ನಮ್ಮನ್ನು ಇದ್ದಂತೆಯೇ ಸ್ವೀಕರಿಸಿ..!
ಬೆಳಗಾವಿಯಲ್ಲಿ ಐದನೇ ವರ್ಷದ ಪ್ರೈಡ್ ಮಾರ್ಚ್.
ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ಆರಂಭ • ಸಮಾನ ಗೌರವ, ಶಿಕ್ಷಣ, ಉದ್ಯೋಗ ಮತ್ತು ವಸತಿಗಾಗಿ ಲಿಂಗತ್ವ ಅಲ್ಪಸಂಖ್ಯಾತರ ಆಗ್ರಹ
ಬೆಳಗಾವಿ │
ಬಣ್ಣಬಣ್ಣದ ಉಡುಗೆಗಳಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕಿದ ಲಿಂಗತ್ವ ಅಲ್ಪಸಂಖ್ಯಾತರು, ಬದುಕಿನ ಮೂಲ ಅವಕಾಶಗಳ ಕುರಿತು ಸ್ಪಷ್ಟ ಬೇಡಿಕೆ ಮುಂದಿಟ್ಟರು. ನಮ್ಮ ಗುರುತನ್ನು ಗೌರವಿಸಿ, ಎಲ್ಲರಂತೆ ನಮಗೂ ಶಿಕ್ಷಣ, ಉದ್ಯೋಗ ಮತ್ತು ವಸತಿ ಪಡೆಯುವ ಅವಕಾಶ ಕಲ್ಪಿಸಿ ಎಂಬುದು ಬೆಳಗಾವಿಯ ಐದನೇ ವರ್ಷದ ಪ್ರೈಡ್ ಮಾರ್ಚ್ನ ಸಂದೇಶವಾಗಿತ್ತು.

ಹ್ಯುಮಾನಿಟಿ ಫೌಂಡೇಶನ್ ಸತತ ಐದನೇ ವರ್ಷ ಆಯೋಜಿಸಿದ್ದ ಮೆರವಣಿಗೆ ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ತೃತೀಯಲಿಂಗಿಗಳು, ಹಿಜ್ರಾ ಮತ್ತು ಜೋಗಪ್ಪ ಸಮುದಾಯಗಳ ಸದಸ್ಯರು ಸೇರಿದಂತೆ ಲಿಂಗತ್ವದ ವೈವಿಧ್ಯವನ್ನು ಪ್ರತಿನಿಧಿಸುವ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡರು. ತಮಗಿಷ್ಟದ ಉಡುಗೆ ತೊಟ್ಟು ಹೆಜ್ಜೆ ಹಾಕಿದ ಅವರು ಸಮಾನತೆ ಮತ್ತು ಸ್ವೀಕಾರದ ಸಂದೇಶ ಸಾರಿದರು.

ಶಿಕ್ಷಣದಿಂದ ಉದ್ಯೋಗದವರೆಗೆ ಸಮಾನ ಅವಕಾಶಕ್ಕೆ ಒತ್ತು
ಮಹಿಳೆಯನ್ನು ಮಹಿಳೆಯಾಗಿ, ಪುರುಷನನ್ನು ಪುರುಷನಾಗಿ ಸ್ವೀಕರಿಸುವ ಸಮಾಜ, ನಮ್ಮನ್ನು ಇದ್ದಂತೆಯೇ ಏಕೆ ಒಪ್ಪಿಕೊಳ್ಳುವುದಿಲ್ಲ ಎಂಬ ಪ್ರಶ್ನೆಯನ್ನು ಮೆರವಣಿಗೆಯಲ್ಲಿ ಪಾಲ್ಗೊಂಡವರು ಮುಂದಿಟ್ಟರು. ತಮ್ಮ ಅಸ್ಮಿತೆಯನ್ನು ಗೌರವಿಸಬೇಕು, ಸಾಮಾಜಿಕ ಬದುಕಿನಲ್ಲಿ ಸಮಾನವಾಗಿ ಪಾಲ್ಗೊಳ್ಳಲು ಅವಕಾಶ ಸಿಗಬೇಕು ಎಂದು ಆಗ್ರಹಿಸಿದರು. ಶಿಕ್ಷಣದ ಜತೆಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳಬೇಕು ಮತ್ತು ಪ್ರತಿಯೊಬ್ಬರಿಗೂ ಗೌರವದಿಂದ ಬದುಕಲು ಸೂರು ಸಿಗಬೇಕು ಎಂಬುದು ಅವರ ಒತ್ತಾಯವಾಗಿತ್ತು.

ರಂಗಮಂದಿರದಲ್ಲಿ ಪ್ರತಿಭಾ ಪ್ರದರ್ಶನ
ಮೆರವಣಿಗೆಯ ಬಳಿಕ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಫ್ಯಾಷನ್ ಶೋ, ನೃತ್ಯ, ಮೆಹಂದಿ ಮತ್ತು ರಂಗೋಲಿ ಸ್ಪರ್ಧೆಗಳು ನಡೆದವು. ಸಮುದಾಯದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹ್ಯುಮಾನಿಟಿ ಫೌಂಡೇಶನ್ಗೆ ಸಹಕಾರ ನೀಡುತ್ತಿರುವ ಬೆಳಗಾವಿ ಫೇಸ್ಬುಕ್ ಫ್ರೆಂಡ್ ಸರ್ಕಲ್ನ ಸಂತೋಷ್ ದರೆಕ್ರರ, ಅವಧೂತ್ ತುಡೇಕರ್, ಚಲನಚಿತ್ರ ನಿರ್ಮಾಪಕ ಗಣಪತಿ ಪಾಟೀಲ್ ಹಾಗೂ ನಟ ಎಲ್ಲಪ್ಪ ಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಫೌಂಡೇಶನ್ ಅಧ್ಯಕ್ಷ ಸಂಪತ್ ದೊಡ್ಮನಿ, ಸಂಸ್ಥಾಪಕ ಕಾರ್ಯದರ್ಶಿ ತಾನಾಜಿ ಭೋಸ್ಲೆ, ಪದಾಧಿಕಾರಿಗಳು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.




Comments