್ತಿರುವ ಹಿನ್ನೆಲೆಯಲ್ಲಿ, ನೌಕಾಸಿಬ್ಬಂದಿಯ ರಕ್ಷಣೆಗೆ ಜಂಟಿ ತರಬೇತಿ ಮತ್ತು ತುರ್ತು ಸ್ಪಂದನಾ ವ್ಯವಸ್ಥೆ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಸ್ತಾಪಿಸಿದರು. ಸಂಘರ್ಷಗಳಿಂದ ಆಹಾರ, ಇಂಧನ ಮತ್ತು ರಸಗೊಬ್ಬರ ಪೂರೈಕೆ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಎಚ್ಚರಿಸಿದ ಅವರು, ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಸುರಕ್ಷಿತ ನೌಕಾಯಾನ ಮತ್ತು ನಿಯಮಾಧಾರಿತ ವ್ಯವಸ್ಥೆಗೆ ಕರೆ ನೀಡಿದರು.



ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆದ 23ನೇ ಆಸಿಯಾನ್–ಭಾರತ ಶೃಂಗಸಭೆ ಮತ್ತು 21ನೇ ಪೂರ್ವ ಏಷ್ಯಾ ಶೃಂಗಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಆಸಿಯಾನ್–ಭಾರತ ಸಭೆಯಲ್ಲಿ ವಿಪತ್ತು ಪೂರ್ವಸಿದ್ಧತೆ ಮತ್ತು ನಿರ್ವಹಣೆಯಲ್ಲಿ ಸಹಕಾರ ಬಲಪಡಿಸುವ ಜಂಟಿ ಹೇಳಿಕೆಯನ್ನು ನಾಯಕರು ಅಂಗೀಕರಿಸಿದರು. ಉಭಯ ಕಡೆಯ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯನ್ನೂ ಸಭೆ ಪರಿಶೀಲಿಸಿತು.


ಸಮುದ್ರ ಸಹಕಾರಕ್ಕೆ ದೀರ್ಘಾವಧಿ ಯೋಜನೆ


ಆಸಿಯಾನ್ ರಾಷ್ಟ್ರಗಳೊಂದಿಗೆ ಕಡಲ ಸಂಪರ್ಕ, ವೈಜ್ಞಾನಿಕ ಸಂಶೋಧನೆ, ವಿಪತ್ತು ನಿರ್ವಹಣೆ, ಕರಾವಳಿ ಕಾವಲು ಪಡೆಗಳ ಸಹಕಾರ ಮತ್ತು ನೌಕಾಸಿಬ್ಬಂದಿಯ ಸುರಕ್ಷತೆಯನ್ನು ಒಳಗೊಂಡ ದೀರ್ಘಾವಧಿ ಯೋಜನೆಯನ್ನು ಮೋದಿ ಮುಂದಿಟ್ಟರು. ಗಡಿಯಾಚೆಯ ಆನ್‌ಲೈನ್ ವಂಚನೆ ಪ್ರಕರಣಗಳ ತನಿಖೆಗೆ ನೆರವಾಗುವಂತೆ ಜಂಟಿ ಸೈಬರ್ ವಿಧಿವಿಜ್ಞಾನ ತರಬೇತಿ ನಡೆಸುವ ಸಲಹೆಯನ್ನೂ ನೀಡಿದರು.


ಬೆಳಗಾವಿ ಪತ್ರಕರ್ತರ ಕೊಡುಗೆ ಅಪಾರ

----

ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೌಶಲ ತರಬೇತಿಯಲ್ಲಿ ಭಾರತ ಹಾಗೂ ಆಸಿಯಾನ್ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದ ಮೋದಿ, ಅಣುಶಕ್ತಿ ಕ್ಷೇತ್ರದಲ್ಲಿ ತಾಂತ್ರಿಕ ವಿನಿಮಯ, ಬಾಹ್ಯಾಕಾಶ ಹ್ಯಾಕಥಾನ್ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಸಹಕಾರಕ್ಕೆ ಪ್ರಸ್ತಾವ ಸಲ್ಲಿಸಿದರು. ಆಸಿಯಾನ್ ದೇಶಗಳ ಪ್ರವಾಸಿಗರಿಗೆ ಉಚಿತ ಇ–ವೀಸಾ ನೀಡುವುದು ಮತ್ತು ನಳಂದಾ ವಿಶ್ವವಿದ್ಯಾಲಯದಲ್ಲಿ ಆ ದೇಶಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹೆಚ್ಚಿಸುವುದನ್ನೂ ಸೂಚಿಸಿದರು. 2027ರಲ್ಲಿ ಭಾರತ–ಆಸಿಯಾನ್ ಸಂವಾದ ಸಂಬಂಧಕ್ಕೆ 35 ವರ್ಷ ಹಾಗೂ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಐದು ವರ್ಷ ತುಂಬಲಿವೆ ಎಂದು ಅವರು ತಿಳಿಸಿದರು.


ಉಕ್ರೇನ್, ಪಶ್ಚಿಮ ಏಷ್ಯಾದಲ್ಲಿ ಶಾಂತಿಯುತ ಪರಿಹಾರಕ್ಕೆ ಬೆಂಬಲ

ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಿಗೆ ಭಾರತದ ಬೆಂಬಲವಿದೆ ಎಂದರು. ಭಯೋತ್ಪಾದನೆಯ ಜತೆಗೆ ಗಡಿಯಾಚೆಯ ಸೈಬರ್ ಅಪರಾಧ ಮತ್ತು ಆನ್‌ಲೈನ್ ವಂಚನೆ ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸಿದರು. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸೈಬರ್ ಅಪರಾಧ ಕುರಿತ ಸಮ್ಮೇಳನ, ಗುಜರಾತ್‌ನ ಲೋಥಲ್‌ನಲ್ಲಿ ಕಡಲ ಪರಂಪರೆ ಉತ್ಸವ ಮತ್ತು ನಳಂದಾದಲ್ಲಿ ವಿಶ್ವವಿದ್ಯಾಲಯಗಳ ಸಮಾವೇಶ ಆಯೋಜಿಸಲು ಅವರು ಸಲಹೆ ನೀಡಿದರು.

ಶೃಂಗಸಭೆಯ ನೇಪಥ್ಯದಲ್ಲಿ ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರನ್ನು ಮೋದಿ ಭೇಟಿಯಾದರು. ರಕ್ಷಣೆ, ಬಾಹ್ಯಾಕಾಶ, ರೈಲ್ವೆ ಮೂಲಸೌಕರ್ಯ, ಹಣಕಾಸು ತಂತ್ರಜ್ಞಾನ, ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಗತಿ ಕುರಿತು ಇಬ್ಬರೂ ಚರ್ಚಿಸಿದರು.


 
 
 

Comments


bottom of page