ಯಾಕೆ ಹೆದರಬೇಕು? ಎತ್ತಿ ನಿಮ್ಮ ಹಳೇ ಧ್ವನಿನ!’
ಸಿದ್ದರಾಮಯ್ಯಗೆ ಕುಮಾರಸ್ವಾಮಿ ಆಗ್ರಹ; ‘ಶಿವಕುಮಾರ್ ಅವರೇ, ತನಿಖೆಗೆ ಕೊಡಿ, ಯಾರಿದ್ದಾರೆ ಹೊರಬರಲಿ’
‘ಸಿದ್ದರಾಮಯ್ಯನವರೇ, ಯಾಕೆ ಹೆದರಬೇಕು? ಏನು ಮಾಡಿದ್ದೀರಿ ಅಂತ ಹೆದರುತ್ತೀರಿ ನೀವು?
ನ್ಯಾಯಾಲಯಕ್ಕೆ ಹೋಗಿ ಸ್ಟೇ ತೆಗೆದುಕೊಂಡು ರಕ್ಷಣೆ ಪಡೆಯುವುದಲ್ಲ. ನಿಮ್ಮ ಹಳೇ ಧ್ವನಿ ಇತ್ತಲ್ಲ, ಎತ್ತಿ ಆ ಧ್ವನಿನ! ಇನ್ನೂ ಎಷ್ಟು ವರ್ಷ ಇದು ನಡೆಯಬೇಕು? ಇನ್ನೂ ಯಾರ್ಯಾರು ಬಲಿಯಾಗಬೇಕು?’
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಪ್ರಶ್ನೆಗಳನ್ನು ಮುಂದಿಟ್ಟರು. ಪೆನ್ಡ್ರೈವ್ ಹಂಚಿಕೆ, ಸ್ಟಿಂಗ್ ಆಪರೇಷನ್ ಹಾಗೂ ತಮ್ಮ ಕುಟುಂಬದ ವಿರುದ್ಧದ ಆರೋಪಗಳನ್ನು ಪ್ರಸ್ತಾಪಿಸುತ್ತಲೇ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
‘ಇವತ್ತು ಇದಕ್ಕೆ ಅಂತಿಮ ತೆರೆ ಎಳೆಯಲೇಬೇಕು. ಸರ್ಕಾರ ಸಿಬಿಐಗೆ ಕೊಡಬೇಕು. ಯಾರ್ಯಾರು ಇದ್ದಾರೆ, ಹೊರಗೆ ಬರಲಿ. ಸತ್ಯಾಂಶ ಹೊರಗೆ ಬರಬೇಕು. ಇನ್ನೂ ಎಷ್ಟು ವರ್ಷ ಈ ರಾಜ್ಯದಲ್ಲಿ ಯಾರ್ಯಾರ ಕುಟುಂಬಗಳನ್ನು ಹಾಳು ಮಾಡಬೇಕು ಅಂತ ಇದ್ದೀರಿ ನೀವು?’ ಎಂದು ಪ್ರಶ್ನಿಸಿದರು.

‘
ಒಬ್ಬನ್ನಾದರೂ ಟಚ್ ಮಾಡಿದ್ರಾ?’
ಪ್ರಜ್ವಲ್ ರೇವಣ್ಣ ಪ್ರಕರಣದ ಪೆನ್ಡ್ರೈವ್ ಹಂಚಿಕೆ ಕುರಿತು ಮಾತನಾಡಿದ ಅವರು, ‘ಚುನಾವಣೆ ಟೈಮಲ್ಲಿ ಬಿಡುಗಡೆ ಮಾಡಿದ್ರಲ್ಲ, ಯಾರು ಮಾಡಿಸಿದ್ದು ಅವತ್ತು? ಯಾವ ಫ್ಯಾಕ್ಟರಿಯಲ್ಲಿ ಮಾಡಿದ್ರಪ್ಪ? ಪೆನ್ಡ್ರೈವ್ಗಳನ್ನು ಮಾಡಿ ಊರೂರು ಹಂಚಿದ್ರಲ್ಲ. ಹಲವಾರು ಕುಟುಂಬದ ಹೆಣ್ಣುಮಕ್ಕಳ ಚಿತ್ರ ತೋರಿಸಿದ್ರಲ್ಲ. ಒಬ್ಬನನ್ನಾದರೂ ಅರೆಸ್ಟ್ ಮಾಡಿದ್ರಾ?’ ಎಂದು ಕಿಡಿಕಾರಿದರು.

‘
ಶಿವಕುಮಾರ್ ಅವರೇ, ನಿಮ್ಮ ಪೊಲೀಸ್ ಇಲಾಖೆ ಒಬ್ಬನನ್ನೂ ಟಚ್ ಮಾಡಲಿಲ್ಲ. ಅವರು ರಾಜಾರೋಷವಾಗಿ ತಿರುಗುತ್ತಾ ಇದ್ದಾರೆ. ಇದೆಲ್ಲ ಸಹಿಸಿಕೊಂಡು ಬಂದಿದ್ದೇವೆ. ನ್ಯಾಯಾಲಯ ಕೊಟ್ಟ ತೀರ್ಪಿಗೆ ತಲೆಬಾಗಿದ್ದೇವೆ’ ಎಂದರು.
ಸದಾಶಿವನಗರದ ಮನೆಯೊಂದರಲ್ಲಿ ಪೆನ್ಡ್ರೈವ್ಗಳನ್ನು ಸಿದ್ಧಪಡಿಸುವ ಚಟುವಟಿಕೆ ನಡೆದಿತ್ತು ಎಂದು ಆರೋಪಿಸಿದ ಅವರು, ಅದರ ಹಿಂದಿರುವವರನ್ನು ತನಿಖೆಗೆ ಒಳಪಡಿಸದಿರುವುದೇಕೆ ಎಂದು ಪ್ರಶ್ನಿಸಿದರು.

‘ನಿಮ್ಮ ಅಧಿಕಾರಿಗಳು ಏನು ಮಾಡ್ತಾ ಇದ್ದರು?’
ಬಿಡದಿಯ ರೈತರ ಹೋರಾಟ ಹಾಗೂ ನೈಸ್ ವಿಚಾರ ಮುನ್ನೆಲೆಗೆ ಬಂದ ಸಂದರ್ಭದಲ್ಲೇ ಪ್ರಜ್ವಲ್ಗೆ ಸಂಬಂಧಿಸಿದ ಜೈಲು ವಿಚಾರ ಹೊರತರಲಾಯಿತು ಎಂದು ಆರೋಪಿಸಿದರು.
‘ರೈತರ ಹೋರಾಟ ಪ್ರಾರಂಭ ಆದಾಗ ಈ ಜೈಲಿನಲ್ಲಿ ನಡೆಯುತ್ತಿದ್ದ ವಿಷಯ ಹೊರಗೆ ತಂದ್ರಿ. ನಿಮ್ಮ ಅಧಿಕಾರಿಗಳು ಏನು ಮಾಡ್ತಾ ಇದ್ದರು? ಆಗಲೇ ಯಾಕೆ ಬಂತು?’ ಎಂದು ಕೇಳಿದರು.
ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಸಂಬಂಧ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ, ‘ಶಿರಾವರೆಗೆ ಕರೆದೊಯ್ದರು, ಮತ್ತೆ ಯಾಕೆ ವಾಪಸ್ ತಂದ್ರಿ? ಕರೆದೊಯ್ಯಬೇಕು ಅಂತ ಹೇಳಿದವರು ಯಾರು? ವಾಪಸ್ ಕರೆದುಕೊಂಡು ಬನ್ನಿ ಅಂತ ಹೇಳಿದವರು ಯಾರು? ಪ್ರಭಾವಿ ರಾಜಕೀಯ ವ್ಯಕ್ತಿಯ ದೂರವಾಣಿ ಕರೆ ಬಂತು ಅಂತ ಮಾಧ್ಯಮಗಳಲ್ಲಿ ಬರ್ತಾ ಇದೆಯಲ್ಲ’ ಎಂದರು.

‘ಸರ್ಕಾರ ತೆಗೆಯಿರಿ ಅಂತ ಹೇಳ್ತಾ ಇಲ್ಲ’
‘ಸಿದ್ದರಾಮಯ್ಯನವರೇ, ನೀವು ನನ್ನನ್ನು ಬೈದಿದ್ದೀರಿ. ನಾನು ನಿಮ್ಮನ್ನು ಬೈದಿದ್ದೇನೆ. ಇಲ್ಲಿ ನಿಮ್ಮ ಪರ ವಹಿಸಿಕೊಳ್ಳುವುದಕ್ಕೆ ಹೇಳುತ್ತಿಲ್ಲ. ಅನುಕಂಪದಿಂದಲೂ ಹೇಳುತ್ತಿಲ್ಲ. ನಮ್ಮ ಕುಟುಂಬ ಏನು ಅನುಭವಿಸಿದೆ, ಆ ನೋವು ನನಗೆ ಗೊತ್ತು. ನಿಮ್ಮ ನೋವು ಏನು ಅನ್ನೋದನ್ನೂ ಅರ್ಥ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.
‘ಸರ್ಕಾರ ತೆಗೆಯಿರಿ ಅಂತ ಅಲ್ಲ. ಕಾಂಗ್ರೆಸ್ ಸರ್ಕಾರ ಡಿಸ್ಟರ್ಬ್ ಮಾಡಿ ಅಂತ ಹೇಳುತ್ತಿಲ್ಲ. ಈ ಸ್ಟಿಂಗ್ ಆಪರೇಷನ್ಗಳಿಗೆ ರಾಜ್ಯದಲ್ಲಿ ಫುಲ್ಸ್ಟಾಪ್ ಆಗಬೇಕು. ನಿಮ್ಮ ಹಳೇ ಧ್ವನಿ ಈಗ ಬರಬೇಕು. ಇದನ್ನು ನಿಲ್ಲಿಸಲು ಏನು ದೃಢ ನಿರ್ಧಾರ ತೆಗೆದುಕೊಂಡಿರಿ ಎನ್ನುವುದು ಇತಿಹಾಸ ಆಗಬೇಕು’ ಎಂದರು.
ಕೇಂದ್ರ ಗೃಹ ಸಚಿವರನ್ನು ಭೇಟಿಯಾಗುವುದಾಗಿ ತಿಳಿಸಿದ ಕುಮಾರಸ್ವಾಮಿ, ‘ದುಡ್ಡಲ್ಲಿ ಎಲ್ಲರನ್ನೂ ಕೊಂಡುಕೊಳ್ಳಲು ಆಗಲ್ಲ ಸದಾಕಾಲ. ಏನು ಬೇಕಾದರೂ ದುಡ್ಡಲ್ಲಿ ಜಯಿಸುತ್ತೇನೆ ಅಂತ ತಿಳಿದುಕೊಂಡಿರಬಹುದು. ಸಾಧ್ಯ ಆಗೋದಿಲ್ಲ ಅದು. ಶಿವಕುಮಾರ್ ಅವರೇ, ಕೊಡಿ ತನಿಖೆಗೆ ನೋಡೋಣ. ಯಾರ್ಯಾರು ಇದ್ದಾರೆ, ಹೊರಗೆ ಬರಲಿ’ ಎಂದು ಸವಾಲು ಹಾಕಿದರು.




Comments