;
top of page

ಬೆಳಗಾವಿಯ ಶಾಂತಿಗೆ ಮಾಧ್ಯಮದ ಕೊಡುಗೆ ಅಪಾರ

Writer: vilas joshi
vilas joshi
1 day ago
1 min read

ಹಬ್ಬದಿಂದ ಕಬ್ಬು ಹೋರಾಟದವರೆಗೆ:


ಸೂಕ್ಷ್ಮ ಸಂದರ್ಭಗಳಲ್ಲಿ ಪತ್ರಕರ್ತರು ತೋರಿದ ಸಂಯಮಕ್ಕೆ ‘ಗಾನ ಸಮ್ಮಾನ’ದಲ್ಲಿ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಮೆಚ್ಚುಗೆ.


.ಬೆಳಗಾವಿ


ಹಬ್ಬಗಳ ಸಂಭ್ರಮ, ಕಬ್ಬು ಬೆಳೆಗಾರರ ಹೋರಾಟದ ಒತ್ತಡದ ನಡುವೆ ಬೆಳಗಾವಿಯಲ್ಲಿ ಶಾಂತಿ ಕಾಪಾಡಲು ಪೊಲೀಸರು ಶ್ರಮಿಸಿದರು, ಸಾರ್ವಜನಿಕರು ಸಹಕರಿಸಿದರು. ಘಟನೆಗಳನ್ನು ಸಮತೋಲನದಿಂದ ಜನರ ಮುಂದಿಟ್ಟ ಪತ್ರಕರ್ತರೂ ಜಿಲ್ಲೆಯ ಸೌಹಾರ್ದ ಕಾಪಾಡಲು ಕೊಡುಗೆ ನೀಡಿದ್ದಾರೆ ಎಂದು ನಾಗನೂರ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಹೇಳಿದರು.


ನಾಗನೂರ ರುದ್ರಾಕ್ಷಿಮಠದ ಸಹಯೋಗದಲ್ಲಿ ಬೆಳಗಾವಿ ಪತ್ರಕರ್ತರ ಸಂಘವು ಶಿವಬಸವನಗರದ ಎಸ್‌ಜಿಬಿಐಟಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ಗಾನ ಸಮ್ಮಾನ’ದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.



ಸಣ್ಣ ಲೋಪವನ್ನೂ ದೊಡ್ಡದಾಗಿ ಬಿಂಬಿಸಿದರೆ ವಿವಾದಕ್ಕೆ ಕಾರಣವಾಗಬಹುದು. ಬೆಳಗಾವಿಯ ಪತ್ರಕರ್ತರು ಜನರ ಭಾವನೆಗಳನ್ನು ಅರಿತು ವಸ್ತುನಿಷ್ಠವಾಗಿ ವರದಿ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಹಬ್ಬಗಳು ಮತ್ತು ರೈತ ಹೋರಾಟಗಳ ವೇಳೆ ಪೊಲೀಸರು ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಧಿಕಾರಿಗಳಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡುವುದರ ಜತೆಗೆ ಅವರ ಶ್ರಮವನ್ನೂ ಗುರುತಿಸಬೇಕು ಎಂದು ಸ್ವಾಮೀಜಿ ಹೇಳಿದರು.



ಹೋರಾಟದ ವರದಿಯಲ್ಲಿ ಪೊಲೀಸರ ಶ್ರಮಕ್ಕೂ ಜಾಗ

ಕಬ್ಬು ಬೆಳೆಗಾರರ ಹೋರಾಟದ ವೇಳೆ ಹಬ್ಬದ ದಿನಗಳಲ್ಲೂ ಮನೆಗೆ ತೆರಳದೆ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಶ್ರಮವನ್ನು ಜನರು ಮಾಧ್ಯಮಗಳ ಮೂಲಕ ಗಮನಿಸಿದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನೆನಪಿಸಿಕೊಂಡರು.

ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಮಾಧ್ಯಮದ ಸಹಕಾರವನ್ನು ಸ್ಮರಿಸಿ, ಪತ್ರಕರ್ತರ ಕುಟುಂಬದವರನ್ನೂ ಭೇಟಿಯಾಗುವ ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.


ಬಾಲ್ಯದಲ್ಲಿ ಹಳ್ಳಿಗೆ ಪತ್ರಿಕೆ ಬರುವುದನ್ನೇ ಕಾಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ, ಡಿಜಿಟಲ್ ಮಾಧ್ಯಮದ ಬೆಳವಣಿಗೆಯಿಂದ ಸುದ್ದಿ ತಲುಪುವ ಬಗೆಯೂ ಓದುವ ಅಭ್ಯಾಸವೂ ಬದಲಾಗಿದೆ ಎಂದರು.

ಹಾಡಿನ ವೇದಿಕೆಗೆ ಪತ್ರಕರ್ತರ ಕುಟುಂಬಗಳು

ವೃತ್ತಿಯ ಒತ್ತಡ ಮತ್ತು ಕೆಲಸದ ಸಮಯದ ಅನಿಶ್ಚಿತತೆಯ ನಡುವೆಯೂ ಪತ್ರಕರ್ತರಿಗೆ ಬೆಂಬಲ ನೀಡುವ ಕುಟುಂಬಗಳನ್ನು ಗೌರವಿಸುವುದು ಕಾರ್ಯಕ್ರಮದ ಆಶಯ ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಲಾಸ ಜೋಶಿ ಹೇಳಿದರು. ಸಂಗೀತ ಸಂಜೆಯಲ್ಲಿ ಕುಟುಂಬದ ಸದಸ್ಯರು ಗಾಯನ ಮತ್ತು ಇತರ ಕಲಾಪ್ರತಿಭೆ ಪ್ರದರ್ಶಿಸಿದರು.


ಕೇಂದ್ರ ಗೃಹಸಚಿವರ ಪದಕ ಪುರಸ್ಕೃತ ಮಾಳಮಾರುತಿ ಠಾಣೆಯ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ ಅವರನ್ನು ಸನ್ಮಾನಿಸಲಾಯಿತು. ಜಿಪಂ ಸಿಇಒ ರಾಹುಲ ಶಿಂಧೆ, ಡಿಸಿಪಿ ಎನ್‌.ವಿ. ಬರಮನಿ ಉಪಸ್ಥಿತರಿದ್ದರು.


 
 
 

Comments


bottom of page