ಯುಜಿಡಿ ನೇಮಕಾತಿಗೆ ನಕಲಿ ದಾಖಲೆಗಳ ಶಂಕೆ
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಕೆ |
ಪಾಲಿಕೆ ಎಇಗಳ ಶಿಫಾರಸಿನ ಮೇಲೂ ಪ್ರಶ್ನೆ.
ನೇಮಕಾತಿ ಸಮಿತಿ ಕಾರ್ಯವೈಖರಿ ಬಗ್ಗೆ ಅನಿಮಾನ.
ಬೆಳಗಾವಿ:
ಮಹಾನಗರ ಪಾಲಿಕೆಯ ಒಳಚರಂಡಿ (ಯುಜಿಡಿ) ವಿಭಾಗದ ನೇಮಕಾತಿಗೆ ಲಗತ್ತಿಸಿದ ಭವಿಷ್ಯ ನಿಧಿ (ಪಿಎಫ್) ಮತ್ತು ನೌಕರರ ರಾಜ್ಯ ವಿಮೆ (ಇಎಸ್‌ಐ) ದಾಖಲೆಗಳಲ್ಲಿ ಕೆಲವು ನಕಲಿ ಎಂಬ ಆರೋಪ ಕೇಳಿಬಂದಿದೆ.
ಇಂಥ ದಾಖಲೆಗಳನ್ನೇ ಆಧರಿಸಿ ಪಾಲಿಕೆಯ ಸಹಾಯಕ ಎಂಜಿನಿಯರ್‌ಗಳು (ಎಇ) ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೇಮಕಾತಿಯಿಂದ ಅನ್ಯಾಯವಾಗಿದೆ ಎಂದು ದೂರಿರುವವರು ಲೋಕಾಯುಕ್ತರು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಕೆಲವರು ಅರ್ಜಿಯೊಂದಿಗೆ ಸಲ್ಲಿಸಿದ ಪಿಎಫ್, ಇಎಸ್‌ಐ ದಾಖಲೆಗಳ ಅಸಲಿತನವನ್ನು ಪರಿಶೀಲಿಸಬೇಕು ಎಂಬುದು ದೂರುದಾರರ ಆಗ್ರಹ. ಶಿಫಾರಸು ಮಾಡುವ ಮೊದಲು ಎಇಗಳು ಸಂಬಂಧಿತ ಇಲಾಖೆಗಳ ಮೂಲ ದಾಖಲೆಗಳೊಂದಿಗೆ ಇವುಗಳನ್ನು ತಾಳೆ ನೋಡಿದ್ದರೇ? ಪರಿಶೀಲನೆ ನಡೆಸಿದ್ದರೆ ಅದರ ವಿವರ ನೇಮಕಾತಿ ಕಡತದಲ್ಲಿದೆಯೇ ಎಂಬ ಪ್ರಶ್ನೆಗಳು ಈಗ ಮುನ್ನೆಲೆಗೆ ಬಂದಿವೆ.

ದಾಖಲೆಗಳ ಕುರಿತು ಆಕ್ಷೇಪಗಳಿರುವುದು ನೇಮಕಾತಿ ಸಮಿತಿಯ ಗಮನಕ್ಕೆ ಬಂದಿದ್ದರೂ ಸಮಿತಿ ಮೌನ ವಹಿಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಯಾವ ದಾಖಲೆಗಳನ್ನು ಯಾರು ಪರಿಶೀಲಿಸಿದರು, ಶಿಫಾರಸಿಗೆ ಏನು ಆಧಾರವಾಗಿತ್ತು ಮತ್ತು ಆಕ್ಷೇಪಗಳು ಬಂದ ಬಳಿಕ ಸಮಿತಿ ಏನು ಕ್ರಮ ಕೈಗೊಂಡಿತು ಎಂಬುದಕ್ಕೆ ಪಾಲಿಕೆಯಿಂದ ಸ್ಪಷ್ಟನೆ ಬೇಕಾಗಿದೆ.

ನಗರದ ಇಬ್ಬರೂ ಶಾಸಕರ ಗಮನಕ್ಕೂ ದೂರುಗಳು ಹೋಗಿದ್ದು, ಅವರು ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆ ಸೂಚನೆಯ ಬಳಿಕವೂ ಪಾಲಿಕೆಯಿಂದ ಕ್ರಮ ಕಂಡುಬಂದಿಲ್ಲ ಎಂಬುದು ದೂರುದಾರರ ಆಕ್ಷೇಪ. ತನಿಖೆಗೆ ಆದೇಶ ಹೊರಡಿಸಲಾಗಿದೆಯೇ ಎಂಬ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ದಾಖಲೆಗಳ ಅಸಲಿತನ ಮತ್ತು ಶಿಫಾರಸಿನ ಕುರಿತು ಪಾಲಿಕೆ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆಯೂ ತಿಳಿದುಬಂದಿಲ್ಲ.

ಪಾಲಿಕೆ ಉತ್ತರಿಸಬೇಕಿರುವ ಪ್ರಶ್ನೆಗಳು
ಪಿಎಫ್, ಇಎಸ್‌ಐ ದಾಖಲೆಗಳನ್ನು ಸಂಬಂಧಿತ ಇಲಾಖೆಗಳ ಮೂಲ ದಾಖಲೆಗಳೊಂದಿಗೆ ತಾಳೆ ನೋಡಲಾಗಿತ್ತೇ?
ಸಹಾಯಕ ಎಂಜಿನಿಯರ್‌ಗಳ ಶಿಫಾರಸಿಗೆ ಯಾವ ದಾಖಲೆಗಳು ಆಧಾರವಾಗಿದ್ದವು?
ಆಕ್ಷೇಪಗಳ ಬಗ್ಗೆ ನೇಮಕಾತಿ ಸಮಿತಿ ಸಭಾ ನಡಾವಳಿಯಲ್ಲಿ ಏನು ದಾಖಲಿಸಿದೆ?
ಶಾಸಕರ ಸೂಚನೆ ಬಳಿಕ ತನಿಖೆಗೆ ಆದೇಶಿಸಿದ್ದರೆ, ಅದರ ಹೊಣೆ ಯಾರಿಗೆ ನೀಡಲಾಗಿದೆ?




Comments