ಬರದ ಬೇಗುದಿ ಕಾಣದ ಸರ್ಕಾರದ ಕಣ್ಣು!
- vilas joshi
- 19 hours ago
- 2 min read
ಬರದ ಬೇಗುದಿ ಕಾಣದ ಸರ್ಕಾರದ ಕಣ್ಣು!
101 ತಾಲ್ಲೂಕುಗಳ ಪಟ್ಟಿಯಲ್ಲಿ ಬೆಳಗಾವಿಗೆ ಶೂನ್ಯ;
ಹೊಲಕ್ಕಿಳಿದ ಜನಪ್ರತಿನಿಧಿಗಳ ವರದಿಗೂ ಸಿಗದ ಮನ್ನಣೆ.
ಸವದತ್ತಿ–ರಾಮದುರ್ಗದಲ್ಲಿ ಬೆಳೆ ಹಾನಿ ಪರಿಶೀಲಿಸಿದ್ದ ಸಚಿವರ ತಂಡ; ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ
ಬೆಳಗಾವಿ:
ಮಳೆ ಕೈಕೊಟ್ಟು ಬೆಳೆ ಬಾಡಿದೆ. ಸವದತ್ತಿ, ರಾಮದುರ್ಗ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ಬೆಳೆ ಹಾನಿಯ ಗೋಳು ತೋಡಿಕೊಂಡಿದ್ದಾರೆ. ಬಿಜೆಪಿ ನಿಯೋಗ ಹೊಲಗಳಿಗೆ ಭೇಟಿ ನೀಡಿ ಪ್ರತಿಭಟನೆಯನ್ನೂ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ತಂಡವೂ ಹಾನಿಯನ್ನು ಕಣ್ಣಾರೆ ಕಂಡಿದೆ. ಇಷ್ಟೆಲ್ಲ ನಡೆದರೂ ರಾಜ್ಯ ಸರ್ಕಾರದ ‘ಬರಪೀಡಿತ ನಕ್ಷೆ’ಯಲ್ಲಿ ಬೆಳಗಾವಿ ಜಿಲ್ಲೆಗೆ ಒಂದಿಂಚೂ ಜಾಗ ಸಿಕ್ಕಿಲ್ಲ!

ಕಂದಾಯ ಇಲಾಖೆ ಗುರುವಾರ ಹೊರಡಿಸಿರುವ ಆದೇಶದಲ್ಲಿ 2026ರ ಮುಂಗಾರು ಹಂಗಾಮಿಗೆ ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.

ಇವುಗಳಲ್ಲಿ 89 ತಾಲ್ಲೂಕುಗಳು ‘ತೀವ್ರ ಬರಪೀಡಿತ’ ಹಾಗೂ 12 ತಾಲ್ಲೂಕುಗಳು ‘ಮಧ್ಯಮ ಬರಪೀಡಿತ’ ಎಂದು ವರ್ಗೀಕರಿಸಲ್ಪಟ್ಟಿವೆ. ಆದರೆ, ಕೃಷಿ ಪ್ರಧಾನವಾಗಿರುವ ಬೆಳಗಾವಿ ಜಿಲ್ಲೆಯ ಒಂದೇ ಒಂದು ತಾಲ್ಲೂಕನ್ನೂ ಪಟ್ಟಿಗೆ ಸೇರಿಸಿಲ್ಲ.
ಆಗಸ್ಟ್ 27ರಿಂದ ಜಾರಿಗೆ ಬಂದಿರುವ ಈ ಘೋಷಣೆ ಆರು ತಿಂಗಳವರೆಗೆ ಚಾಲ್ತಿಯಲ್ಲಿರಲಿದೆ. ಬರಪೀಡಿತವೆಂದು ಘೋಷಿಸಲಾದ ತಾಲ್ಲೂಕುಗಳಲ್ಲಷ್ಟೇ ಎಸ್‌ಡಿಆರ್‌ಎಫ್ ನಿಯಮಗಳಡಿ ಪರಿಹಾರ ಮತ್ತು ಬರ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹೀಗಾಗಿ ಪಟ್ಟಿಯಿಂದ ಹೊರಗುಳಿದ ಬೆಳಗಾವಿಯ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಗುವುದೇ ಎಂಬ ಪ್ರಶ್ನೆ ಈಗ ಎದುರಾಗಿದೆ.

31ರಷ್ಟು ಮಳೆ ಕೊರತೆ
ಸರ್ಕಾರದ ಆದೇಶದಲ್ಲೇ ರಾಜ್ಯದ ಮಳೆಯ ಗಂಭೀರ ಚಿತ್ರಣ ತೆರೆದಿಡಲಾಗಿದೆ. ಆಗಸ್ಟ್ 21ರವರೆಗೆ ರಾಜ್ಯದಲ್ಲಿ ವಾಡಿಕೆಯ 635 ಮಿ.ಮೀ. ಮಳೆಯ ಬದಲು 437 ಮಿ.ಮೀ. ಮಾತ್ರ ಸುರಿದಿದ್ದು, ಶೇ 31ರಷ್ಟು ಕೊರತೆಯಾಗಿದೆ. ಜೂನ್‌ನಲ್ಲಿ ಶೇ 42 ಹಾಗೂ ಜುಲೈನಲ್ಲಿ ಶೇ 29ರಷ್ಟು ಮಳೆ ಕೊರತೆ ದಾಖಲಾಗಿದೆ. ಕಳೆದ 50 ವರ್ಷಗಳಲ್ಲೇ 2026ರ ಜೂನ್ ತಿಂಗಳು ನಾಲ್ಕನೇ ಅತಿ ಕಡಿಮೆ ಮಳೆ ಪಡೆದ ತಿಂಗಳಾಗಿದೆ.
ಜೂನ್ 1ರಿಂದ ಆಗಸ್ಟ್ 12ರವರೆಗಿನ 73 ದಿನಗಳಲ್ಲಿ 43 ದಿನ ಮಳೆ ಕೊರತೆ ಅಥವಾ ತೀವ್ರ ಕೊರತೆ ಕಂಡುಬಂದಿದೆ. ರಾಜ್ಯದ 29 ಜಿಲ್ಲೆಗಳು ಮಳೆ ಕೊರತೆಯ ವರ್ಗದಲ್ಲಿವೆ. ತಾಲ್ಲೂಕು ಮಟ್ಟದಲ್ಲಿ 176 ತಾಲ್ಲೂಕುಗಳು ‘ಕೊರತೆ’ ಮತ್ತು 15 ತಾಲ್ಲೂಕುಗಳು ‘ತೀವ್ರ ಕೊರತೆ’ ವಿಭಾಗದಲ್ಲಿವೆ ಎಂದು ಆದೇಶವೇ ಹೇಳುತ್ತದೆ. ಆದರೂ ಬೆಳಗಾವಿಯ ಯಾವ ತಾಲ್ಲೂಕೂ ಅಂತಿಮ ಬರಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಕದ ಜಿಲ್ಲೆಗಳಿಗೆ ಬರದ ಮುದ್ರೆ
ಬೆಳಗಾವಿಗೆ ಹೊಂದಿಕೊಂಡಿರುವ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಬೀಳಗಿ, ಜಮಖಂಡಿ, ಗುಳೇದಗುಡ್ಡ ಮತ್ತು ಇಳಕಲ್ ತಾಲ್ಲೂಕುಗಳನ್ನು ತೀವ್ರ ಬರಪೀಡಿತವೆಂದು ಘೋಷಿಸಲಾಗಿದೆ. ವಿಜಯಪುರ ಜಿಲ್ಲೆಯ ವಿಜಯಪುರ, ನಿಡಗುಂದಿ ಮತ್ತು ಕೊಲ್ಹಾರ ತಾಲ್ಲೂಕುಗಳಿಗೂ ತೀವ್ರ ಬರದ ಮುದ್ರೆ ಬಿದ್ದಿದೆ. ಉತ್ತರ ಕರ್ನಾಟಕದ ಬೀದರ್, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಯ ಹಲವು ತಾಲ್ಲೂಕುಗಳು ಪಟ್ಟಿಯಲ್ಲಿವೆ. ಆದರೆ, ಈ ಭೌಗೋಳಿಕ ಸರಪಳಿಯ ಮಧ್ಯದಲ್ಲಿರುವ ಬೆಳಗಾವಿ ಸಂಪೂರ್ಣವಾಗಿ ಹೊರಗುಳಿದಿದೆ.
ಭೇಟಿ, ಮನವಿ ಎಲ್ಲವೂ ವ್ಯರ್ಥವೇ?
ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಬಿಜೆಪಿ ನಿಯೋಗ ಕೆಲ ತಾಲ್ಲೂಕುಗಳಿಗೆ ಭೇಟಿ ನೀಡಿತ್ತು. ಬೆಳೆ ಹಾನಿ ಮುಂದಿಟ್ಟು ಪ್ರತಿಭಟನೆಯನ್ನೂ ನಡೆಸಿತ್ತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ತಂಡ ಸವದತ್ತಿ, ರಾಮದುರ್ಗ ಭಾಗಗಳಲ್ಲಿ ಪರಿಶೀಲನೆ ನಡೆಸಿದಾಗ ರೈತರು ಒಣಗುತ್ತಿರುವ ಬೆಳೆ, ಮರುಬಿತ್ತನೆಯ ಹೊರೆ ಹಾಗೂ ಉತ್ಪಾದನೆ ಕುಸಿತದ ಆತಂಕವನ್ನು ವಿವರಿಸಿದ್ದರು. ಆದರೆ, ಈ ಭೇಟಿ ಮತ್ತು ರೈತರ ಮನವಿಗಳು ಸರ್ಕಾರದ ಅಂತಿಮ ಮೌಲ್ಯಮಾಪನದಲ್ಲಿ ಪ್ರತಿಫಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೇಂದ್ರದ ‘ಬರ ನಿರ್ವಹಣಾ ಕೈಪಿಡಿ–2020’ರ ಅನ್ವಯ ಮಳೆ ಕೊರತೆ, ಒಣ ಅವಧಿ, ಬಿತ್ತನೆ ಪ್ರಮಾಣ, ಉಪಗ್ರಹ ಆಧಾರಿತ ಸಸ್ಯ ಸೂಚ್ಯಂಕ, ಮಣ್ಣಿನ ತೇವಾಂಶ ಮತ್ತು ಜಲ ಪರಿಸ್ಥಿತಿಯನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗಿದೆ. ಅರ್ಹತೆ ಪಡೆದ 102 ತಾಲ್ಲೂಕುಗಳ 1,539 ಗ್ರಾಮಗಳಲ್ಲಿ ವಾಸ್ತವ ಪರಿಶೀಲನೆ ನಡೆಸಿ, ಅಂತಿಮವಾಗಿ 101 ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಈ ಮೊದಲ ಹಂತದಲ್ಲೇ ಬೆಳಗಾವಿಯ ತಾಲ್ಲೂಕುಗಳು ಏಕೆ ಅರ್ಹತೆ ಪಡೆಯಲಿಲ್ಲ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ.
ಇನ್ನೂ ತೆರೆದಿದೆ ಬಾಗಿಲು
ಮುಂಗಾರು ಅಂತ್ಯದವರೆಗೆ ಪರಿಸ್ಥಿತಿಯನ್ನು ವಾರಕ್ಕೊಮ್ಮೆ ಮರುಪರಿಶೀಲಿಸುವುದಾಗಿ ಸರ್ಕಾರ ಹೇಳಿದೆ. ಬೆಳೆ ಸ್ಥಿತಿ ಇನ್ನಷ್ಟು ಹದಗೆಟ್ಟು, ನಿಗದಿತ ಮಾನದಂಡಗಳಿಗೆ ಅರ್ಹವಾದರೆ ಹೆಚ್ಚುವರಿ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸುವ ಭರವಸೆಯನ್ನೂ ಆದೇಶದಲ್ಲಿ ನೀಡಲಾಗಿದೆ.
ಆದರೆ, ಬೆಳೆ ಈಗಾಗಲೇ ಬಾಡುತ್ತಿರುವಾಗ ಮುಂದಿನ ಪಟ್ಟಿಗಾಗಿ ಕಾಯಬೇಕೇ ಎಂಬುದು ರೈತರ ಪ್ರಶ್ನೆ. ತಕ್ಷಣ ಮರುಸಮೀಕ್ಷೆ ನಡೆಸಿ ಜಿಲ್ಲೆಯ ವಾಸ್ತವ ಬೆಳೆ ಹಾನಿಯನ್ನು ಸರ್ಕಾರದ ಮುಂದಿಡಬೇಕಾದ ಹೊಣೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಮೇಲಿದೆ. ಇಲ್ಲವಾದರೆ, ಹೊಲದಲ್ಲಿ ಬರ ಅನುಭವಿಸಿದ ರೈತ ಅಧಿಕೃತ ಕಡತದಲ್ಲಿ ಮಾತ್ರ ‘ಬರಮುಕ್ತ’ನಾಗಿಯೇ ಉಳಿಯಬೇಕಾಗುತ್ತದೆ.




Comments