ಮನೆಮನೆಗೆ ನೀರು, ಜನರ ಮನವಿಗೆ ಸ್ಥಳದಲ್ಲೇ ಪರಿಹಾರ
ಹುಕ್ಕೇರಿ ಕೆಡಿಪಿ ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ |
ಜಲ ಜೀವನ ಮಿಷನ್ ಕಾಮಗಾರಿಗೆ ವೇಗ, ಮೂಲಸೌಕರ್ಯ ಕಾಮಗಾರಿಗೆ ಕಾಲಮಿತಿ.
ಹುಕ್ಕೇರಿ:
ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಮನೆಯ ನಳಕ್ಕೆ ನೀರು ತಲುಪಿಸುವ ಜಲ ಜೀವನ ಮಿಷನ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜನರು ಸಣ್ಣ ಕೆಲಸಕ್ಕೂ ಕಚೇರಿಗೆ ಪದೇಪದೆ ಅಲೆಯುವ ಸ್ಥಿತಿ ತಪ್ಪಿಸಬೇಕು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು.

ಹುಕ್ಕೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಎರಡನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಇಲಾಖಾವಾರು ವರದಿ ಪಡೆದು ಕಾಮಗಾರಿಗಳಿಗೆ ಎದುರಾಗಿರುವ ಅಡೆತಡೆಗಳು ಮತ್ತು ಅವುಗಳ ನಿವಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ
ಜಲ ಜೀವನ ಮಿಷನ್ ಕಾಮಗಾರಿಗಳ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಬಗೆಹರಿಸಬೇಕು. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಜನರಿಗೆ ನೀರಿನ ಅಭಾವ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಾಮಗಾರಿಯ ಗುಣಮಟ್ಟದ ಮೇಲೂ ನಿಗಾ ಇರಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಗ್ರಾಮೀಣ ಜನರಿಗೆ ಆರೋಗ್ಯ ಸೇವೆ, ಕುಡಿಯುವ ನೀರು ಮತ್ತು ಇತರ ಮೂಲಸೌಕರ್ಯಗಳು ಸಕಾಲಕ್ಕೆ ತಲುಪಬೇಕು. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಿಯಮಿತವಾಗಿ ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು.

ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಕೆಲಸ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ದೂರು ಮತ್ತು ಮನವಿಗಳನ್ನು ಗಂಭೀರವಾಗಿ ಪರಿಗಣಿಸಿ, ನಿಯಮಾನುಸಾರ ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲೇ ಪರಿಹರಿಸಬೇಕು ಎಂದು ಹೇಳಿದರು.

ಎರಡು ಕಚೇರಿಗೆ ಒಬ್ಬರೇ ಸಿಬ್ಬಂದಿ
ಯಮಕನಮರಡಿಯ ಕಂದಾಯ ಇಲಾಖೆ ಆವರಣದಲ್ಲಿರುವ ಆಧಾರ್ ಕೇಂದ್ರ ಮತ್ತು ನಾಡಕಚೇರಿ ಎರಡರ ಕೆಲಸವನ್ನೂ ಒಬ್ಬರೇ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಆಧಾರ್ ಸೇವೆಗಾಗಿ ಬರುವವರು ಒಂದೇ ಭೇಟಿಯಲ್ಲಿ ಕೆಲಸ ಮುಗಿಸಿಕೊಳ್ಳಲಾಗದೆ ಮತ್ತೆ ಕಚೇರಿಗೆ ಬರಬೇಕಾಗಿದೆ ಎಂದು ಸ್ಥಳೀಯ ಮುಖಂಡರು ಸಚಿವರ ಗಮನಕ್ಕೆ ತಂದರು. ಆಧಾರ್ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ಒದಗಿಸುವಂತೆ ಮನವಿ ಸಲ್ಲಿಸಿದರು. ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ನೇಮಕಾತಿ ಆದೇಶ ಪತ್ರ ವಿತರಣೆ
ಮೋದಗಾ ಗ್ರಾಮದ ಗ್ರಾಮ ಸಹಾಯಕಿಯಾಗಿ ಆಯ್ಕೆಯಾದ ಮಯೂರಿ ಬಾಗಡಿ ಹಾಗೂ ಕ್ಷೇತ್ರದ ವಿವಿಧ ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವರು ನೇಮಕಾತಿ ಆದೇಶ ಪತ್ರ ವಿತರಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ, ಅವಿನಾಶ್ ಹೊಳೆಪ್ಪಗೊಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ಮಾಹಿತಿ ನೀಡಿದರು. ಕಿರಣಸಿಂಗ್ ರಜಪೂತ, ದಯಾನಂದ ಪಾಟೀಲ, ಅಶೋಕ ತಳವಾರ, ವಿರೂಪಾಕ್ಷಿ ಚೌಗಲಾ ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.




Comments