;
top of page

ಬಯಲಾಯಿತು ‘ಗೃಹಲಕ್ಷ್ಮಿ’ ಹಣದ ಕೊಲೆ ರಹಸ್ಯ

Writer: vilas joshi
vilas joshi
3 minutes ago
1 min read

ಸಂತೆಗೆ ಹೋದ ಅಜ್ಜಿ ಮರಳಲಿಲ್ಲ;


ಐದು ದಿನಗಳ ಬಳಿಕ ಬಯಲಾಯಿತು ‘ಗೃಹಲಕ್ಷ್ಮಿ’ ಹಣದ ಕೊಲೆ ರಹಸ್ಯ


ಹಣದಲ್ಲಿ ಪಾಲು ಕೇಳಿ ಮೊಮ್ಮಗನಿಂದಲೇ ಕೊಲೆ ಆರೋಪ;


ಶವವನ್ನು ಗೋಣಿ ಚೀಲದಲ್ಲಿ ಕಟ್ಟಿ ಡ್ಯಾಂ ಹಿನ್ನೀರಿಗೆ ಎಸೆದಿದ್ದಾಗಿ ಎಸ್ಪಿ ರಾಮರಾಜನ್ ಮಾಹಿತಿ.


ಬೆಳಗಾವಿ:

ನವೆಂಬರ್ 10ರಂದು ಪಾಶ್ಚಾಪುರ ಸಂತೆಗೆ ಹೋದ ಹಮ್ಮವ್ವ ಬಾಲಪ್ಪ ಸನದಿ (78) ಸಂಜೆಯಾದರೂ ಮನೆಗೆ ಮರಳಲಿಲ್ಲ. ಕುಟುಂಬದವರು ಹುಡುಕುತ್ತಲೇ ಇದ್ದರು. ಐದು ದಿನಗಳ ಬಳಿಕ ಡ್ಯಾಂ ಹಿನ್ನೀರಿನಲ್ಲಿ ಗೋಣಿ ಚೀಲಗಳ ನಡುವೆ ಅವರ ಶವ ಪತ್ತೆಯಾಯಿತು.


ತನಿಖೆ ಮುಂದುವರಿದಂತೆ, ಹಮ್ಮವ್ವ ಅವರಿಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣವೇ ಕೊಲೆಗೆ ಕಾರಣ ಎಂಬ ಆರೋಪ ಹೊರಬಿತ್ತು. ಪ್ರಕರಣದಲ್ಲಿ ಅವರ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20)ಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.



ಹುಕ್ಕೇರಿ ತಾಲ್ಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವ ಅವರನ್ನು ಅಂದು ಮೊಮ್ಮಗನೇ ಬೈಕ್‌ನಲ್ಲಿ ಸಂತೆಗೆ ಕರೆದೊಯ್ದಿದ್ದ ಎಂದು ಅವರು ತಿಳಿಸಿದ್ದಾರೆ.



ಮಾರ್ಗಮಧ್ಯೆ ಗ್ರಾಮದ ಹೊರವಲಯದಲ್ಲಿ ಗೃಹಲಕ್ಷ್ಮಿ ಹಣದಲ್ಲಿ ತನಗೂ ಪಾಲು ನೀಡುವಂತೆ ಕೇಳಿದ್ದ. ಹಮ್ಮವ್ವ ನಿರಾಕರಿಸಿದಾಗ ಇಬ್ಬರ ನಡುವೆ ಜಗಳ ನಡೆದಿದೆ. ಆಗ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ರಾಮರಾಜನ್ ಹೇಳಿದ್ದಾರೆ .



ಶವ ಮರೆಮಾಚಲು ಗೋಣಿ ಚೀಲ

ಕೊಲೆಯ ಬಳಿಕ ಶವವನ್ನು ಗುಡ್ಡದಲ್ಲಿ ಬಿಟ್ಟು ಪಾಶ್ಚಾಪುರಕ್ಕೆ ತೆರಳಿದ ಆರೋಪಿ, ಎರಡು ಗೋಣಿ ಚೀಲಗಳನ್ನು ತಂದಿದ್ದ. ಹಮ್ಮವ್ವ ಅವರ ಬಳಿಯಿದ್ದ ₹2,300 ತೆಗೆದುಕೊಂಡಿದ್ದಾನೆ. ಬಳಿಕ ಶವವನ್ನು ಚೀಲಗಳಲ್ಲಿ ಕಟ್ಟಿ, ರಾತ್ರಿ ಸಂಜಿನಜಾಳ ಗ್ರಾಮದ ಡ್ಯಾಂ ಹಿನ್ನೀರಿಗೆ ಸಾಗಿಸಿದ್ದಾನೆ. ಶವ ನೀರಿನಲ್ಲಿ ಮುಳುಗುವಂತೆ ಅದರ ಮೇಲೆ ಕಲ್ಲುಗಳನ್ನು ಇರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.



ನವೆಂಬರ್ 15ರಂದು ಹಿನ್ನೀರಿನಲ್ಲಿ ಶವ ಕಾಣಿಸಿಕೊಂಡಾಗ ಪ್ರಕರಣಕ್ಕೆ ತಿರುವು ಸಿಕ್ಕಿತು. ತನಿಖೆಯಲ್ಲಿ ಮೊಮ್ಮಗನ ಮೇಲೆಯೇ ಅನುಮಾನ ಮೂಡಿ, ವಿಚಾರಣೆ ನಡೆಸಿದ ಬಳಿಕ ಆತನನ್ನು ಬಂಧಿಸಲಾಯಿತು. ಯಮಕನಮರಡಿ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯ ನಾಶದ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗೃಹಲಕ್ಷ್ಮಿ ಹಣದಲ್ಲಿ ಪಾಲು ನೀಡುವಂತೆ ಹಲವು ವರ್ಷಗಳಿಂದ ನಡೆಯುತ್ತಿದ್ದ ತಕರಾರು, ಈ ಕೊಲೆ ಪ್ರಕರಣದ ಕೇಂದ್ರಬಿಂದು ಎಂದು ಪೊಲೀಸರು ತಿಳಿಸಿದ್ದಾರೆ.

 
 
 

Comments


bottom of page