ತಪ್ಪೊಪ್ಪಿಕೊಂಡಿಲ್ಲ, ಹೆಸರು ಅಳಿಸಲು ಹೇಳಿಲ್ಲ: ಅಭಯ ಪಾಟೀಲ ತಿರುಗೇಟು
‘ಹೇಳಿಕೆ ಹಿಂಪಡೆದು ಕ್ಷಮೆ ಕೇಳಲಿ’ ಎಂದು ಡಿ.ಕೆ. ಶಿವಕುಮಾರ್‌ಗೆ ಆಗ್ರಹ.
ಬೆಳಗಾವಿ:
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಾನು ಚುನಾವಣಾ ಅಧಿಕಾರಿಯ ಮುಂದೆ ತಪ್ಪೊಪ್ಪಿಕೊಂಡಿಲ್ಲ. ಹೆಸರುಗಳನ್ನು ನೇರವಾಗಿ ಅಳಿಸುವಂತೆ ಪತ್ರವನ್ನೂ ಕೊಟ್ಟಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪತ್ರದ ಅರ್ಥವನ್ನು ತಿರುಚಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

‘ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಪ್ಪಾಗಿದೆ ಎಂದು ನಾನು ಒಪ್ಪಿಕೊಂಡಿದ್ದೇನೆ ಎಂಬ ಶಿವಕುಮಾರ್ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಆ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
‘ಪರಿಶೀಲಿಸಿ ಎಂದಿದ್ದೇನೆ; ಅಳಿಸಿ ಎಂದಿಲ್ಲ’
ಬೂತ್ ಮಟ್ಟದ ಪಕ್ಷದ ಏಜೆಂಟರು ನೀಡಿದ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಪಾಟೀಲ ಹೇಳಿದರು.

‘
ಅವರು ಸಲ್ಲಿಸಿದ ಮಾಹಿತಿಯನ್ನು ಪರಿಶೀಲಿಸಿ, ಅಕ್ರಮ ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಕೋರಿದ್ದೇನೆ. ಅದನ್ನೇ ಮತದಾರರ ಹೆಸರು ಅಳಿಸಲು ಸೂಚಿಸಿದ ಪತ್ರ ಎಂದು ಬಿಂಬಿಸುವುದು ಸರಿಯಲ್ಲ’ ಎಂದರು.
ಮತದಾರರ ಅರ್ಹತೆ ಪರಿಶೀಲಿಸುವುದು ಹಾಗೂ ಅರ್ಜಿಗಳ ಕುರಿತು ನಿರ್ಧಾರ ಕೈಗೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಹೊಣೆ ಎಂದು ಹೇಳಿದರು.
ಸಮುದಾಯ ಗುರಿಯಾಗಿಸಿದ ಆರೋಪಕ್ಕೆ ಆಕ್ಷೇಪ
ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಲಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪಾಟೀಲ ನಿರಾಕರಿಸಿದರು.

‘ನಮ್ಮವರು ಎಲ್ಲರ ಮನೆಗಳಿಗೂ ಭೇಟಿ ನೀಡಿದ್ದಾರೆ. ಒಂದು ವಿಳಾಸದಲ್ಲಿ ಹೆಚ್ಚಿನ ಮತದಾರರ ಹೆಸರುಗಳಿದ್ದು, ಭೇಟಿಯ ವೇಳೆ ಅಷ್ಟು ಜನರು ಕಂಡುಬರದಿದ್ದಾಗ ಪರಿಶೀಲನೆಗೆ ಕೋರಿದ್ದಾರೆ. ಇದಕ್ಕೆ ಸಮುದಾಯದ ಬಣ್ಣ ಹಚ್ಚಬಾರದು’ ಎಂದರು.
ಆಕ್ಷೇಪಣೆ ಅರ್ಜಿಗಳ ಸಲ್ಲಿಕೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಪ್ರಶ್ನೆಗೆ, ಅಧಿಕಾರಿಗಳು ನಿಯಮಕ್ಕೆ ಅನುಗುಣವಾಗಿ ಅರ್ಜಿಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಿದರು.
‘ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪರಿಶೀಲಿಸುವ ಬದಲು ಬಿಜೆಪಿ ಮೇಲೆ ಆರೋಪ ಹೊರಿಸಲಾಗುತ್ತಿದೆ. ಅರ್ಹ ಮತದಾರರ ಹೆಸರು ಉಳಿಯಬೇಕು. ಅಕ್ರಮ ನಮೂದುಗಳಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.




Comments