;
top of page

ಆ ದಿನ ಮಂಡೋಳಿ ರಸ್ತೆಯಲ್ಲಿ ನಡೆದಿದ್ದೇನು?

Writer: vilas joshi
vilas joshi
7 minutes ago
2 min read

ಆ ರಾತ್ರಿ ಭೇಟಿಗೆ ಕರೆ, ಐದು ದಿನದ ಬಳಿಕ ಮಲಪ್ರಭಾದಲ್ಲಿ ಶವ

ಸರ್ವೇಶ್‌ ಕಂಗ್ರಾಳಕರ ಕೊಲೆ ಪ್ರಕರಣ |

ಸಿಸಿಟಿವಿ ದೃಶ್ಯ ವಶಕ್ಕೆ ಪಡೆದಿಲ್ಲವೆಂದು ತಂದೆಯ ದೂರು


ಬೆಳಗಾವಿ:

ಸೆಪ್ಟೆಂಬರ್‌ 20ರ ರಾತ್ರಿ ಸುಮಾರು ಎಂಟು ಗಂಟೆ. ಹೊರಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದ ಸರ್ವೇಶ್‌ ಕಂಗ್ರಾಳಕರ, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಯುವತಿಗೆ ಕರೆ ಮಾಡಿ ಎಲ್ಲಿ ಭೇಟಿಯಾಗಬೇಕು ಎಂದು ಕೇಳಿದರು.


ತಿಲಕವಾಡಿ ಮೊದಲ ಗೇಟ್‌ ಸಮೀಪದ ಲೋಟಸ್‌ ಆಸ್ಪತ್ರೆ ಬಳಿ ಬರುವಂತೆ ಆಕೆ ತಿಳಿಸಿದ್ದಳು. ಆ ರಾತ್ರಿಯ ಘಟನಾವಳಿಯನ್ನು ಸರ್ವೇಶ್‌ ಅವರ ತಂದೆ ಅಭಿಜಿತ್‌ ಕಂಗ್ರಾಳಕರ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ಹೀಗೆ ವಿವರಿಸಿದ್ದಾರೆ.

ಆಸ್ಪತ್ರೆ ಬಳಿಯಿಂದ ಮಂಡೋಳಿ ರಸ್ತೆಗೆ

ಸರ್ವೇಶ್‌ ಬೈಕ್‌ನಲ್ಲಿ ಬಂದಾಗ ಯುವತಿ ಅದೇ ಬೈಕ್‌ ಏರಿದ್ದಳು. ಇಬ್ಬರೂ ಮಂಡೋಳಿ ರಸ್ತೆ ಕಡೆಗೆ ಸಾಗುತ್ತಿದ್ದಂತೆ ಕಾರೊಂದು ಅವರನ್ನು ಹಿಂಬಾಲಿಸಿತು.



ಮಂಡೋಳಿ ರಸ್ತೆಯಲ್ಲಿ ಕಾರಿನಲ್ಲಿದ್ದವರು ಬೈಕ್‌ ಅಡ್ಡಗಟ್ಟಿ ಸರ್ವೇಶ್‌ ಮೇಲೆ ಚಾಕುವಿನಿಂದ ದಾಳಿ ನಡೆಸಿದರು. ಬಳಿಕ ಮೃತದೇಹವನ್ನು ಕಾರಿನಲ್ಲಿ ಕೊಂಡೊಯ್ದು ಖಾನಾಪುರದ ಶಂಕರಪೇಟೆ ಸೇತುವೆಯಿಂದ ಮಲಪ್ರಭಾ ನದಿಗೆ ಎಸೆದರು ಎಂಬುದು ತಂದೆಯ ಆರೋಪ.

ಈ ಭೇಟಿಯನ್ನು ಮೊದಲೇ ರೂಪಿಸಿದ್ದ ಸಂಚಿನ ಭಾಗವೆಂದು ಅಭಿಜಿತ್‌ ದೂರಿದ್ದಾರೆ. 2025ರಲ್ಲಿ ಹಿರೇಬಾಗೇವಾಡಿ ಠಾಣೆ ವ್ಯಾಪ್ತಿಯಲ್ಲಿ ಜೂಜಾಟದ ವೇಳೆ ನಡೆದ ಗಲಾಟೆ ಮತ್ತು ಚಾಕು ಇರಿತ ಪ್ರಕರಣದ ವೈಷಮ್ಯವೇ ಮಗನ ಕೊಲೆಗೆ ಕಾರಣ ಎಂದು ಅವರು ಮನವಿಯಲ್ಲಿ ಆರೋಪಿಸಿದ್ದಾರೆ.


ಮರುದಿನ ಕಾಣೆ ದೂರು, ಸೆ. 25ಕ್ಕೆ ಕೊಲೆ ಪ್ರಕರಣ


ಮರುದಿನ ಮಧ್ಯಾಹ್ನ ಸರ್ವೇಶ್‌ ಅವರನ್ನು ಕೊಲೆ ಮಾಡಿ ನದಿಗೆ ಎಸೆದಿದ್ದಾರೆ ಎಂಬ ಮಾಹಿತಿ ಕುಟುಂಬಕ್ಕೆ ತಲುಪಿತು. ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದರು. ಅದೇ ದಿನ ಮಾಳಮಾರುತಿ ಠಾಣೆಯಲ್ಲಿ ಸರ್ವೇಶ್‌ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಯಿತು ಎಂದು ಮನವಿಯಲ್ಲಿ ಹೇಳಲಾಗಿದೆ.

ಸೆಪ್ಟೆಂಬರ್‌ 25ರಂದು ಖಾನಾಪುರ ತಾಲ್ಲೂಕಿನ ಮಲಪ್ರಭಾ ನದಿಯಲ್ಲಿ ಸರ್ವೇಶ್‌ ಅವರ ಮೃತದೇಹ ಪತ್ತೆಯಾಯಿತು. ಬಳಿಕ ಮಾಳಮಾರುತಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಯಿತು. ಕೃತ್ಯ ನಡೆದ ಸ್ಥಳದ ವ್ಯಾಪ್ತಿ ಆಧರಿಸಿ ಅಕ್ಟೋಬರ್‌ 19ರಂದು ಪ್ರಕರಣವನ್ನು ಬೆಳಗಾವಿ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಯಿತು.



ಕ್ಯಾಮೆರಾದಲ್ಲಿ ಏನಿದೆ? ತಂದೆ ಎತ್ತಿದ ಪ್ರಶ್ನೆ


ಮಂಡೋಳಿ ರಸ್ತೆ ಸಮೀಪದ ಮನೆಯೊಂದರ ಸಿಸಿಟಿವಿಯಲ್ಲಿ ಕಾರು ಸರ್ವೇಶ್‌ ಅವರನ್ನು ಹಿಂಬಾಲಿಸುವುದು, ಮೃತದೇಹವನ್ನು ಕಾರಿನಲ್ಲಿ ಕೊಂಡೊಯ್ಯುವುದು ಮತ್ತು ಸರ್ವೇಶ್‌ ಅವರ ಬೈಕ್‌ ಅನ್ನು ಮತ್ತೊಬ್ಬರು ತೆಗೆದುಕೊಂಡು ಹೋಗುವ ದೃಶ್ಯಗಳು ಸೆರೆಯಾಗಿವೆ ಎಂದು ಅಭಿಜಿತ್‌ ತಿಳಿಸಿದ್ದಾರೆ. ನವೆಂಬರ್‌ 3ರಂದು ಮನವಿ ಸಲ್ಲಿಸುವ ವೇಳೆಗೆ ಆ ದೃಶ್ಯಾವಳಿಯನ್ನು ಪೊಲೀಸರು ವಶಕ್ಕೆ ಪಡೆದಿರಲಿಲ್ಲ. ಕಾರು, ಬೈಕ್‌ ಹಾಗೂ ಮೊಬೈಲ್‌ಗಳ ಜಪ್ತಿ ಮತ್ತು ಕೆಲವರ ಬಂಧನವೂ ಬಾಕಿ ಇತ್ತು ಎಂದು ಅವರು ದೂರಿದ್ದಾರೆ.

ಅಕ್ರಮ ಜೂಜಾಟ ದಂಧೆಗೆ ಪೊಲೀಸ್‌ ಸಿಬ್ಬಂದಿಯೊಬ್ಬರು ಬೆಂಬಲ ನೀಡಿದ್ದು, ಕೊಲೆ ಆರೋಪಿಗಳಿಗೂ ನೆರವಾಗಿದ್ದಾರೆ ಎಂಬ ಆರೋಪವನ್ನೂ ಅಭಿಜಿತ್‌ ಮಾಡಿದ್ದಾರೆ. ಆ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕೊಲೆ ತನಿಖೆಯನ್ನು ಸಿಐಡಿಗೆ ಅಥವಾ ಹಿರಿಯ ಪೊಲೀಸ್‌ ಅಧಿಕಾರಿಗೆ ವಹಿಸಬೇಕು ಎಂದು ಕೋರಿದ್ದಾರೆ.

 
 
 

Comments


bottom of page