;
top of page

ಐದು ದಶಕದ ನಂಬಿಕೆ; ಹೊಸ ಎತ್ತರದತ್ತ ‘ದೇಶಪಾಂಡೆ ಇಂಡಸ್ಟ್ರಿಗಳು

  • Writer: vilas joshi
    vilas joshi
  • 2 days ago
  • 2 min read


ಮಿಕ್ಸರ್ ತಯಾರಿಕೆಯಿಂದ ಜನರೇಟರ್ ಕ್ಷೇತ್ರದವರೆಗೆ ಪಯಣ |


ಮೂರು ರಾಜ್ಯಗಳಲ್ಲಿ ವಿಸ್ತಾರ | 20 ಸಾವಿರಕ್ಕೂ ಅಧಿಕ ಗ್ರಾಹಕರ ಬಲ


ಬೆಳಗಾವಿ:

ಸಣ್ಣ ಕೈಗಾರಿಕಾ ಪ್ರಯತ್ನವಾಗಿ ಆರಂಭವಾದ ಉದ್ಯಮವೊಂದು ಐದು ದಶಕಗಳಲ್ಲಿ ಮೂರು ರಾಜ್ಯಗಳಿಗೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ, 20 ಸಾವಿರಕ್ಕೂ ಅಧಿಕ ಗ್ರಾಹಕರನ್ನು ತಲುಪಿದೆ. ಬೆಳಗಾವಿಯ ದೇಶಪಾಂಡೆ ಇಂಡಸ್ಟ್ರಿಗಳು ಡೀಸೆಲ್ ಜನರೇಟರ್ ಸೆಟ್‌, ಎಂಜಿನಿಯರಿಂಗ್ ಸೇವೆ ಮತ್ತು ವಿದ್ಯುತ್ ಪರಿಹಾರಗಳ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವದ ಮೈಲಿಗಲ್ಲು ತಲುಪಿದೆ.


ದಿವಂಗತ ದೇವರಾಜ್ ದೇಶಪಾಂಡೆ ಮತ್ತು ಕುಸುಮಾ ದೇಶಪಾಂಡೆ ಅವರು ಮಿಕ್ಸರ್ ತಯಾರಿಕೆಯೊಂದಿಗೆ ಆರಂಭಿಸಿದ ಉದ್ಯಮ, ಕಾಲಕ್ರಮೇಣ ಎಂಜಿನಿಯರಿಂಗ್ ಕ್ಷೇತ್ರಕ್ಕೆ ವಿಸ್ತಾರವಾಯಿತು.


1987ರಲ್ಲಿ ಭರತ್ ದೇಶಪಾಂಡೆ ಜನರೇಟರ್ ಸೆಟ್‌ಗಳ ಜೋಡಣೆ ಕಾರ್ಯ ಆರಂಭಿಸಿದ್ದು ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ತಿರುವಾಯಿತು. ನಂತರ ಕಿರ್ಲೋಸ್ಕರ್ ಆಯಿಲ್ ಎಂಜಿನ್ಸ್ ಮತ್ತು ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ ಒರಿಜಿನಲ್ ಎಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರರ್ (OEM) ಆಗಿ ಉತ್ಪಾದನೆ, ಮಾರಾಟ ಹಾಗೂ ಸೇವಾ ಕ್ಷೇತ್ರಗಳಲ್ಲಿ ಸಂಸ್ಥೆ ತನ್ನ ನೆಲೆ ಬಲಪಡಿಸಿತು. ಈ ಬೆಳವಣಿಗೆಯಲ್ಲಿ ಮೇಧಾ ದೇಶಪಾಂಡೆ ಅವರ ಕೊಡುಗೆಯೂ ಪ್ರಮುಖವಾಗಿದೆ.

ಬೆಳಗಾವಿಯನ್ನು ಕೇಂದ್ರವಾಗಿಸಿಕೊಂಡ ಸಂಸ್ಥೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ವಿವಿಧ ಮಾರುಕಟ್ಟೆಗಳಿಗೆ ವಿಸ್ತರಿಸಿದೆ. ಬೆಂಗಳೂರಿನಂತಹ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿಯೂ ಗ್ರಾಹಕ ನೆಲೆ ನಿರ್ಮಿಸಿಕೊಂಡಿದೆ.

2009ರಲ್ಲಿ ಮಹೀಂದ್ರಾ ಡೀಲರ್‌ಶಿಪ್ ಪಡೆದುಕೊಂಡ ಸಂಸ್ಥೆ, 2021ರಲ್ಲಿ ಗ್ರೀವ್ಸ್ ಕಾಟನ್ ಲಿಮಿಟೆಡ್‌ನ ಅಧಿಕೃತ ಡೀಲರ್‌ಶಿಪ್ ಪಡೆಯುವ ಮೂಲಕ ಡೀಸೆಲ್ ಜನರೇಟರ್ ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಪೂರೈಕೆಯನ್ನೂ ವಿಸ್ತರಿಸಿತು.


ಮೂರನೇ ತಲೆಮಾರಿನ ಹೆಜ್ಜೆ

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಪದವಿ ಹಾಗೂ ಎಂಬೆಡೆಡ್ ಸಿಸ್ಟಮ್ ಡಿಸೈನಿಂಗ್‌ನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದ ಶ್ರಿಯಾ ದೇಶಪಾಂಡೆ 2010ರಲ್ಲಿ ಉದ್ಯಮಕ್ಕೆ ಸೇರ್ಪಡೆಯಾದರು. ಮಾರ್ಕೆಟಿಂಗ್, ಕಾರ್ಯತಂತ್ರ ಮತ್ತು ವ್ಯವಹಾರ ವಿಸ್ತರಣೆಗೆ ಒತ್ತು ನೀಡಿದ ಬಳಿಕ ಸಂಸ್ಥೆ ಹೊಸ ಮಾರುಕಟ್ಟೆ ಹಾಗೂ ಸೇವಾ ಕ್ಷೇತ್ರಗಳನ್ನು ತಲುಪಿತು.

ವ್ಯವಹಾರ ವೈವಿಧ್ಯೀಕರಣದ ಭಾಗವಾಗಿ ಉದ್ಯಮಬಾಗ್‌ನಲ್ಲಿ ‘ಶ್ರಿಯಾ ದೇಶಪಾಂಡೆ ಸೆಲೆಬ್ರೇಷನ್ ಕನ್ವೆನ್ಷನ್ ಹಾಲ್ ಅಂಡ್ ಲಾನ್’ ಆರಂಭಿಸಲಾಗಿದೆ. ಜತೆಗೆ ಸಂಸ್ಥೆಯ ಹೊಸ ಅತ್ಯಾಧುನಿಕ ಕಚೇರಿ ಮತ್ತು ಕಾರ್ಖಾನೆ ಕಟ್ಟಡವೂ ಉದ್ಯಮಬಾಗ್‌ನಲ್ಲಿ ನಿರ್ಮಾಣಗೊಂಡಿದೆ


.Deshpande Industries marks 50 years of engineering growth


ಸೇವೆಯೇ ಪ್ರಮುಖ ಬಲ

ದೇಶಪಾಂಡೆ ಇಂಡಸ್ಟ್ರಿಗಳಲ್ಲಿ ಸುಮಾರು 40 ಸಿಬ್ಬಂದಿ ಮತ್ತು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ 20 ನುರಿತ ತಾಂತ್ರಿಕ ಸಿಬ್ಬಂದಿಯನ್ನು ಜನರೇಟರ್‌ಗಳ ನಿರ್ವಹಣೆ ಮತ್ತು ಮಾರಾಟ ನಂತರದ ಸೇವೆಗೆ ಮೀಸಲಿಡಲಾಗಿದೆ. ವಿವಿಧ ಬ್ರ್ಯಾಂಡ್‌ಗಳ ಡೀಸೆಲ್ ಜನರೇಟರ್‌ಗಳಿಗೆ ಸೇವೆ ಒದಗಿಸುವ ವ್ಯವಸ್ಥೆ ಸಂಸ್ಥೆಯ ಪ್ರಮುಖ ಬಲವಾಗಿದೆ.

ಹಲವು ಉದ್ಯೋಗಿಗಳು 30 ವರ್ಷಕ್ಕೂ ಹೆಚ್ಚು ಕಾಲ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಸಂಸ್ಥೆಯ ಸ್ಥಿರತೆಗೆ ಮತ್ತೊಂದು ಸಾಕ್ಷಿಯಾಗಿದೆ.

ಐದು ದಶಕಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ಸರ್ಕಾರಿ ಇಲಾಖೆ, ಖಾಸಗಿ ಕೈಗಾರಿಕೆ ಮತ್ತು ಚಿಲ್ಲರೆ ವಲಯ ಸೇರಿದಂತೆ 20 ಸಾವಿರಕ್ಕೂ ಅಧಿಕ ಗ್ರಾಹಕರ ನೆಲೆ ನಿರ್ಮಿಸಿಕೊಂಡಿರುವುದಾಗಿ ಸಂಸ್ಥೆ ತಿಳಿಸಿದೆ.

ಗುಣಮಟ್ಟ, ಪಾರದರ್ಶಕತೆ ಮತ್ತು ಮಾರಾಟದ ನಂತರದ ಸೇವೆಯನ್ನು ವ್ಯವಹಾರದ ಮೂಲತತ್ವವಾಗಿಸಿಕೊಂಡ ದೇಶಪಾಂಡೆ ಇಂಡಸ್ಟ್ರಿಗಳು, ಸುವರ್ಣ ಮಹೋತ್ಸವದ ಬಳಿಕ ಹೊಸ ತಲೆಮಾರಿನ ನೇತೃತ್ವದಲ್ಲಿ ಮತ್ತಷ್ಟು ವಿಸ್ತರಣೆಯತ್ತ ಹೆಜ್ಜೆ ಇಡುತ್ತಿದೆ.

























 
 
 

Comments


bottom of page