;
top of page
< Back

ಸಿಎಸ್ ಪತ್ರಕ್ಕೂ ಯುಡಿಯಲ್ಲಿ ಕಿಮ್ಮತ್ತಿಲ್ಲ

ಸಿಎಸ್ ಪತ್ರಕ್ಕೂ ಯುಡಿಯಲ್ಲಿ ಕಿಮ್ಮತ್ತಿಲ್ಲ

No VALUE FOR THE CS LETTER IN UD

ಸಿಎಸ್‌ ಪತ್ರಕ್ಕೂ ಯುಡಿಯಲ್ಲಿ ಕಿಮ್ಮತ್ತಿಲ್ಲವೇ?

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಠರಾವು:

ನಗರಾಭಿವೃದ್ಧಿ ಇಲಾಖೆಯಲ್ಲಿ ಮತ್ತೆ ಕಡತದ ಕಸರತ್ತು
ಮುಖ್ಯ ಕಾರ್ಯದರ್ಶಿಯ ಸೂಚನೆಯನ್ನೇ ಅತ್ತಿಂದಿತ್ತ ತಳ್ಳಿದ ಅಧಿಕಾರಿಗಳು;

ಸಾಮಾನ್ಯರ ಅರ್ಜಿಗಳ ಗತಿ ದೇವರಿಗೇ ಪ್ರೀತಿ!

(ಇ‌ ಬೆಳಗಾವಿ ವಿಶೇಷ)
ಬೆಳಗಾವಿ:
ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಸ್ಪಷ್ಟ ಸೂಚನೆಗೂ ನಗರಾಭಿವೃದ್ಧಿ ಇಲಾಖೆಯಲ್ಲಿ ಬೆಲೆ ಇಲ್ಲವೇ? ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಠರಾವನ್ನು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸುವ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆದಿದ್ದರೂ, ಆ ಪತ್ರವನ್ನೇ ಇಲಾಖೆ ಅತ್ತಿಂದಿತ್ತ ಕಳುಹಿಸಿ ಕಾಲಹರಣ ಮಾಡುತ್ತಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್ ಅವರು ಈ ಮಹತ್ವದ ವಿಷಯದ ಕುರಿತು ಸರ್ಕಾರಕ್ಕೆ ವರದಿ ಹಾಗೂ ಅಭಿಪ್ರಾಯ ಸಲ್ಲಿಸಿದ್ದರು. ವಿಷಯದ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಮನಗಂಡ ಮುಖ್ಯ ಕಾರ್ಯದರ್ಶಿಯವರು, ನಗರಾಭಿವೃದ್ಧಿ ಇಲಾಖೆಯು ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು.
ಆದರೆ, ಆ ಸೂಚನೆಯ ನಂತರವೂ ಪರಿಣಾಮಕಾರಿ ಕ್ರಮ ಕಾಣಿಸಿಕೊಂಡಿಲ್ಲ. ಬೆಳಗಾವಿ ಮಹಾನಗರ ಪಾಲಿಕೆಗೆ ಸ್ಪಷ್ಟ ನಿರ್ದೇಶನ ನೀಡುವ ಬದಲು, ಪತ್ರವನ್ನು ವಿಭಾಗದಿಂದ ವಿಭಾಗಕ್ಕೆ, ಅಧಿಕಾರಿಯಿಂದ ಅಧಿಕಾರಿಗೆ ರವಾನಿಸುವುದೇ ಇಲಾಖೆಯ ಕೆಲಸವಾಗಿದೆಯೇ ಎಂಬ ಪ್ರಶ್ನೆ ಈಗ ಎದ್ದಿದೆ.
ಯುಡಿ‌ಯ ಆಧೀನ ಕಾರ್ಯದರ್ಶಿ ನಾಗೇಶ ಎಂಬುವರನ್ನು ಕೇಳಿದರೆ ನೋಡೊಣ, ನಾನು ಸಭೆಯಲ್ಲಿದ್ದೇನೆ ಎನ್ನುವ ಹಾರಿಕೆ ಉತ್ತರ ಕೊಡುತ್ತಾರೆ. ಇನ್ನು ಕಾವೇರಿ ಮೇಡಂ ಅವರು ಎಲ್ಕವನ್ನು ಅಧೀನ ಅಧಿಕಾರಿಗಳ ಮೇಲೆ ಭಾರ ಹಾಕಿ ಕುಳಿತಿದ್ಸಾರೆ.

ಇದು ಕೇವಲ ಒಂದು ಠರಾವಿನ ಪ್ರಶ್ನೆಯಲ್ಲ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ರಾಜ್ಯದ ನಿಲುವು, ಕನ್ನಡಿಗರ ಸ್ವಾಭಿಮಾನ ಮತ್ತು ಗಡಿ ಭಾಗದ ಜನರ ಭಾವನೆಗೆ ಸಂಬಂಧಿಸಿದ ವಿಚಾರ.
ಇಂತಹ ವಿಷಯದಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳಬೇಕಾದ ನಗರಾಭಿವೃದ್ಧಿ ಇಲಾಖೆ, ಕಡತ ತಿರುಗಿಸುವ ಹಳೆಯ ಚಾಳಿಯನ್ನು ಮುಂದುವರಿಸಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಖುದ್ದು ರಾಜ್ಯದ ಆಡಳಿತ ಮುಖ್ಯಸ್ಥರಾದ ಮುಖ್ಯ ಕಾರ್ಯದರ್ಶಿಯವರ ಪತ್ರಕ್ಕೇ ಈ ಸ್ಥಿತಿ ಬಂದಿದ್ದರೆ, ಸಾಮಾನ್ಯ ನಾಗರಿಕನು ಸಲ್ಲಿಸುವ ಅರ್ಜಿ, ಮನವಿ ಮತ್ತು ದೂರುಗಳಿಗೆ ಅಧಿಕಾರಿಗಳು ಎಷ್ಟು ಬೆಲೆ ನೀಡಬಹುದು ಎಂಬುದನ್ನು ಊಹಿಸುವುದು ಕಷ್ಟವಲ್ಲ. ಅಧಿಕಾರಿಗಳ ಮೇಜಿನ ಮೇಲೆ ಕಡತ ಧೂಳು ತಿನ್ನುವುದೇ ಆಡಳಿತವೇ? ಪತ್ರವನ್ನು ಮತ್ತೊಂದು ಇಲಾಖೆಗೆ ತಳ್ಳುವುದೇ ಕ್ರಮವೇ?.
ಸರ್ಕಾರದ ಉನ್ನತ ಅಧಿಕಾರಿಯ ಸೂಚನೆಯನ್ನು ಪಾಲಿಸದವರ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸಬೇಕಿದೆ. ನಗರಾಭಿವೃದ್ಧಿ ಇಲಾಖೆ ಇನ್ನಾದರೂ ನಿದ್ದೆಯಿಂದ ಎದ್ದು, ಬೆಳಗಾವಿ ಮಹಾನಗರ ಪಾಲಿಕೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಇಲ್ಲವಾದರೆ, ಕನ್ನಡದ ಅಸ್ಮಿತೆಯ ವಿಷಯದಲ್ಲೂ ಅಧಿಕಾರಶಾಹಿಯೇ ಸರ್ಕಾರಕ್ಕಿಂತ ಬಲಿಷ್ಠವಾಗಿದೆ ಎಂಬ ಸಂದೇಶ ರವಾನೆಯಾಗಲಿದೆ.


ಪತ್ರಕ್ಕೆ ಪತ್ರವೇ ಉತ್ತರ!

ನ್ಯಾಯಮೂರ್ತಿಗಳ ವರದಿ ಬಂತು. ಮುಖ್ಯ ಕಾರ್ಯದರ್ಶಿಯವರ ಪತ್ರವೂ ಬಂತು. ಆದರೆ, ನಗರಾಭಿವೃದ್ಧಿ ಇಲಾಖೆಯಿಂದ ಮಾತ್ರ ಸ್ಪಷ್ಟ ಆದೇಶ ಬಂದಿಲ್ಲ. ಒಂದು ಪತ್ರವನ್ನು ಮತ್ತೊಂದು ವಿಭಾಗಕ್ಕೆ ಕಳುಹಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿಯಿಂದ ಗಂಭೀರ ವಿಷಯವೊಂದನ್ನು ಉದ್ದೇಶ ಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಜನರ ಪ್ರಶ್ನೆ

ಮುಖ್ಯ ಕಾರ್ಯದರ್ಶಿಯ ಪತ್ರವನ್ನೇ ಪಾಲಿಸದ ಅಧಿಕಾರಿಗಳು ಸಾಮಾನ್ಯ ಜನರ ಅಹವಾಲುಗಳಿಗೆ ಸ್ಪಂದಿಸುವರೇ?

bottom of page