;
top of page
< Back

ಸಿದ್ದು ಸುತ್ತ 100 ಶಾಸಕರ ಬಲಪ್ರದರ್ಶನ?

ಸಿದ್ದು ಸುತ್ತ 100 ಶಾಸಕರ ಬಲಪ್ರದರ್ಶನ?

Political

ದೆಹಲಿಯಲ್ಲಿ ಹೈಕಮಾಂಡ್ ಸರಣಿ ಸಭೆ; ನಾಯಕತ್ವ ಬದಲಾವಣೆ ಊಹಾಪೋಹ ತಳ್ಳಿ ಹಾಕಿದ ಕಾಂಗ್ರೆಸ್

ನವದೆಹಲಿ/:
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬೆಂಬಲದ ಸುಮಾರು 100 ಶಾಸಕರನ್ನು ಬುಧವಾರ ಬೆಂಗಳೂರಿನಲ್ಲಿ ಭೇಟಿಯಾಗಲು ನಿರ್ಧರಿಸಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಮಂಗಳವಾರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸರಣಿ ಸಭೆಗಳು ದಿನವಿಡೀ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಸಮಾಲೋಚಿಸಿದರು.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ನೀಡುವ ವಿಚಾರವೂ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಆದರೆ ಸಭೆಯ ಬಳಿಕ ಮಾತನಾಡಿದ ಕೆ.ಸಿ. ವೇಣುಗೋಪಾಲ್, ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದರು. “ಇದು ಮಾಧ್ಯಮಗಳ ಊಹಾಪೋಹ ಮಾತ್ರ. ಇಂದಿನ ಚರ್ಚೆ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಮಾತ್ರ ಸೀಮಿತವಾಗಿತ್ತು,” ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ “ಇಲ್ಲ, ಅದು ಕೇವಲ ಊಹಾಪೋಹ” ಎಂದು ಪ್ರತಿಕ್ರಿಯಿಸಿದರು. ಸಚಿವ ಸಂಪುಟ ಪುನಾರಚನೆ ವಿಚಾರವೂ ಚರ್ಚೆಗೆ ಬಂದಿಲ್ಲ ಎಂದು ಹೇಳಿದರು.
ಈ ನಡುವೆ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೊಸ ಮುಖ ನೀಡುವ ಸಾಧ್ಯತೆಯನ್ನೂ ಹೈಕಮಾಂಡ್ ಪರಿಶೀಲಿಸುತ್ತಿದೆ ಎನ್ನಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಹೊರತುಪಡಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವ ಎಂ.ಬಿ. ಪಾಟೀಲ್, ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಹೆಸರುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ಚರ್ಚೆಯಲ್ಲಿದ್ದರೂ, ವಯಸ್ಸಿನ ಅಂಶ ಪ್ರಮುಖ ಅಡ್ಡಿಯಾಗಿದೆ ಎನ್ನಲಾಗಿದೆ.

bottom of page