ಬೆಳಗಾವಿಯಲ್ಲಿ ಮುಸ್ಲಿಂ ಅಧಿಕಾರಿಗಳಿಂದ ಗಣೇಶನ ಪ್ರತಿಷ್ಠಾಪನೆ, ಪೂಜೆ
ಭಾವೈಕ್ಯತೆಗೆ ಪೊಲೀಸ್ ಠಾಣೆಗಳು ಸಾಕ್ಷಿ
ವಿವಾದಗಳ ನಡುವೆಯೂ ಬೆಳಗಾವಿಯಲ್ಲಿ ಭಾವೈಕ್ಯತೆಯ ಬೆಳಕು.
ಖಾಕಿಯ ಅಂಗಳದಲ್ಲಿ ಧರ್ಮ ಮೀರಿದ ಹಬ್ಬದ ಸಂಭ್ರಮ
ಗಣೇಶೋತ್ಸವದಲ್ಲಿ ಒಂದಾದ ವಿವಿಧ ಧರ್ಮಗಳ ಸಿಬ್ಬಂದಿ
ಮೆರವಣಿಗೆಯ ವಿವಾದಗಳಿಗೆ ಗಡಿನಾಡಿನ ಸಾಮರಸ್ಯವೇ ಉತ್ತರ
ಬೆಳಗಾವಿ:
ಕೈಯ್ಯಲ್ಲಿ ಗಣಪತಿ ಮೂರ್ತಿ... ಮನದಲ್ಲಿ ಭಕ್ತಿ... ಕೈಮುಗಿದು ಪ್ರಾರ್ಥಿಸುವ ಅಧಿಕಾರಿಗಳು...
ಅಲ್ಲಿ ಜಾತಿ–ಧರ್ಮದ ಪ್ರಶ್ನೆಯಿರಲಿಲ್ಲ; ಸೌಹಾರ್ದದ ಸಂದೇಶವಷ್ಟೇ ಇತ್ತು!
ಗಣೇಶೋತ್ಸವದ ಸಂಭ್ರಮದಲ್ಲಿ ಮಿಂದೆದ್ದಿರುವ ಗಡಿನಾಡ ಬೆಳಗಾವಿಯಲ್ಲಿ ಮುಸ್ಲಿಂ ಸಮುದಾಯದ ಅಧಿಕಾರಿಗಳು ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಾವೈಕ್ಯತೆಯ ಬೆಳಕು ಚೆಲ್ಲಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಮುಸ್ಲಿಂ ಅಧಿಕಾರಿಗಳು ಗಣರಾಯನಿಗೆ ಪೂಜೆ ಸಲ್ಲಿಸಿದ್ದು, ಹಬ್ಬದ ಸಂಭ್ರಮಕ್ಕೆ ವಿಶೇಷ ಅರ್ಥ ನೀಡಿತು.

DC ಮೊಹಮ್ಮದ ರೋಷನ್ ಅವರಿಂದ ಗಣಪನಿಗೆ ಪೂಜೆ.
ಬೆಳಗಾವಿ ಮಾರ್ಕೆಟ್ ಠಾಣೆಯ ಸಿಪಿಐ ಜೆ.ಎಂ. ಕಾಲಿಮಿರ್ಚಿ, ಮಾಳಮಾರುತಿ ಠಾಣೆಯ ಇನ್‌ಸ್ಪೆಕ್ಟರ್ ಬಿ.ಎನ್. ಗಡ್ಡೇಕರ, ಎಪಿಎಂಸಿ ಠಾಣೆಯ ಉಸ್ಮಾನಾಬ್ ಅವಟಿ ಹಾಗೂ ಯಮಕನಮರಡಿ ಠಾಣೆಯ ಜಾವೇದ್ ಮುಷಾಪುರಿ ಅವರು ಗಣಪತಿ ಮೂರ್ತಿಯನ್ನು ಹೊತ್ತು ತಂದು, ಠಾಣೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಪೊಲೀಸ್ ಸಿಬ್ಬಂದಿಯೊಂದಿಗೆ ಆರತಿಯಲ್ಲಿ ಪಾಲ್ಗೊಂಡು, ನಾಡಿನಲ್ಲಿ ಶಾಂತಿ, ಸೌಹಾರ್ದ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ಯಮಕನಮರಡಿ ಸಿಪಿಐ ಜಾವೇದ ಮುಷಾಪುರಿ ಅವರು ಗಣಪತಿ ತರುವ ದೃಶ್ಯ.
ಹಬ್ಬಗಳ ಸಂದರ್ಭದಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡಲು ಸದಾ ಮುಂಚೂಣಿಯಲ್ಲಿರುವ ಪೊಲೀಸರು, ಈ ಬಾರಿ ಸ್ವತಃ ಗಣಪತಿಯ ಸೇವೆಯಲ್ಲಿ ತೊಡಗಿಕೊಂಡು ಗಮನ ಸೆಳೆದರು.

ಮಾರ್ಕೆಟ್ ಠಾಣೆಯ ಸಿಪಿಐ ಜೆ.ಎಂ ಕಾಲಿಮಿರ್ಚಿ ಅವರು ವಿಘ್ನನುವಾರಕನನ್ನು ಭಕ್ತಿಯಿಂದ ತರುತ್ತಿರುವುದು.
ಧಾರ್ಮಿಕ ಆಚರಣೆಯನ್ನು ಗೌರವಿಸುವುದರ ಜತೆಗೆ, ‘ಖಾಕಿಗೆ ಧರ್ಮವಿಲ್ಲ; ಸಾರ್ವಜನಿಕರ ರಕ್ಷಣೆ ಮತ್ತು ಸಮಾಜದ ಶಾಂತಿಯೇ ಅದರ ಧರ್ಮ’ ಎಂಬ ಸಂದೇಶವನ್ನು ತಮ್ಮ ನಡೆ ಮೂಲಕ ಸಾರಿದರು.
ಬೆಳಗಾವಿ ನಗರದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಪ್ರತಿವರ್ಷ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಸಿಬ್ಬಂದಿ ಒಗ್ಗೂಡಿ ಪೂಜೆ ಸಲ್ಲಿಸುವುದರೊಂದಿಗೆ ಸತ್ಯನಾರಾಯಣ ಪೂಜೆಯನ್ನೂ ನೆರವೇರಿಸುತ್ತಾರೆ. ವಿವಿಧ ಜಾತಿ, ಧರ್ಮ ಮತ್ತು ಭಾಷೆಯ ಸಿಬ್ಬಂದಿ ಒಂದೇ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸ್ವೀಕರಿಸುವ ಸಂಪ್ರದಾಯ ಪೊಲೀಸ್ ಕುಟುಂಬದ ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ.

ಮಾಳಮಾರುತಿ ಠಾಣೆಯ ಸಿಪಿಐ ಬಿ. ಎನ್. ಗಡ್ಡೇಕರ ಅವರು ಗಣಪತಿಯನ್ನು ತರುತ್ತಿರುವುದು.
ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ವಿವಿಧ ಭಾಷೆ, ಸಂಸ್ಕೃತಿ ಮತ್ತು ಧರ್ಮಗಳು ಬೆರೆತು ಬದುಕುತ್ತಿರುವ ನಗರ. ಇಲ್ಲಿನ ಪೊಲೀಸ್ ಠಾಣೆಗಳಲ್ಲಿ ನಡೆದ ಗಣೇಶಾರಾಧನೆ ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ಮನಸ್ಸುಗಳನ್ನು ಬೆಸೆಯುವ ಹಬ್ಬವಾಗಿ ರೂಪುಗೊಂಡಿತು.
ಧರ್ಮ ಬೇರೆ ಇರಬಹುದು; ಪ್ರಾರ್ಥನೆಯ ಆಶಯ ಒಂದೇ. ಆಚರಣೆಗಳು ವಿಭಿನ್ನವಾಗಿರಬಹುದು; ಬಯಸುವ ಶಾಂತಿ ಒಂದೇ. ಗಣರಾಯನ ಎದುರು ಕೈಮುಗಿದ ಅಧಿಕಾರಿಗಳ ಈ ನಡೆ, ಗಡಿನಾಡಿನ ಭಾವೈಕ್ಯತೆಯ ಪರಂಪರೆಗೆ ಮತ್ತೊಂದು ಸುಂದರ ಪುಟ ಸೇರಿಸಿತು.




Comments