ಕೆಎಲ್ಇ ಉಪಕಾರ್ಯಾಧ್ಯಕ್ಷರಾಗಿ ಜಯಾನಂದ ಮುನವಳ್ಳಿ ಆಯ್ಕೆ
ಎರಡು ದಶಕಕ್ಕೂ ಹೆಚ್ಚು ಕಾಲ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ |
ಗೋಕಾಕದಲ್ಲಿ ಶಿಕ್ಷಣ, ಆರೋಗ್ಯ ಸೌಲಭ್ಯ ವಿಸ್ತರಣೆಗೆ ಕೊಡುಗೆ
ಬೆಳಗಾವಿ, ನವೆಂಬರ್ 27 —
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸದಸ್ಯರಾಗಿ ಸೇವೆ ಸಲ್ಲಿಸಿರುವ ಜಯಾನಂದ (ರಾಜು) ಮಹಾದೇವಪ್ಪ ಮುನವಳ್ಳಿ ಅವರು ಸಂಸ್ಥೆಯ ಉಪಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಉಪಕಾರ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಚುನಾವಣಾಧಿಕಾರಿಯೂ ಆಗಿದ್ದ ಸಂಸ್ಥೆಯ ಕಾರ್ಯದರ್ಶಿ ಡಾ. ಸುನೀಲ ಎಸ್. ಜಲಾಲಪೂರೆ ಅವರು ಚುನಾವಣಾ ಪ್ರಕ್ರಿಯೆ ನಡೆಸಿ ಫಲಿತಾಂಶ ಪ್ರಕಟಿಸಿದರು.
ತಂದೆಯ ಹಾದಿಯಲ್ಲಿ
ಗೋಕಾಕದ ಅರಳೆ ವ್ಯಾಪಾರಿಯಾಗಿದ್ದ ದಿವಂಗತ ಮಹಾದೇವಪ್ಪ ಮುನವಳ್ಳಿ ಅವರು 1981ರಿಂದ 1984ರವರೆಗೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದರು.

ಅವರ ಪುತ್ರ ಜಯಾನಂದ ಮುನವಳ್ಳಿ ಅವರು ಆಡಳಿತ ಮಂಡಳಿ ಸದಸ್ಯರಾಗಿ ಗೋಕಾಕದಲ್ಲಿ ಸಂಸ್ಥೆಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆಗೆ ಶ್ರಮಿಸಿದ್ದಾರೆ.

ಗೋಕಾಕದಲ್ಲಿ ಕೆಎಲ್ಇ ಆಸ್ಪತ್ರೆ ಮತ್ತು ತೀವ್ರ ನಿಗಾ ಘಟಕ, ಆಂಗ್ಲ ಮಾಧ್ಯಮ ಶಾಲೆ, ಸಿ.ಎಸ್. ಅಂಗಡಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಸ್ಥಾಪನೆಯಲ್ಲಿ ಅವರು ಪಾತ್ರ ವಹಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಆಧುನೀಕರಣ ಮತ್ತು ಶೈಕ್ಷಣಿಕ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಸಭೆಯಲ್ಲಿ ಕೆಎಲ್ಇ ಕಾರ್ಯಾಧ್ಯಕ್ಷ ಅಮಿತ ಪ್ರಭಾಕರ ಕೋರೆ, ಕಾಹೆರ್ ಕುಲಾಧಿಪತಿ ಡಾ. ಪ್ರಭಾಕರ ಕೋರೆ, ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹಾಗೂ ನಿರ್ದೇಶಕರಾದ ಮಲ್ಲಿಕಾರ್ಜುನ ಸಿ. ಕೊಳ್ಳಿ, ಯಲ್ಲನಗೌಡ ಎಸ್. ಪಾಟೀಲ, ಮಹಾಂತೇಶ ಎಂ. ಕವಟಗಿಮಠ, ಅನಲ ವಿ. ಪಟ್ಟೇದ, ಬಸವರಾಜ ಆರ್. ಪಾಟೀಲ, ಡಾ. ವಿಶ್ವನಾಥ ಪಾಟೀಲ, ಪ್ರವೀಣ ಬಾಗೇವಾಡಿ, ಡಾ. ಪ್ರೀತಿ ದೊಡ್ಡವಾಡ, ವಿಜಯ ಎಸ್. ಮೆಟಗುಡ ಮತ್ತು ಮಂಜುನಾಥ ಎಸ್. ಮುನವಳ್ಳಿ ಉಪಸ್ಥಿತರಿದ್ದರು.




Comments