;
top of page

ನಾಗೇಂದ್ರರದ್ದು ಅನ್ಯಾಯದ ಕಣ್ಣೀರಲ್ಲ; ಕರ್ಮದ ಕಣ್ಣೀರು

  • Writer: vilas joshi
    vilas joshi
  • 20 hours ago
  • 3 min read

ಶಂಭೂಕ–ಮನುಸ್ಮೃತಿಯ ಪರದೆ ಹಾಕಿ ಹಗರಣ ಮುಚ್ಚಲಾಗದು’


ಮೂರು ಮುಂಬೈ ನಂಟುಗಳ ಬಗ್ಗೆ ಉತ್ತರಿಸಲಿ; 10 ಶಾಸಕರ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಲಿ’


(Ebelagavi Report)

ಬಳ್ಳಾರಿ: ‘

ಶಂಭೂಕ, ಮನುಸ್ಮೃತಿ, ಮನುವಾದ, ಜಾತಿ, ಕಣ್ಣೀರು—ಇವೆಲ್ಲವೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮರೆಮಾಚಲು ಶಾಸಕ ಬಿ. ನಾಗೇಂದ್ರ ನಡೆಸುತ್ತಿರುವ ನಾಟಕ. ಅವರು ಸುರಿಸಿದ್ದು ಅನ್ಯಾಯಕ್ಕೊಳಗಾದ ಕಣ್ಣೀರಲ್ಲ; ವಾಲ್ಮೀಕಿ ಸಮಾಜಕ್ಕೆ ಮಾಡಿದ ದ್ರೋಹದ ಕರ್ಮದ ಕಣ್ಣೀರು’ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಖಡಕ್ಕಾಗಿ ವಾಗ್ದಾಳಿ ನಡೆಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಅವರು, ‘ಸ್ವಯಂ ಘೋಷಿತ ಕಲಿಯುಗದ ಶಂಭೂಕನೇ, ನಿನಗೆ ರಾಜಕೀಯ ಜನ್ಮ ಕೊಟ್ಟಿದ್ದು ಇದೇ ಬಿಜೆಪಿ; ಇದೇ ಜನಾರ್ದನ ರೆಡ್ಡಿ. ಕೂಡ್ಲಿಗೆಯಲ್ಲಿ ಮೊದಲ ಬಾರಿಗೆ ಶಾಸಕನಾಗಿದ್ದು ಬಿಜೆಪಿಯಿಂದ ಎಂಬುದನ್ನು ಮರೆತು ಈಗ ಮನುವಾದಿ, ಮನುಸ್ಮೃತಿ ಎಂದು ಮಾತನಾಡುತ್ತಿದ್ದೀಯ. ನಿನ್ನ ಬದುಕು ಎಲ್ಲಿಂದ ಆರಂಭವಾಯಿತು, ರಾಜಕೀಯವಾಗಿ ನೀನು ಎಲ್ಲಿಂದ ಬಂದೆ ಎಂಬುದು ಇಡೀ ಬಳ್ಳಾರಿಗೆ ಗೊತ್ತಿದೆ’ ಎಂದರು.


‘ಶಂಭೂಕನಲ್ಲ; ಚಂದ್ರಶೇಖರ್‌ ನೆನಪಾಗಲಿ


‘ರಾಮಾಯಣದ ಉತ್ತರಕಾಂಡ ಮತ್ತು ಶಂಭೂಕನ ಕಥೆ ಹೇಳುವ ಮೊದಲು ನಿನಗೆ ಶಿವಮೊಗ್ಗದ ಚಂದ್ರಶೇಖರ್ ನೆನಪಾಗಬೇಕಿತ್ತು. ನೀನು ಸಚಿವನಾಗಿದ್ದ ಇಲಾಖೆಯ ಅಧಿಕಾರಿ, ದಲಿತ ಸಮುದಾಯದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡರು. ಈ ಕಲಿಯುಗದ ನಿಜವಾದ ಶಂಭೂಕನನ್ನು ಹುಡುಕುವುದಾದರೆ ಮೊದಲು ಅವರ ಸಾವಿನ ಕುರಿತು ಮಾತನಾಡು. ಅವರ ಸಾವಿಗೆ ಕಾರಣವಾದ ಪರಿಸ್ಥಿತಿಗೆ ಉತ್ತರಿಸಬೇಕಾದ ನಿನಗೆ ರಾಮಾಯಣದ ಘಟನೆಗಳನ್ನು ಉಲ್ಲೇಖಿಸುವ ನೈತಿಕ ಅರ್ಹತೆ ಇಲ್ಲ’ ಎಂದು ರೆಡ್ಡಿ ಕಿಡಿಕಾರಿದರು.

‘ವಾಲ್ಮೀಕಿ ಮಹರ್ಷಿಗಳ ಹೆಸರು ಹೇಳುವುದಕ್ಕೂ ಯೋಗ್ಯತೆ ಬೇಕು. ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳು, ಯುವಕರು, ರೈತರು ಮತ್ತು ಮಹಿಳೆಯರ ಬದುಕು ಕಟ್ಟಬೇಕಿದ್ದ ಹಣದ ಬಗ್ಗೆ ಉತ್ತರಿಸದೆ ವಾಲ್ಮೀಕಿ ಮಹರ್ಷಿಗಳ ಹೆಸರನ್ನೇ ರಾಜಕೀಯ ರಕ್ಷಣೆಗೆ ಬಳಸಿಕೊಳ್ಳಬೇಡ’ ಎಂದರು.


ಮುಂಬೈನ ಆ ಮೂವರು ಯಾರು?


ನಾಗೇಂದ್ರ ಅವರಿಗೆ ನೇರ ಪ್ರಶ್ನೆಗಳ ಸುರಿಮಳೆಗೈದ ರೆಡ್ಡಿ, ‘ನೇಹಾ ಕಲಾಂ ಮನ್ಸೂರಿ, ಜಹರ್ ಕಲಾಂ ಮನ್ಸೂರಿ ಮತ್ತು ಕಲಾಂ ಶಕೂರ್ ಮನ್ಸೂರಿ—ಈ ಮೂವರು ಯಾರು? ನಿನಗೂ ಅವರಿಗೂ ಇರುವ ಆತ್ಮೀಯತೆ ಏನು? ಅವರ ಖಾತೆಗಳಿಗೆ ₹6.50 ಕೋಟಿಗೂ ಹೆಚ್ಚು ಹಣ ಹೋಗಿದೆ ಎಂಬ ಆರೋಪವಿದೆ. ಅವರು ಸಿಬಿಐ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದೇಕೆ? ಬಳ್ಳಾರಿಯ ಜನರೆದುರು ಪತ್ರಿಕಾಗೋಷ್ಠಿ ನಡೆಸಿ ಈ ಮೂರು ಹೆಸರುಗಳ ಬಗ್ಗೆ ಸ್ಪಷ್ಟ ಉತ್ತರ ಕೊಡು’ ಎಂದು ಆಗ್ರಹಿಸಿದರು.


‘ನಿನ್ನ ಆಪ್ತ ಸಹಾಯಕ ವಿಜಯಕುಮಾರ್ ಗೌಡ ಸೇರಿದಂತೆ 24 ಮಂದಿ ಪಾತ್ರ ವಹಿಸಿದ್ದಾರೆ; ಸುಮಾರು 800 ಖಾತೆಗಳಿಗೆ ಹಣ ಹರಿದಿದೆ ಎಂಬ ವಿವರ ತನಿಖಾ ದಾಖಲೆಗಳಲ್ಲಿದೆ. ತೆಲಂಗಾಣ, ಗೋವಾ ಮತ್ತು ಮುಂಬೈವರೆಗೆ ಹಣ ಹೋಗಿದೆ; ಅಲ್ಲಿಂದ ನಗದು ಹಿಂಪಡೆದು ಚಿನ್ನ, ದುಬಾರಿ ಕಾರು ಹಾಗೂ ಆಸ್ತಿ ಖರೀದಿಸಲಾಗಿದೆ ಎಂಬ ಆರೋಪಗಳಿವೆ. “ನಾನಿಲ್ಲ, ನಾನಿಲ್ಲ” ಎಂದು ಮೇಜು ಬಡಿದರೆ ದಾಖಲೆಗಳು ಅಳಿಸಿಹೋಗುವುದಿಲ್ಲ. ನಾನು ಹೇಳುತ್ತಿದ್ದೇನೆ—ನೀನು ಈ ಹಗರಣದಲ್ಲಿ ಇದ್ದೀಯ, ಇದ್ದೀಯ, ಇದ್ದೀಯ. ತಪ್ಪಿಸಿಕೊಂಡು ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.


ಮೂರು ಲಕ್ಷ ಜನರ ಹಣ; ಒಬ್ಬ ನಾಗೇಂದ್ರನ ಸೊಕ್ಕು’


‘₹187 ಕೋಟಿ ಹಣವನ್ನು ಮೂರು ಲಕ್ಷ ವಾಲ್ಮೀಕಿ ಕುಟುಂಬಗಳಿಗೆ ಹಂಚಬಹುದಿತ್ತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಯುವಕರಿಗೆ ಸ್ವಯಂ ಉದ್ಯೋಗ, ರೈತರಿಗೆ ಗಂಗಾ ಕಲ್ಯಾಣ ಯೋಜನೆ, ಮಹಿಳೆಯರಿಗೆ ಸಣ್ಣ ವ್ಯಾಪಾರದ ನೆರವು ಸಿಗಬಹುದಿತ್ತು. ಆ ಮೂರು ಲಕ್ಷ ಜನರಿಗೆ ಸೇರಬೇಕಿದ್ದ ಹಣಕ್ಕೆ ದ್ರೋಹ ಮಾಡಿ, “ನಾಗೇಂದ್ರನನ್ನು ಮುಟ್ಟಿದರೆ ಬಳ್ಳಾರಿಯಲ್ಲಿ ಒಂದು ಲಕ್ಷ ನಾಗೇಂದ್ರರು ಹುಟ್ಟುತ್ತಾರೆ” ಎಂದು ಹೇಳುತ್ತಿದ್ದೀಯಲ್ಲ—ಇದು ಮೂರ್ಖತನ ಮತ್ತು ದುರಹಂಕಾರದ ಮಾತು’ ಎಂದು ಹರಿಹಾಯ್ದರು.

‘ಒಂದು ಲಕ್ಷ ನಾಗೇಂದ್ರರು ನಮಗೆ ಬೇಡ. ಅನ್ಯಾಯಕ್ಕೊಳಗಾದ ಮೂರು ಲಕ್ಷ ವಾಲ್ಮೀಕಿ ಕುಟುಂಬಗಳಿಗೆ ಉತ್ತರ ಬೇಕು. ನೀನು ಹಾಕಿದ ಕಣ್ಣೀರು ನಾಟಕದ ಕಣ್ಣೀರು; ಕೆಟ್ಟ ಕರ್ಮದ ಕಣ್ಣೀರು. ಬಹುಶಃ ಅದನ್ನು ಕಂಡು ಚಂದ್ರಶೇಖರ್ ಅವರ ಆತ್ಮಕ್ಕೆ ಒಂದಿಷ್ಟಾದರೂ ಶಾಂತಿ ಸಿಕ್ಕಿರಬಹುದು’ ಎಂದರು.


ಹಗರಣವಿಲ್ಲದಿದ್ದರೆ ರಾಜೀನಾಮೆ ಪಡೆದಿದ್ದೇಕೆ?’


‘ಹಗರಣವೇ ನಡೆದಿಲ್ಲವೆಂದಾದರೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನ ರಾಜೀನಾಮೆ ಪಡೆದಿದ್ದೇಕೆ? ಸದನದಲ್ಲಿಯೇ ಹಣ ದುರ್ಬಳಕೆಯಾಗಿದೆ ಎಂದು ಒಪ್ಪಿಕೊಂಡಿದ್ದೇಕೆ? ಆಗ ಹಗರಣವಿತ್ತು; ಈಗ ಮತ್ತೆ ಸಚಿವನಾದ ತಕ್ಷಣ ಹಗರಣ ಇಲ್ಲವಾಯಿತೇ? ತನಿಖೆ ಪೂರ್ಣಗೊಳ್ಳುವ ಮುನ್ನವೇ ನಿನ್ನನ್ನು ಮತ್ತೆ ಸಚಿವನನ್ನಾಗಿ ಮಾಡಿದ್ದೇ ಕಾಂಗ್ರೆಸ್‌ನ ಎರಡನೇ ತಪ್ಪು’ ಎಂದು ರೆಡ್ಡಿ ಪ್ರಶ್ನಿಸಿದರು.

‘ಇ.ಡಿ ಮತ್ತು ಸಿಬಿಐ ಯಾರ ಎದೆ ಬಡಿತ, ಕಣ್ಣೀರು ಅಥವಾ ರಾಜಕೀಯ ಪ್ರಭಾವ ನೋಡಿ ಪ್ರಕರಣ ದಾಖಲಿಸುವುದಿಲ್ಲ. ಸಾಕ್ಷ್ಯವಿದ್ದರೆ ಮಾತ್ರ ಕ್ರಮ ಕೈಗೊಳ್ಳುತ್ತವೆ. ಕಾನೂನು ಮತ್ತು ನ್ಯಾಯಾಲಯದ ಮುಂದೆ ನಿನ್ನ ನಾಟಕ ನಡೆಯುವುದಿಲ್ಲ’ ಎಂದರು.


ರಾಜೀನಾಮೆ ಕೊಡಿಸಿ; ನಾಳೆಯೇ ಚುನಾವಣೆಗೆ ಬನ್ನಿ’


‘ವಾಲ್ಮೀಕಿ ನಿಗಮದ ಹಣದಿಂದಲೇ ಈ. ತುಕಾರಾಂ ಸಂಸದರಾಗಿದ್ದಾರೆ ಎಂಬ ಆರೋಪ ತನಿಖಾ ದಾಖಲೆಗಳಲ್ಲಿದೆ. ಅಖಂಡ ಬಳ್ಳಾರಿ ಜಿಲ್ಲೆಯ ಶಾಸಕರಿಗೆ ಎಷ್ಟೆಷ್ಟು ಹಣ ಹಂಚಲಾಗಿದೆ ಎಂಬ ವಿವರವೂ ಹೊರಬಂದಿದೆ. ಕಾಂಗ್ರೆಸ್‌ಗೆ ತಾಕತ್ತಿದ್ದರೆ ತುಕಾರಾಂ ಸೇರಿದಂತೆ ಅಖಂಡ ಜಿಲ್ಲೆಯ ಹತ್ತು ಶಾಸಕರಿಂದ ರಾಜೀನಾಮೆ ಕೊಡಿಸಲಿ’ ಎಂದು ಸವಾಲು ಹಾಕಿದರು.

‘ಬಳ್ಳಾರಿಗೆ ಬಾ, ನೋಡಿಕೊಳ್ಳುತ್ತೇವೆ ಎಂದು ನಾಗೇಂದ್ರ ಸವಾಲು ಹಾಕಿದ್ದರು. ನಾನು ಬಳ್ಳಾರಿಗೆ ಬಂದಿದ್ದೇನೆ. ಈಗ ನನ್ನ ಸವಾಲು ಸ್ವೀಕರಿಸಲಿ. ಸಂಸದರು ಮತ್ತು ಹತ್ತು ಶಾಸಕರು ರಾಜೀನಾಮೆ ಕೊಡಲಿ; ನಾಳೆ ಬೆಳಿಗ್ಗೆಯೇ ಚುನಾವಣೆಗೆ ನಾವು ಸಿದ್ಧ. ಹತ್ತಕ್ಕೆ ಹತ್ತು ಕ್ಷೇತ್ರಗಳಲ್ಲಿ ಗೆಲ್ಲದಿದ್ದರೆ ನಾನು ಜನಾರ್ದನ ರೆಡ್ಡಿಯೇ ಅಲ್ಲ’ ಎಂದು ಗುಡುಗಿದರು.

‘ರಾಜಕೀಯದಲ್ಲಿ ಸೋಲು–ಗೆಲುವು ಸಹಜ. ಶ್ರೀರಾಮುಲು ಸೇರಿದಂತೆ ಬಿಜೆಪಿ ನಾಯಕರನ್ನು “ರಿಜೆಕ್ಟೆಡ್ ಪೀಸ್‌ಗಳು” ಎನ್ನುವ ನಾಗೇಂದ್ರ, ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಹಾಗೆಯೇ ಕರೆಯುತ್ತಾರೆಯೇ?’ ಎಂದು ಪ್ರಶ್ನಿಸಿದರು.

‘ಸ್ಕ್ಯಾಮ್‌ ಬಗ್ಗೆ ಮಾತನಾಡಬೇಕಾದವನು ಶಂಭೂಕನ ಬಗ್ಗೆ ಮಾತನಾಡುತ್ತಿದ್ದಾನೆ; ದಾಖಲೆಗಳಿಗೆ ಉತ್ತರಿಸಬೇಕಾದವನು ಕಣ್ಣೀರು ಹಾಕುತ್ತಿದ್ದಾನೆ; ಜನರಿಗೆ ಲೆಕ್ಕ ಕೊಡಬೇಕಾದವನು ಚುನಾವಣೆಯ ಸವಾಲು ಹಾಕುತ್ತಿದ್ದಾನೆ. ಎಷ್ಟೇ ದಿಕ್ಕು ತಪ್ಪಿಸಿದರೂ ವಾಲ್ಮೀಕಿ ನಿಗಮದ ಹಣದ ನೆರಳು ನಿನ್ನನ್ನು ಬಿಡುವುದಿಲ್ಲ. ನಾನು ಹಾಕಿರುವ ರಾಜೀನಾಮೆ ಮತ್ತು ಮರುಚುನಾವಣೆಯ ಸವಾಲನ್ನು ಸ್ವೀಕರಿಸು’ ಎಂದು ರೆಡ್ಡಿ ಸವಾಲೆಸೆದರು.


ಆರೋಪಗಳಿಗೆ ನಾಗೇಂದ್ರ ಉತ್ತರಿಸಲಿ


ನೇಹಾ ಕಲಾಂ ಮನ್ಸೂರಿ, ಜಹರ್ ಕಲಾಂ ಮನ್ಸೂರಿ ಮತ್ತು ಕಲಾಂ ಶಕೂರ್ ಮನ್ಸೂರಿ ಯಾರು? ಅವರ ಖಾತೆಗಳಿಗೆ ಹಣ ಏಕೆ ಹೋಯಿತು? ಅವರು ನಿರೀಕ್ಷಣಾ ಜಾಮೀನು ಪಡೆದಿದ್ದೇಕೆ? ಈ ಮೂವರೊಂದಿಗಿನ ಸಂಬಂಧವೇನು ಎಂಬುದನ್ನು ನಾಗೇಂದ್ರ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.

— ಜಿ. ಜನಾರ್ದನ ರೆಡ್ಡಿ, ಶಾಸಕ

 
 
 

Comments


bottom of page