;
top of page

ದಕ್ಷಿಣಕ್ಕೆ ಅಭಿವೃದ್ಧಿ ಬೆಳಕು; ಉತ್ತರದ ಉದ್ಯಮಗಳಿಗೆ ಇನ್ನೂ ಕತ್ತಲೆ

  • Writer: vilas joshi
    vilas joshi
  • 2 days ago
  • 1 min read

ಒಂದೇ ನಗರದಲ್ಲಿ ಕೈಗಾರಿಕಾ ಮೂಲಸೌಕರ್ಯಕ್ಕೆ ಎರಡು ಮಾನದಂಡ?


ದಕ್ಷಿಣಕ್ಕೆ ಅಭಿವೃದ್ಧಿ; ಉತ್ತರಕ್ಕೆ ನಿರ್ಲಕ್ಷ್ಯ ಯಾಕೆ?

ಐದು ವರ್ಷ ಮನವಿ ಮಾಡಿದರೂ ರಸ್ತೆ–ಚರಂಡಿ ಸರಿಯಾಗಿಲ್ಲ; ಒಂದೇ ಬೆಳಗಾವಿಯಲ್ಲಿ ಕೈಗಾರಿಕಾ ವಲಯಗಳಿಗೆ ಎರಡು ನ್ಯಾಯವೇ?


E belagavi SPL Report

ಬೆಳಗಾವಿ:

ನಗರದ ದಕ್ಷಿಣ ಭಾಗದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ತುಸು ಉತ್ತಮವಾಗಿದೆ ಎಂಬ ಅಭಿಪ್ರಾಯ ಉದ್ಯಮ ವಲಯದಲ್ಲಿದೆ. ಆದರೆ ಉತ್ತರ ಬೆಳಗಾವಿಯ ಹೊನಗಾ–ಕಾಕತಿ–ಕಂಗ್ರಾಳಿ ಕೈಗಾರಿಕಾ ವಲಯದಲ್ಲಿ ರಸ್ತೆ, ಚರಂಡಿ, ನೀರು, ಬೀದಿದೀಪದಂತಹ ಮೂಲಭೂತ ಸೌಲಭ್ಯಗಳಿಗೂ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಮುಂದುವರಿದಿದೆ.

ಉತ್ತರ ಬೆಳಗಾವಿ ಕೈಗಾರಿಕಾ ಸಂಘದ ಪ್ರಕಾರ, ಈ ಸಮಸ್ಯೆಗಳ ಪರಿಹಾರಕ್ಕಾಗಿ ಕಳೆದ ಐದು ವರ್ಷಗಳಿಂದ ಸಿಂಗಲ್ ವಿಂಡೋ ಸಭೆಗಳಲ್ಲಿ ನಿರಂತರವಾಗಿ ಮನವಿ ಸಲ್ಲಿಸಲಾಗುತ್ತಿದೆ. ಸ್ಥಳೀಯ KIADB ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ಪ್ರಸ್ತಾವನೆ ಬೆಂಗಳೂರಿಗೆ ಕಳುಹಿಸಲಾಗಿದೆ’ ಎಂಬ ಉತ್ತರ ಸಿಗುತ್ತದೆ.

ಆದರೆ, ಅಲ್ಲಿಂದ ಸ್ಪಷ್ಟ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬುದು ಉದ್ಯಮಿಗಳ ಅಳಲು.

ಹೊನಗಾ–ಕಾಕತಿ–ಕಂಗ್ರಾಳಿ ವಲಯದಲ್ಲಿ 300ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ನೇರ ಉದ್ಯೋಗ ಪಡೆದಿದ್ದಾರೆ. ಇಷ್ಟೊಂದು ಉದ್ಯೋಗ ಸೃಷ್ಟಿಸುವ ಪ್ರದೇಶದಲ್ಲೇ ಕೆಲವು ರಸ್ತೆಗಳಿಗೆ ಸುಮಾರು 15 ವರ್ಷಗಳಿಂದ ಸಮರ್ಪಕ ಮರುಡಾಂಬರೀಕರಣ ಆಗಿಲ್ಲ ಎಂದು ಉದ್ಯಮಿಗಳು ದೂರಿದ್ದಾರೆ.

ಅಪೂರ್ಣ ಚರಂಡಿ, ಪೈಪ್ ಸೋರಿಕೆ, ಸಮರ್ಪಕ ಬೀದಿದೀಪದ ಕೊರತೆ ಹಾಗೂ ಕೇಬಲ್–ಪೈಪ್ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಮರುಸ್ಥಾಪಿಸದಿರುವುದು ಮತ್ತಷ್ಟು ಸಮಸ್ಯೆ ತಂದಿದೆ.

ಇದರೊಂದಿಗೆ, 30 ವರ್ಷಕ್ಕೂ ಹೆಚ್ಚು ಕಾಲ ಕೈಗಾರಿಕೆ ನಡೆಸುತ್ತಿರುವವರ ಪೈಕಿ ಶೇ 50ಕ್ಕೂ ಹೆಚ್ಚು ಮಂದಿಗೆ ಇನ್ನೂ ಪೂರ್ಣ ಮಾಲೀಕತ್ವ ದಾಖಲೆ ಸಿಕ್ಕಿಲ್ಲ ಎಂಬುದು NBIAಯ ಮತ್ತೊಂದು ಅಳಲು.

ಹೀಗಾಗಿ ಪ್ರಶ್ನೆ ಈಗ ಕೇವಲ ಅಧಿಕಾರಿಗಳದ್ದಲ್ಲ; ರಾಜಕೀಯ ಇಚ್ಛಾಶಕ್ತಿಯದ್ದೂ ಹೌದು.

ಕ್ಷೇತ್ರದ ಜನಪ್ರತಿನಿಧಿ ಆಡಳಿತ ಪಕ್ಷದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ಕೈಗಾರಿಕಾ ಅಭಿವೃದ್ಧಿ ಪಕ್ಷಾತೀತವಾಗಿರಬೇಕು. ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ತರಿಸುವುದು, ಅಧಿಕಾರಿಗಳನ್ನು ಚುರುಕುಗೊಳಿಸುವುದು ಮತ್ತು ಕಾಮಗಾರಿ ಪೂರ್ಣ ಗೊಳ್ಳುವವರೆಗೂ ಹಿಂಬಾಲಿಸುವ ಸಂಕಲ್ಪ ಅಗತ್ಯ.


ಒಂದೆಡೆ ಸರ್ಕಾರ ಹೊಸ ಉದ್ಯಮಗಳನ್ನು ರಾಜ್ಯಕ್ಕೆ ಆಹ್ವಾನಿಸುತ್ತಿದೆ. ಮತ್ತೊಂದೆಡೆ ಈಗಾಗಲೇ ಬಂಡವಾಳ ಹೂಡಿ ಉದ್ಯೋಗ ನೀಡುತ್ತಿರುವ ಕೈಗಾರಿಕೆಗಳೇ ಮೂಲಸೌಕರ್ಯಕ್ಕಾಗಿ ಪರದಾಡುತ್ತಿದ್ದರೆ, ‘ಉದ್ಯಮ ಸ್ನೇಹಿ ರಾಜ್ಯ’ ಎಂಬ ಘೋಷಣೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೆ ಒಳಗಾಗುತ್ತದೆ.


ದಕ್ಷಿಣದಲ್ಲಿ ಸಾಧ್ಯವಾಗಿರುವ ಅಭಿವೃದ್ಧಿ ಉತ್ತರದಲ್ಲೂ ಸಾಧ್ಯವಾಗಬೇಕು. ಅದಕ್ಕೆ ಮತ್ತೊಂದು ಮನವಿ ಅಥವಾ ಭರವಸೆ ಬೇಡ; ಕಾಲಮಿತಿಯ ಕೆಲಸ ಮತ್ತು ರಾಜಕೀಯ ಇಚ್ಛಾಶಕ್ತಿ ಬೇಕು.

 
 
 

Comments


bottom of page